Advertisement

ಕಾರ್ಯಕರ್ತರಿಗೆ ಹೋಳಿಗೆ ಉಣಿಸಿದ ಕರಡಿ

10:30 AM Jun 17, 2019 | Team Udayavani |

ಕೊಪ್ಪಳ: ದೇಶದ ಅಭಿವೃದ್ಧಿಗೆ ಈ ಬಾರಿ ಪ್ರತಿಯೊಬ್ಬರೂ ಜಾತ್ಯತೀತವಾಗಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿ, ಮೋದಿ ಅವರಿಗೆ ಅಭೂತಪೂರ್ವ ಗೆಲುವು ನೀಡಿದ್ದಾರೆ. ಕ್ಷೇತ್ರದ ಯುವಪಡೆಯೂ ಸಂಗಣ್ಣ ಕರಡಿಗೆ ಕೈ ಜೋಡಿಸಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ತಾಲೂಕಿನ ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಕಾರ್ಯಕರ್ತರಿಗೆ ಹೋಳಿಗೆ ಊಟದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೋದಿ ಗೆಲುವಿನಿಂದಾಗಿ ಪ್ರಪಂಚದ ವಿವಿಧ ರಾಷ್ಟ್ರಗಳು ಅಭಿನಂದಿಸಿವೆ. ಸ್ವಾತಂತ್ರ್ಯ ಕಾಲದಿಂದ ಜಾತಿ ಹೆಸರೇಳಿ ರಾಜಕಾರಣ ಮಾಡುತ್ತಿದ್ದ ಕಾಂಗ್ರೆಸ್‌ಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಜಾತಿವಾದಿಗಳು ಎಂದವರ ಪರಿಸ್ಥಿತಿ ಈಗ ಮುಖಕ್ಕೆ ಬಟ್ಟೆ ಹಾಕಿಕೊಂಡು ಸುತ್ತಾಡುವಂತಾಗಿದೆ. ಸುಮಲತಾ ಒಕ್ಕಲಿಗರಲ್ಲ ಎಂದಿದ್ದ ದೇವೇಗೌಡರು ಅದೇ ಒಕ್ಕಲಿಗರು ಗೌಡರ ಮೊಮ್ಮಗನಿಗೆ ಮತ ಹಾಕಿಲ್ಲ. ಇನ್ನೂ ರಾಜ್ಯದಲ್ಲಿ ಕುರುಬರಿಗೆ 3 ಸೀಟ್ ಕೊಡಿಸಿದ್ದ ಸಿದ್ದರಾಮಯ್ಯನಿಗೆ ಗೆಲ್ಲಲಾಗಲಿಲ್ಲ. ಕುರುಬರೂ ಬಿಜೆಪಿ ಜೊತೆಗಿದ್ದಾರೆ ಎನ್ನೋದು ಗೊತ್ತಾಗಿದೆ. ಇನ್ಮುಂದೆ ವೀರಶೈವ-ಲಿಂಗಾಯತ ಜಾತಿಗಳ ಬಗ್ಗೆಯೂ ಯಾರು ಮಾತಾಡಲ್ಲ. ಮುಂದೆ ಭಾರತಾಂಬೆ ಅಭಿವೃದ್ಧಿಗೆ ಓಟ್ ಕೊಡಿ ಎನ್ನುವಂತೆ ಕಾರ್ಯಕರ್ತರು ಸಜ್ಜಾಗಬೇಕೆಂದರು.

ಮೋದಿ ಗೆಲುವಿಗೆ ಯುವಕರ ಪಡೆ ಸಜ್ಜಾಗಿ ನಿಂತಿತ್ತು. ನನಗಂತೂ ಜಾತಿ ಹೆಸರು ಕೇಳಿ ಕೇಳಿ ಸಾಕಾಗಿ ಹೋಗಿದೆ. ಮೋದಿ ಸಬ್‌ ಕಾ ವಿಶ್ವಾಸ ಎಂದಿದ್ದಾರೆ. ಈ ಬಾರಿ ಮುಸ್ಲಿಂ ಬಂಧುಗಳ ಮತವೂ ನಮಗೆ ಬಂದಿವೆ. ಜಾತಿ ಮೇಲೆ ಚುನಾವಣೆ ಮಾಡಬೇಡಿ. ಇನ್ನಾದರೂ ಜಾತಿ ನೋಡದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಜಾತಿ ಬಳಸಿ ಸಮಾಜ ಒಡೆದು ಜನರಿಗೆ ದ್ರೋಹ ಮಾಡುವ ಕೆಲಸ ಮಾಡಬೇಡಿ. ಜಾತಿವಾದಿಗಳಾಗಬೇಡಿ, ರಾಷ್ಟ್ರವಾದಿಗಳಾಗಿ ಕೆಲಸ ಮಾಡಿ ಎಂದರು.

ಭಾರತದ ಮೇಲೆ ದಾಳಿ ಆದಾಗ ಬರಿ ಹಿಂದೂಗಳು ಸತ್ತಿಲ್ಲ. ಅದರಲ್ಲಿ ಮುಸ್ಲಿಂರು ಸೇರಿದಂತೆ ಎಲ್ಲ ಧರ್ಮದವರು ಸತ್ತಿದ್ದಾರೆ. ನಾನು ಮುಸ್ಲಿಂ ಸಮುದಾಯದ ವಿರೋಧಿಯಲ್ಲ. ಆದರೆ ಇಲ್ಲಿನ ಅನ್ನ ಉಂಡು ಪಾಕಿಸ್ತಾನಕ್ಕೆ ಜೈಕಾರ ಹಾಕುವ ವ್ಯಕ್ತಿಗಳ ಬಗ್ಗೆ ಹೇಳುತ್ತಿದ್ದೇನೆ. ಈಗ ಹೋಳಿಗೆ ಊಟಕ್ಕೆ ಬಂದಿದ್ದೇನೆ. ಜಾತಿ ಮಾಡಲ್ಲ ಎಂದು ಹೋಳಿಗೆ ಮೇಲೆ ಪ್ರಮಾಣ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಚುನಾವಣೆಯಲ್ಲಿ ನಾವು ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ. ಮತದಾರರಿಗೆ ಅಭಿನಂದನೆ ಸಲ್ಲಿಸುವೆ ಎಂದರಲ್ಲದೇ, ಭಾರತದ ಗೆಲುವಿಗೆ ಇಡೀ ಜಗತ್ತು ನಮ್ಮತ್ತ ತಿರುಗಿ ನೋಡುತ್ತಿದೆ. ಕಳೆದ ಚುನಾವಣೆಯಲ್ಲಿ ದೇಶದ ಜನರು ಮೋದಿಗೆ ಬೆಂಬಲ ಕೊಟ್ಟಿದ್ದರು. ಅವರ ಜನಪರ ಯೋಜನೆ ನೋಡಿ ಎರಡನೇ ಅವಧಿಗೂ ಮೋದಿಗೆ ಜೈ ಎಂದಿದ್ದಾರೆ ಎಂದರು.

Advertisement

ಇನ್ನೂ ಕೊಪ್ಪಳದ ಅಭಿವೃದ್ಧಿ ವಿಚಾರದಲ್ಲಿ ಎನ್‌ಎಚ್ ನಿರ್ಮಾಣಕ್ಕೆ 3 ಸಾವಿರ ಕೋಟಿ ರೂ. ಬಂದಿದೆ. ರೈಲ್ವೆ ಯೋಜನೆಯಲ್ಲಿ ಮುನಿರಾಬಾದ್‌ ಮಹೆಬೂಬ್‌ ನಗರ ಯೋಜನೆಗೆ ಮೋದಿ ಸರ್ಕಾರದ ಅವಧಿಯಲ್ಲಿ ರೈಲು ಓಡಿದೆ. ಗದಗ-ವಾಡಿ ರೈಲ್ವೆ ಕೆಲಸ 57 ಕಿ.ಮೀ. ಕಾಮಗಾರಿ ವೇಗವಾಗಿ ನಡೆದಿದೆ. ಕೊಪ್ಪಳಕ್ಕೆ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಬೇಕಾಗಿದೆ. ಕೇಂದ್ರ ರಾಜ್ಯದ ಸಹಯೋಗದಲ್ಲಿ ಜಿಲ್ಲೆಗೆ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ತರುವ ಪ್ರಯತ್ನ ಮಾಡುವೆ ಎಂದರು.

ಇನ್ನೂ ನೀರಾವರಿ ಯೋಜನೆಗಳ ಬಗ್ಗೆ ರಾಜ್ಯ ಮೈಮರೆತಿದೆ. ಈ ಸರ್ಕಾರ ಕುಸಿದು ಬಿದ್ದರೆ ಯಡಿಯೂರಪ್ಪ ಅವರು ಸಿಎಂ ಆಗ್ತಾರೆ. ನಮ್ಮ ನೀರಾವರಿ ಯೋಜನೆಗಳು ಸಕಾರಗೊಳ್ಳಲಿವೆ. ಮೋದಿ ನದಿ ಜೋಡಣೆ ಮಾಡುವ ಪ್ರಯತ್ನ ನಡೆಸಿದ್ದಾರೆ. ನಾಡಗೌಡರು ಕರೆದ ತುಂಗಭದ್ರಾ ಡ್ಯಾಂ ಚರ್ಚಿತ ಸಭೆಯಲ್ಲಿ ನೀರಾವರಿ ಸಚಿವರೇ ಬಂದಿರಲಿಲ್ಲ ಎಂದರು. ಶಾಸಕರಾದ ಹಾಲಪ್ಪ ಆಚಾರ್‌, ಪರಣ್ಣ ಮುನವಳ್ಳಿ, ಕೆ. ಶರಣಪ್ಪ, ಸಿ.ವಿ. ಚಂದ್ರಶೇಖರ್‌, ಅಂದಣ್ಣ ಅಗಡಿ, ವಿರೂಪಾಕ್ಷಪ್ಪ ಸಿಂಗನಾಳ, ಅಮರೇಶ ಕರಡಿ, ಚಂದ್ರಶೇಖರ್‌ ಕವಲೂರು, ಜಿ. ವೀರಪ್ಪ, ಗಿರಿಗೌಡ, ಕೆ.ಬಿ. ಶ್ರೀನಿವಾಸ, ಅಪ್ಪಣ್ಣ ಪದಕಿ, ಡಿ. ಮಲ್ಲಣ್ಣ, ಪೀರಾ ಹುಸೇನ್‌ ಹೊಸಳ್ಳಿ, ಸಿದ್ದರಾಮಸ್ವಾಮಿ, ಶಶಿಧರ ಕವಲಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next