“ನನಗೆ ಚಿಕ್ಕಂದಿನಿಂದಲೂ ಸಿನಿಮಾ ಹುಚ್ಚು. ಐದು ಸಾವಿರ ಜೇಬಲ್ಲಿಟ್ಟುಕೊಂಡು ಆ ದಿನಗಳಲ್ಲೇ ಮದ್ರಾಸ್‌ಗೆ ಹೋಗಿದ್ದೆ. ಹೋದವನಿಗೆ ಪರಿಚಯವಾದ ನಾಲ್ಕೈದು ಮಂದಿ ಮಾತು ನಂಬಿದವನಿಗೆ ಸಮಸ್ಯೆಯೂ ಆಯ್ತು. ಬಳಿಕ ಅವರ್ಯಾರೂ ಪತ್ತೆ ಇಲ್ಲ. ಅತ್ತ ಸಿನಿಮಾ ಆಸೆ ಹಾಗೆಯೇ ಇತ್ತು. ಆ ಆಸೆ ಈಗ ಮಗ ಆರ್ಯವರ್ಧನ್ ಮೂಲಕ ಈಡೇರಿದೆ’ – ಹೀಗೆ ಹೇಳುತ್ತಾ ಹೋದರು ನಿರ್ಮಾಪಕ ಶ್ರೀನಿವಾಸ್.
ಅವರು ಹೇಳಿದ್ದು, “ಖನನ’ ಚಿತ್ರದ ಮಾತುಕತೆಯಲ್ಲಿ. ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿರುವ ಶ್ರೀನಿವಾಸ್, ತಮ್ಮ ಪುತ್ರ ಆರ್ಯವರ್ಧನ್ ಅವರನ್ನು “ಖನನ’ ಚಿತ್ರದ ಮೂಲಕ ಹೀರೋ ಮಾಡಿ ತಮ್ಮ ಸಿನಿಮಾ ಆಸೆ ಈಡೇರಿಸಿಕೊಂಡ ಖುಷಿ. ಮೇ. 10 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವ ಕುರಿತು ಹೇಳಿಕೊಂಡ ಶ್ರೀನಿವಾಸ್, “ಇಷ್ಟಪಟ್ಟು ಮಾಡಿದ ಸಿನಿಮಾ. ಎಲ್ಲರೂ ಹಂಡ್ರೆಡ್ ಪರ್ಸೆಂಟ್ ಎಫರ್ಟ್ ಹಾಕಿದ್ದಾರೆ. ಹೊಸಬರ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ’ ಎಂದರು ಶ್ರೀನಿವಾಸ್.
ನಿರ್ದೇಶಕ ರಾಧ ಅವರಿಗೆ ಇದು ಮೊದಲ ಚಿತ್ರ. “ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಎಲ್ಲಾ ಅಂಶಗಳೂ ಇವೆ. ನಾಯಕನಿಗೆ ಇಲ್ಲಿ ಐದು ಶೇಡ್‌ಗಳಿವೆ. ಒಂದೊಂದೊ ಶೇಡ್ ಕೂಡ ವಿಭಿನ್ನವಾಗಿದೆ. ತಾಂತ್ರಿಕತೆ ಇಲ್ಲಿ ಹೆಚ್ಚು ಗಮನ ಸೆಳೆಯಲಿದೆ. ಎಲ್ಲೂ ಕಾಂಪ್ರಮೈಸ್ ಆಗದೆ, ಚಿತ್ರ ಮಾಡಿದ್ದೇವೆ. ನೋಡುಗರ ತಾಳ್ಮೆಯನ್ನು ಮನಸ್ಸಲ್ಲಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಅಮೆರಿಕಾದಿಂದ ಇಂಡಿಯಾಗೆ ಬರುವ ನಾಯಕನಲ್ಲಿ ಕೆಲ ಬದಲಾವಣೆಗಳಾಗುತ್ತವೆ. ಆ ಬದಲಾವಣೆಗಳೇ ಚಿತ್ರದ ಹೈಲೈಟ್. ಇಲ್ಲಿ ನಾಯಿ ಕೂಡ ಪ್ರಮುಖ ಪಾತ್ರ ವಹಿಸಿದೆ. ಅದರ ಪಾತ್ರ ಹೇಗಿದೆ ಎಂಬುದಕ್ಕೆ ಸಿನಿಮಾ ನೋಡಬೇಕು’ ಎಂದರು ನಿರ್ದೇಶಕ ರಾಧ.
ನಾಯಕ ಆರ್ಯವರ್ಧನ್ ಅವರಿಗೆ ಇದು ನಾಯಕರಾಗಿ ಮೊದಲ ಚಿತ್ರ. ಈ ಹಿಂದೆ “ಮಾರ್ಚ್ 22′ ಚಿತ್ರದಲ್ಲಿ ನಟಿಸಿದ್ದರೂ, ಅವರಿಗೆ ಇದೊಂದು ಹೊಸ ಅನುಭವ ಕಟ್ಟಿಕೊಟ್ಟಿದೆಯಂತೆ. ಈ ಸಿನಿಮಾ ಮೂಲಕ ಜೀವನದ ಪಾಠ ಕಲಿತಿದ್ದೇನೆ ಎನ್ನುವ ಆರ್ಯವರ್ಧನ್, ನಂಬಿಕೆ, ವಿಶ್ವಾಸ, ಪ್ರೀತಿ ಇವೆಲ್ಲವುಗಳಿಗಿಂತ ಮನುಷ್ಯನಿಗೆ ಮುಖ್ಯವಾಗಿ ಬದುಕಲ್ಲಿ ಬೇಕಿರುವುದು ಸ್ವಾತಂತ್ರ್ಯ. ಆ ವಿಷಯ ಇಲ್ಲಿ ಮುಖ್ಯವಾಗಿದೆ. ಇಲ್ಲಿ ಮನರಂಜನೆ ಇದೆ, ಪ್ರೀತಿ ಇದೆ, ದ್ವೇಷವಿದೆ, ಮೋಸವೂ ಇದೆ. ಅದರಾಚೆಗೆ ಹೊಸ ವಿಷಯಗಳೂ ಇವೆ’ ಎಂದು ವಿವರ ಕೊಡುತ್ತಾರೆ ಆರ್ಯವರ್ಧನ್.
ನಾಯಕಿ ಕರಿಷ್ಮಾ ಬರುಹ ಅವರಿಗೆ ಇದು ಮೊದಲ ಸಿನಿಮಾ. ಅಸ್ಸಾಂ ಮೂಲದ ಕರಿಷ್ಮಾ ಅವರಿಗೆ ಕಥೆ, ಪಾತ್ರ ಹೊಸದಾಗಿದೆ ಅಂತ ಅನಿಸಿದ್ದೇ ತಡ, ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟರಂತೆ. ಇಲ್ಲಿ ಸಾಕಷ್ಟು ಏರಿಳಿತಗಳಿವೆ. ಅದೇ ಸಿನಿಮಾದ ಪ್ಲಸ್ ಪಾಯಿಂಟ್. ಭಾಷೆ ಬರದ ನನಗೆ, ಇಡೀ ಚಿತ್ರತಂಡ ಎಲ್ಲವನ್ನೂ ತಿಳಿಹೇಳಿಕೊಟ್ಟು ಮಾಡಿಸಿದ್ದಾರೆ ಎಂಬುದು ಅವರ ಮಾತು.
ಇನ್ನು ಯುವ ಕಿಶೋರ್ ಇಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದ್ದಾರಂತೆ. ಒಂದು ರೀತಿಯ ಸೈಲೆಂಟ್ ಕಿಲ್ಲರ್ ಪಾತ್ರ ಎಂಬುದು ಅವರ ಹೇಳಿಕೆ. ಮಹೇಶ್ ಸಿದ್ದು, ಕಾಸ್ಟ್ಯೂಮ್ ಡಿಸೈನರ್ ರಂಜಿತಾ, ನಾರಾಯಣ್ ಸೇರಿದಂತೆ ಹಲವರು ಮಾತಾಡಿದರು. ಚಿತ್ರಕ್ಕೆ ರಮೇಶ್ ತಿರುಪತಿ ಕ್ಯಾಮೆರಾ ಹಿಡಿದರೆ, ಕುನ್ನಿ ಗುಡಿಪಾಟಿ ಸಂಗೀತವಿದೆ.