Advertisement
ಚಿತ್ರರಂಗಕ್ಕೆ ಕಾಲಿಟ್ಟಾಗ, ನಿಮಗೆ ಎದುರಾದ ಸವಾಲುಗಳೇನು?ನಾನು ನಟನೆ, ನೃತ್ಯ ಏನೇ ಕಲಿತಿದ್ದರೂ ಅದು ಸಿನಿಮಾಗಳಿಂದಲೇ. ಅಭಿನಯ ಕಲಿಯಲು ಯಾವ ಕ್ಲಾಸ್‌ಗೂ ಹೋಗಿಲ್ಲ. ಎಲ್ಲವನ್ನೂ ಅನುಭವದಿಂದಲೇ ಕಲಿತೆ. ಅದಕ್ಕೆ ಸರಿಯಾಗಿ ಒಳ್ಳೆಯ ಪಾತ್ರಗಳೇ ಸಿಕ್ಕಿವೆ. ಈವರೆಗೂ 37 ಚಿತ್ರಗಳಲ್ಲಿ ನಟಿಸಿದ್ದೇನೆ. 7 ಚಿತ್ರಗಳು ಬಿಡುಗಡೆಗೆ ಬಾಕಿ ಇವೆ. ಗ್ಲಾಮರ್ ರೋಲ್‌ಗೆ ನಾನು ಬ್ರಾಂಡ್ ಆಗಲಿಲ್ಲ. ಎಲ್ಲಾ ಥರದ ಪಾತ್ರಗಳನ್ನೂ ಆಯ್ಕೆ ಮಾಡಿಕೊಂಡಿದ್ದೇನೆ. ಪಾತ್ರವನ್ನು ಜೀವಿಸಬೇಕು ಎಂದು ನಾನು ಕಂಡುಕೊಂಡೆ. ನಾನು ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಸಾಮಾಜಿಕ ಜಾಲತಾಣ ಈ ಮಟ್ಟಿಗೆ ಬೆಳೆದಿರಲಿಲ್ಲ. ಈಗ ಸಾಮಾಜಿಕ ಜಾಲತಾಣ ಹೊಸ ನಟಿಯರು ಬೆಳಕಿಗೆ ಬರಲು ಉತ್ತಮ ವೇದಿಕೆ ಒದಗಿಸುತ್ತಿದೆ.
ನಾನು ಮಾಡುತ್ತಿರುವ ಪಾತ್ರಗಳೆಲ್ಲಾ ವೈವಿಧ್ಯಮಯ ಪಾತ್ರಗಳೇ. ಕಲಾವಿದೆಯಾಗಿ ಒಂದೇ ರೀತಿಯ ಪಾತ್ರಗಳಿಗೆ ಅಂಟಿಕೊಳ್ಳಲು ಇಷ್ಟವಿಲ್ಲ. ಈಗ ಬಿಡುಗಡೆಯಾಗುತ್ತಿರುವ “ಸೂಜಿದಾರ’, “ಕನ್ನಡ್ ಗೊತ್ತಿಲ್ಲ’, “ಎಲ್ಲಿದ್ದೆ ಇಲ್ಲಿ ತನಕ’ ಎಲ್ಲವೂ ವಿಶೇಷವಾಗಿರುವ ಪಾತ್ರಗಳೇ. ನಾನು ಆರಿಸಿಕೊಂಡಿರುವ ಎಲ್ಲಾ ಪಾತ್ರಗಳ ಬಗ್ಗೆಯೂ ನನಗೆ ಖುಷಿ ಇದೆ.
ತೂಕದ ಬಗ್ಗೆ ನಿಮಗೂ ಟೀಕೆಗಳು ಎದುರಾಗುತ್ತವೆಯಾ? ಇಂಥ ಟೀಕೆಗಳನ್ನು ಹೇಗೆ ಎದುರಿಸುತ್ತೀರಿ?
ಬಾಡಿ ಶೇಮಿಂಗ್ ಎಂಬುದು ಸಾಮಾನ್ಯರನ್ನಷ್ಟೇ ಅಲ್ಲ, ನಟಿಯಾಗಿ ನಾನೂ ಇದನ್ನು ಎದುರಿಸಿದ್ದೇನೆ. ನಾನು ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ತುಂಬ ಸಣ್ಣಗಿದ್ದೆ. ಆಗ ಎಲ್ಲರೂ ನನ್ನನ್ನು ಸಣ್ಣ ಇದ್ದೇನೆ ಎಂದು ಹೀಗಳೆದರು. ಸ್ವಲ್ಪ ದಪ್ಪಗಾದೆ. “ಇಷ್ಟು ದಪ್ಪಗಿದ್ದರೆ ಹೇಗೆ?’ ಎಂದರು. ಅದು ಈಗಲೂ ಮುಂದುವರಿದಿದೆ. ಜನರ ಮನಃಸ್ಥಿತಿ ಹೇಗಿರುತ್ತದೆಂದರೆ, ಅವರು ನಮ್ಮಲ್ಲಿರುವ ನ್ಯೂನತೆಯನ್ನು ಪತ್ತೆ ಮಾಡಿ ಆ ಮೂಲಕ ನಮ್ಮ ಸ್ಥೈರ್ಯ ಕೆಡಿಸಲು ಯತ್ನಿಸುತ್ತಿರುತ್ತಾರೆ.
Related Articles
Advertisement
ನಿಮ್ಮ ಡಯೆಟ್, ವರ್ಕೌಟ್ ಹೇಗಿರುತ್ತದೆ?ಆಹಾರ ಮತ್ತು ಕ್ಯಾಲೊರಿಗಳ ಬಗ್ಗೆ ಸರಿಯಾದ ತಿಳಿವಳಿಕೆಯಿದ್ದರೆ, ಅರ್ಧ ತೂಕ ಅಲ್ಲೇ ಕಳಕೊಳ್ಳಬಹುದು. ಹಣ್ಣುಗಳು ಜೀರ್ಣವಾಗಲು ಒಂದೂವರೆ ಗಂಟೆ ಬೇಕು. ಸೊಪ್ಪು ತರಕಾರಿ ಜೀರ್ಣವಾಗಲು 16 ಗಂಟೆ ಬೇಕು. ನಾನ್ ವೆಜ್ ಜೀರ್ಣ ಆಗಲು 48 ಗಂಟೆಗಳು ಬೇಕು. ನಾವು ಹಣ್ಣು ತರಕಾರಿಗಳೆಲ್ಲ ಬೇಗ ಜೀರ್ಣವಾಗುತ್ತದೆ ಅಂತ ತಿಳಿದಿರುತ್ತೇವೆ. ಪ್ರತಿ ಆಹಾರದ ನಂತರ ಇಂತಿಷ್ಟು ಗ್ಯಾಪ್ ಅಂತ ಕೊಡಲೇಬೇಕು. ಏನೇ ತಿಂದರೂ ಮಿತಿಯಲ್ಲಿ ತಿನ್ನಬೇಕು. ಇನ್ನು ವರ್ಕೌಟ್ ವಿಷಯಕ್ಕೆ ಬಂದರೆ, ವರ್ಕೌಟ್ ಪ್ರತಿಯೊಬ್ಬರಿಗೂ ಕಡ್ಡಾಯ. ನಾವು ಮನೆಯಲ್ಲಿ ಕೆಲಸ ಮಾಡುತ್ತೇವೆ ನಮಗೆ ವ್ಯಾಯಾಮದ ಅಗತ್ಯವಿಲ್ಲ ಎಂದು ಹಲವರು ತಿಳಿದಿರುತ್ತಾರೆ. ಅದು ಶುದ್ಧ ತಪ್ಪು. ಕೆಲಸದಿಂದ ನಿಮಗೆ ಸುಸ್ತಾಗುತ್ತದೆ. ಆದರೆ, ವರ್ಕೌಟ್ ಮಾಡುವುದರಿಂದ ತೂಕ ಇಳಿಯುತ್ತದೆ ಮತ್ತು ದೇಹ ಗಟ್ಟಿಯಾಗುತ್ತದೆ. ಅದಕ್ಕಾಗಿ ಜಿಮ್‌ಗೇ ಹೋಗಬೇಕೆಂದಿಲ್ಲ. ಮನೆಯಲ್ಲಿ 20 ನಿಮಷ ಸೂರ್ಯ ನಮಸ್ಕಾರ ಮಾಡಿದರೂ ಸಾಕು. ನಾನು ಒಂದೇ ರೀತಿಯ ವರ್ಕೌಟ್ ಅನ್ನು ಫಾಲೋ ಮಾಡುವುದಿಲ್ಲ. ಜಿಮ್, ಡ್ಯಾನ್ಸ್, ಬ್ಯಾಡ್ಮಿಂಟನ್- ಹೀಗೆ ಬದಲಾವಣೆ ಮಾಡಿಕೊಳ್ಳುತ್ತಿರುತ್ತೇನೆ. ಎಷ್ಟೇ ಬ್ಯುಸಿ ಇದ್ದರೂ ಸೂರ್ಯ ನಮಸ್ಕಾರ ತಪ್ಪಿಸುವುದಿಲ್ಲ.
ಫ್ಯಾನ್ಸ್ ಜೊತೆ ಸಂಪರ್ಕ ಇರಿಸಿಕೊಂಡಿರುತ್ತೀರ?
ಫ್ಯಾನ್ಸ್ ಜೊತೆ ಫೇಸ್‌ಬುಕ್‌ನಲ್ಲಿ ಸಂಭಾಷಿಸುತ್ತೇನೆ. ಅವರ ಕಮೆಂಟ್‌ಗಳಿಗೆ ಖುದ್ದು ನಾನೇ ಉತ್ತರಿಸುತ್ತೇನೆ. ಹೊರಗೆ ಹೋದಾಗ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುತ್ತಾರೆ. ನನಗೆ ಅದು ಯಾವತ್ತೂ ಖುಷಿ ಕೊಡುವ ವಿಚಾರ. ಆದರೆ, ನನ್ನ ಜೊತೆ ಬಂದಿರುತ್ತಾರಲ್ಲ; ಅವರಿಗೆ ಅದು ಕಿರಿಕಿರಿಯಾಗುತ್ತದೆ. ಅಡುಗೆ ಮಾಡುವ ಅಭ್ಯಾಸ ಇದೆಯೇ?
ಬಿಡುವಿದ್ದರೆ ಅಡುಗೆ ಮಾಡುತ್ತೇನೆ. ಹೊಸ ಹೊಸ ಪ್ರಯೋಗಗಳನ್ನು ಮಾಡುವುದು ನನಗೆ ಇಷ್ಟ. ಕಾಂಟಿನೆಂಟಲ್ ಫುಡ್ ಹೆಚ್ಚಾಗಿ ತಯಾರಿಸುತ್ತೇನೆ. ಹೆಚ್ಚಾಗಿ ಯೂಟ್ಯೂಬ್ ನೋಡಿಕೊಂಡು ಅಡುಗೆ ಮಾಡುತ್ತೇನೆ. ಚಿಕ್ಕಪುಟ್ಟ ಅನುಮಾನ ಬಂದರೆ ಅಮ್ಮನನ್ನು ಕೇಳುತ್ತೇನೆ. ತುಂಬಾ ಟ್ರಿಪ್ ಹೊಡೀತೀರಾ?
ಪ್ರವಾಸ ನನ್ನ ನೆಚ್ಚಿನ ಹವ್ಯಾಸ. ದೇಶವನ್ನೂ ಸುತ್ತಿದ್ದೇನೆ, ವಿದೇಶಗಳನ್ನೂ ಬಿಟ್ಟಿಲ್ಲ. ಇಷ್ಟವಾದ ಜಾಗಗಳಿಗೆ ಮತ್ತೆಮತ್ತೆ ಹೋಗೋದೂ ಒಂದು ಖುಷಿ. ಇಟಲಿ, ಸ್ಲೊವೇನಿಯಾ, ದುಬೈಗೆ ಹೋಗಿದ್ದೇನೆ. ಬ್ಯಾಂಕಾಕ್, ಮಲೇಷ್ಯಾ ದೇಶಗಳಿಗೆ 2-3 ಬಾರಿ ಹೋಗಿದ್ದೇನೆ. ಇಡೀ ದೇಶ ಸುತ್ತಬೇಕು ಎಂಬ ಆಸೆ ಇದೆ. ಆಸೆ ಈಡೇರಿಸಿಕೊಳ್ಳುತ್ತೇನೆ ಕೂಡ. ಅಮ್ಮ ನನ್ನ ಅತ್ಯುತ್ತಮ ಪ್ರವಾಸ ಸಂಗಾತಿ. ಸ್ನೇಹಿತರ ಜೊತೆಯೂ ಪ್ರವಾಸ ಹೋಗುತ್ತೇನೆ. ನಿಮ್ಮ ಶಾಪಿಂಗ್ ಪಾಯಿಂಟ್ ಯಾವುದು? ವಸ್ತ್ರ ವಿನ್ಯಾಸದ ಕುರಿತ ನಿಮ್ಮ ಅಭಿರುಚಿ ಏನು?
ಈಗೆಲ್ಲಾ ಹೆಚ್ಚಾಗಿ ಆನ್‌ಲೈನ್ ಶಾಪಿಂಗ್ ಅನ್ನೇ ನೆಚ್ಚಿಕೊಂಡಿದ್ದೇನೆ. ವಿದೇಶಗಳಿಗೆ ಹೋದಾಗ ಅಲ್ಲಿ ಶಾಪಿಂಗ್ ಮಾಡುತ್ತೇನೆ. ವಸ್ತ್ರವಿನ್ಯಾಸ ನನ್ನ ನೆಚ್ಚಿನ ಹವ್ಯಾಸ. ಪ್ರಸ್‌ಮೀಟ್‌ಗಳಿಗೆ, ಖಾಸಗಿ ಕಾರ್ಯಕ್ರಮಗಳಿಗೆ ನಾನು ಹಾಕುವ ಡ್ರೆಸ್‌ಗಳನ್ನು ಹೆಚ್ಚಾಗಿ ನಾನೇ ವಿನ್ಯಾಸ ಮಾಡುತ್ತೇನೆ. ಸಿನಿಮಾ ಶೂಟಿಂಗ್ ಆರಂಭಕ್ಕೂ ಮುನ್ನ ನಿರ್ದೇಶಕರ ಜೊತೆ ಲುಕ್ ಬಗ್ಗೆ ಚರ್ಚಿಸಿ, ನನ್ನ ವಸ್ತ್ರ ವಿನ್ಯಾಸಕರು ಮತ್ತು ಮೇಕಪ್ ಆರ್ಟಿಸ್ಟ್ ಗಳಿಗೆ ಹೇಳಿ, ಅವರು ಬಯಸಿದ ಲುಕ್ ಅನ್ನು ಕೊಡುತ್ತೇನೆ. ಸಾರ್ವಜನಿಕ ಬದುಕಿನಲ್ಲಿ ನಾನು ತುಂಬಾ ಸಿಂಪಲ್ ಹುಡುಗಿ. ಮನೆಯಲ್ಲಿ ಪೈಜಾಮಾ ಟೀಶರ್ಟ್ ಹಾಕಿಕೊಂಡು ಕಾಲ ಕಳೆಯುತ್ತೇನೆ. ಹೊರಗೆಲ್ಲಾದರೂ ಹೋಗುವುದಿದ್ದರೆ, ತೀರಾ ಸರಳವಾಗಿಯೇ ಹೋಗುತ್ತೇನೆ. ಸರಳವಾಗಿದ್ದಷ್ಟೂ ನಾನು ಕಂಫರ್ಟೆಬಲ್. ಕಾಲೇಜ್ ಲೈಫು ಮಿಸ್ ಮಾಡ್ಕೊಂಡೆ…
16ನೇ ವಯಸ್ಸಿನಲ್ಲಿ ಅಚಾನಕ್ಕಾಗಿ ಚಿತ್ರರಂಗಕ್ಕೆ ಬಂದವಳು ನಾನು. ಸಿಕ್ಕಿರುವ ಅವಕಾಶ ಕೈಬಿಡುವುದು ಬೇಡ, ಒಂದು ಸಿನಿಮಾ ಮಾಡಿ ಶಿಕ್ಷಣ ಮುಂದುವರಿಸೋಣ ಅಂತಿದ್ದೆ. ಆದರೆ, ಮೇಲಿಂದ ಮೇಲೆ ಅವಕಾಶಗಳು ಸಿಕ್ಕವು. ಬಿಡುವು ಸಿಕ್ಕಾಗ ಮಾತ್ರ ಕಾಲೇಜಿನ ಕಡೆ ಮುಖ ಮಾಡುವಂಥ ಪರಿಸ್ಥಿತಿ ಬಂತು. ಚಿಕ್ಕ ವಯಸ್ಸಿನಲ್ಲೇ ವೃತ್ತಿ ಆರಂಭಿಸಿದ್ದರಿಂದ. ಕಾಲೇಜು ಹುಡುಗಿಯ ಮುಗ್ಧತೆ, ಎಂಜಾಯ್ಮೆಂಟ್ ಎಲ್ಲವನ್ನೂ ಮಿಸ್ ಮಾಡಿಕೊಂಡಿದ್ದೇನೆ. ಆದರೆ, ಬದುಕಿನ ಪಾಠವನ್ನು ಚಿತ್ರರಂಗ ಕಲಿಸಿದೆ. ಇಡೀ ಜನ್ಮಕ್ಕಾಗುವ ಶಿಕ್ಷಣ, ಅನುಭವವನ್ನು ನಾನು ಇಲ್ಲಿ ಪಡೆದಿದ್ದೇನೆ. ನಮ್ಮನೆ ನಾಯಿ ಬರ್ತ್ ಡೇ ಆಚರಿಸ್ತೀವಿ…
ನನಗೆ ನಾಯಿಗಳೆಂದರೆ ಬಹಳ ಇಷ್ಟ. ನಮ್ಮ ಮನೆಯಲ್ಲಿ ಎರಡು ನಾಯಿಗಳಿವೆ. ಅವೆರಡೂ ನಮಗೆ ಮಕ್ಕಳಿದ್ದಂತೆ. ದೊಡ್ಡವ ಲಕ್ಕಿ. ಅವನಿಗೆ ಐದೂವರೆ ವರ್ಷ. ಅವನು ಗೋಲ್ಡನ್ ರಿಟ್ರೀವರ್. ಚಿಕ್ಕವನು ಹ್ಯಾಪಿ. ಅವನಿಗೆ ಮೂರೂವರೆ ವರ್ಷ. ಅವನು ಷಿಟ್ಜ . ಇಬ್ಬರ ಬರ್ತ್‌ಡೇ ಕೂಡಾ ಡಿ.6! ಆ ದಿನ ಸ್ನೇಹಿತರನ್ನು, ಸಂಬಂಧಿಗಳನ್ನು ಕರೆದು ಅವರ ಹುಟ್ಟುಹಬ್ಬ ಆಚರಿಸುತ್ತೇವೆ. ಅವರೂ ನಮ್ಮ ಇರುವಿಕೆ ನಿರೀಕ್ಷಿಸುತ್ತಾರೆ. ಮನೆಯಲ್ಲಿ ಇರುವಷ್ಟು ಹೊತ್ತೂ ಅವು ನನ್ನ ಹಿಂದೆ ಮುಂದೆನೇ ಸುತ್ತುತ್ತಿರುತ್ತೆ. ಮಕ್ಕಳ ಥರ ನಮ್ಮ ಕೈತುತ್ತು ತಿನ್ನುತ್ತವೆ. ನಾನು ಶೂಟಿಂಗ್‌ಗೆ ಬೇರೆ ಊರಿಗೆ ಹೊರಡುವಾಗ ಲಗ್ಗೇಜ್ ಪ್ಯಾಕ್ ಮಾಡುವಾಗಲೇ ಅವಕ್ಕೆ ತಿಳಿಯುತ್ತದೆ, ನಾನು ಅವರನ್ನು ಬಿಟ್ಟು ಎಲ್ಲೋ ಹೋಗುತ್ತಿದ್ದೇನೆ ಅಂತ. ಆಗ ಹ್ಯಾಪಿ ಪಕ್ಕ ಕೂತು ಅಳಲು ಆರಂಭಿಸುತ್ತಾನೆ. ದೇವರು ಅವಕ್ಕೆ ನಮ್ಮಂತೆ ಮಾತು ಕೊಟ್ಟಿಲ್ಲದಿರಬಹುದು, ಆದರೆ, ಮನುಷ್ಯರಿಗಿಂತ ಒಳ್ಳೆಯ ಮನಸ್ಸು ಕೊಟ್ಟಿದ್ದಾನೆ.
ಅಮ್ಮನೇ ನನ್ನ ಆಲ್‌ಟೈಮ್ ಬೆಸ್ಟ್‌ಫ್ರೆಂಡ್
ನಾನು ಯಾರ ಜೊತೆನೂ ಬೇಗ ಮಿಂಗಲ್ ಆಗಲ್ಲ. ಯಾರಾದರೂ ಫ್ರೆಂಡ್ ಆದರೆ ಅವರನ್ನು ಜೀವನ ಪೂರ್ತಿ ಮರೆಯುವುದಿಲ್ಲ. ಚಿಕ್ಕ ಮಗು ಇದ್ದಾಗಿನಿಂದಲೂ ನಾನು ಅಮ್ಮನನ್ನು ಬೆಸ್ಟ್ ಫ್ರೆಂಡ್ ಥರಾನೇ ನೋಡಿದ್ದೀನಿ. ಚಿತ್ರರಂಗಕ್ಕೆ ಬಂದಾಗ ನನಗೆ ಕೇವಲ 16 ವರ್ಷ ವಯಸ್ಸು. ಆಗ ನನ್ನ ಜೊತೆ ಇದ್ದು ನನಗೆ ಮಾರ್ಗದರ್ಶನ, ಸ್ಫೂರ್ತಿ ನೀಡಿದ್ದು ಅಮ್ಮ. ನನ್ನ ವೃತ್ತಿ ಜೀವನದ ಪ್ರತಿಯೊಂದು ನಿರ್ಧಾರವನ್ನೂ ನಾನೂ, ಅಮ್ಮ ಒಟ್ಟಿಗೇ ಕೂತು ಚರ್ಚಿಸಿ ನಿರ್ಧರಿಸಿದ್ದೇವೆ. ಈಗಲೂ ಅಮ್ಮ ನನ್ನ ಜೊತೆ ಶೂಟಿಂಗ್‌ಗೆ ಬರುತ್ತಾರೆ. ನನ್ನ ಬೇಕು- ಬೇಡಗಳನ್ನು ಚಾಚೂ ತಪ್ಪದೇ ನೋಡಿಕೊಳ್ಳುತ್ತಾರೆ. ನಾನು ಜೀವನದಲ್ಲಿ ಯಾರಿಗಾದರೂ ಧನ್ಯವಾದ ಹೇಳುವುದಿದ್ದರೆ ಅದು ನನ್ನ ಅಮ್ಮನಿಗೆ ಮಾತ್ರ.