Advertisement

ಪಿಲಿಕುಳದಲ್ಲಿ ವೀಕ್ಷಣೆಗೆ ವಿಶೇಷ ವ್ಯವಸ್ಥೆ

11:32 AM Dec 15, 2019 | mahesh |

ಮಂಗಳೂರು: ಸುಮಾರು 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕರಾವಳಿ ಭಾಗದಲ್ಲಿ ಡಿ. 26ರಂದು ಕಂಕಣ ಸೂರ್ಯಗ್ರಹಣ ಗೋಚರವಾಗಲಿದೆ. ಇದರ ವೀಕ್ಷಣೆಗಾಗಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಪುಣೆಯಿಂದ 400 ವಿಶೇಷ ಸೋಲಾರ್‌ ಎಕ್ಲಿಪ್ಸ್‌ ಗ್ಲಾಸ್‌ಗಳನ್ನು ತರಿಸಲಾಗಿದೆ.

Advertisement

ಕರಾವಳಿಯ ಸುಮಾರು 158 ಕಿ.ಮೀ. ವ್ಯಾಪ್ತಿಯಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಗಲಿದೆ. ಬೆಳಗ್ಗೆ 8.06ಕ್ಕೆ ಗ್ರಹಣ ಪ್ರಾರಂಭಗೊಳ್ಳಲಿದ್ದು, 9.26ಕ್ಕೆ ಮಧ್ಯ ಭಾಗಕ್ಕೆ ಬಂದು, 11.04ಕ್ಕೆ ಅಂತ್ಯ ಗೊಳ್ಳಲಿದೆ. ಮೂರು ತಾಸು ಇರಲಿದ್ದು, ಉಳಿದ ಪ್ರದೇಶಗಳಿಗೆ ಇದು ಪಾರ್ಶ್ವ ಸೂರ್ಯ ಗ್ರಹಣ ವಾಗಿರುತ್ತದೆ.

ಈ ವರ್ಷದಲ್ಲಿ ಇದು ಮೊದಲ ಮತ್ತು ಕೊನೆಯ ಸೂರ್ಯ ಗ್ರಹಣವಾಗಿದ್ದರೆ, ಕಂಕಣ ಸೂರ್ಯಗ್ರಹಣವು ಸುಮಾರು 50 ವರ್ಷಗಳಿಂದೀಚೆಗೆ ಮೊದಲ ಬಾರಿಗೆ ಕರಾವಳಿಯಲ್ಲಿ ಗೋಚರಿಸುತ್ತಿದೆ. ಅದಕ್ಕೂ ಹಿಂದೆ ಗೋಚರಿಸಿದೆಯೋ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧಿಕಾರಿಗಳು ಹೇಳುತ್ತಾರೆ. ಇದರ ವೀಕ್ಷಣೆಗೆಂದೇ ಪುಣೆಯ ಕುತ್ವಾಲ್‌ನಿಂದ 400 ಕನ್ನಡಕಗಳನ್ನು ತರಿಸಲಾಗಿದ್ದು, ಗ್ರಹಣ ವೀಕ್ಷಣೆಗೆ ಪಿಲಿಕುಳದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ.

2020ರ ಜೂನ್‌ನಲ್ಲಿ ಇನ್ನೊಂದು ಸೂರ್ಯಗ್ರಹಣ
2020ರ ಜೂನ್‌ನಲ್ಲಿ ಇನ್ನೊಂದು ಸೂರ್ಯಗ್ರಹಣ ಘಟಿಸಲಿದ್ದು, ಅದು ದ. ಭಾರತೀಯರಿಗೆ ಕಂಕಣ ಸೂರ್ಯಗ್ರಹಣವಾದರೂ ಕರಾವಳಿಗೆ ಪಾರ್ಶ್ವ ಗ್ರಹಣವಾಗಲಿದೆ. ಶೇ. 32ರಷ್ಟು ಗ್ರಹಣ ಕರಾವಳಿಗೆ ಗೋಚರಿಸಲಿದೆ. ಡಿ. 26ರ ಗ್ರಹಣವು ಕರಾವಳಿಯಲ್ಲಿ ಶೇ. 93ರಷ್ಟು ಗೋಚರವಾಗಲಿದೆ. ಸೂರ್ಯ ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಿದರೆ ಕಣ್ಣಿಗೆ ಹಾನಿಯಾಗುತ್ತದೆ. ಪಿಲಿಕುಳಕ್ಕೆ ಆಗಮಿಸಿ ಸಾರ್ವಜನಿಕರು ವೀಕ್ಷಣೆ ಮಾಡಬಹುದು ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಶೈಕ್ಷಣಿಕ ಸಹಾಯಕ ಶರಣಯ್ಯ ತಿಳಿಸಿದ್ದಾರೆ.

ಸಂಪೂರ್ಣ ಪ್ರಕ್ರಿಯೆ ವೀಕ್ಷಣೆ
ಪಿನಾಲ್‌ ಆಪರೇಟರ್ ಮೂಲಕ ಗ್ರಹಣ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಈ ಮಾದರಿಯ ವೀಕ್ಷಣೆಯಲ್ಲಿ ಒಂದು ಕನ್ನಡಿಯನ್ನು ಸೂರ್ಯನ ಕಡೆ ಮುಖ ಮಾಡಿ ಅದರಿಂದ ಬರುವ ಬೆಳಕಿನ ಪ್ರತಿಬಿಂಬವನ್ನು ಅಲ್ಯುಮಿನಿಯಂ ಪ್ಲೇಟ್‌ ಒಂದರ ರಂಧ್ರದ ಮೂಲಕ ಹಾಯಿಸಿ 15 ಮೀ. ದೂರದಲ್ಲಿರುವ ಗೋಡೆಗೆ ಬಿಂಬ ಬಿಡಲಾಗುತ್ತದೆ. ಗ್ರಹಣದ ಎಲ್ಲ ಪ್ರಕ್ರಿಯೆಗಳು ಈ ಬಿಂಬದ ಮೂಲಕ ಗೋಚರವಾಗುತ್ತವೆ. ಟೆಲಿಸ್ಕೋಪ್‌ಗ್ಳ ಮೂಲಕವೂ ಸನ್‌ ಫಿಲ್ಟರ್‌ ಹಾಕಿ ಗ್ರಹಣವನ್ನು ಸಾರ್ವಜನಿಕರಿಗೆ ತೋರಿಸಲಾಗುತ್ತದೆ.

Advertisement

ವಿದ್ಯಾರ್ಥಿಗಳಿಂದಲೇ ಅಧ್ಯಯನ
ವಿಶೇಷವೆಂದರೆ ಗ್ರಹಣದ ವಿವಿಧ ಹಂತಗಳಲ್ಲಿ ಬೆಳಕಿನ ಪ್ರಖರತೆ ತಿಳಿದುಕೊಳ್ಳುವುದು, ವಾತಾವರಣದ ತಾಪಮಾನ, ಬೆಳಕಿನ ಗಾಢತೆಯ ಅಳತೆ ಸಹಿತ ವಿವಿಧ ಬದಲಾವಣೆಗಳನ್ನು ವಿದ್ಯಾರ್ಥಿಗಳೇ ಅಧ್ಯಯನ ನಡೆಸಲು ವ್ಯವಸ್ಥೆ ಮಾಡಲಾಗುತ್ತದೆ. ಗ್ರಹಣ ಆಗುವಾಗ ಚಂದ್ರ ಸೂರ್ಯನ ಎಷ್ಟು ವಿಸ್ತೀರ್ಣವನ್ನು ಆವರಿಸುತ್ತಾನೆ ಎನ್ನುವುದನ್ನೂ ಕಂಡುಹಿಡಿಯಲು ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ.

6 ಕಾಲೇಜುಗಳಲ್ಲಿ ಕಾರ್ಯಾಗಾರ
ಕಂಕಣ ಸೂರ್ಯಗ್ರಹಣವು ಕರಾವಳಿಗೆ ವಿಶೇಷವಾಗಿದೆ. ಈಗಾಗಲೇ ಅವಿಭಜಿತ ದ.ಕ. ಜಿಲ್ಲೆ ಮತ್ತು ಕೊಡಗು ಜಿಲ್ಲೆ ಸೇರಿ 6 ಕಾಲೇಜುಗಳಲ್ಲಿ ಈ ಬಗ್ಗೆ ಕಾರ್ಯಾಗಾರ ನಡೆಸಲಾಗಿದೆ. ಪಿಲಿಕುಳ ಮಾತ್ರವಲ್ಲದೆ ಆರು ಕಾಲೇಜುಗಳಲ್ಲಿಯೂ ಸೂರ್ಯಗ್ರಹಣ ವೀಕ್ಷಣೆ ಮಾಡುವ ನಿಟ್ಟಿನಲ್ಲಿ ವೀಕ್ಷಣಾ ಕ್ರಮಗಳ ಬಗ್ಗೆ ಅವರಿಗೆ ತರಬೇತಿ ಮತ್ತು ವೀಕ್ಷಣೆಗೆ ಬೇಕಾದ ಕಿಟ್‌ಗಳನ್ನು ನೀಡಲಾಗುತ್ತಿದೆ.
-ಡಾ| ಕೆ. ವಿ. ರಾವ್‌, ನಿರ್ದೇಶಕರು, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next