Advertisement

ನವ ಉದ್ಯಮಿಗಳಿಗೆ ವಿಶೇಷ ಬೆಂಬಲ

04:11 PM Dec 22, 2021 | Team Udayavani |

ಯಾದಗಿರಿ: ಜಿಲ್ಲೆಯಲ್ಲಿ ಮಾನವ ಸಂಪನ್ಮೂಲ ಹೆಚ್ಚಾಗಿದ್ದು, ಇದನ್ನು ಬಳಸಿಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಪಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್‌. ಹೇಳಿದರು.

Advertisement

ಇಲ್ಲಿನ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಉದ್ಯೋಗ ಮೇಳ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ವತಿಯಿಂದ ಹಲವು ಯೋಜನೆಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆಟೋ ಮೊಬೈಲ್‌, ಎಲೆಕ್ಟ್ರಿಕಲ್‌, ಪೆಟ್ಟಿಗೆ ಅಂಗಡಿ, ಗ್ಯಾರೇಜ್‌ ಮುಂತಾದವುಗಳಿಗೆ ಬ್ಯಾಂಕ್‌ ಗಳು ಅತಿ ಕಡಿಮೆ ದರದಲ್ಲಿ ಸಾಲ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಉದ್ದಿಮೆ, ಕೈಗಾರಿಕೆ ಇನ್ನಿತರವುಗಳ ಸ್ಥಾಪಿಸಲು ಇಚ್ಚಿಸುವ ಯುವಕ- ಯುವತಿಯರು ಕೌಶಾಲ್ಯಾಭಿವೃದ್ಧಿ ಇಲಾಖೆಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಇಂಥವರಿಗೆ ಕೇಂದ್ರದ ನೀತಿ ಆಯೋಗದ ಮೂಲಕ ಮೂರು ವರ್ಷಗಳ ಕಾಲ ವಿಶೇಷ ಬೆಂಬಲ ದೊರೆಯಲಿದೆ ಎಂದರು.

ಐಎಎಸ್‌, ಐಪಿಎಸ್‌, ಬ್ಯಾಂಕಿಂಗ್‌ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅನುಕೂಲ ಮಾಡಿಕೊಡಲಿದ್ದು, ಆಕಾಂಕ್ಷಿ ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಕರೆ ನೀಡಿದರು.

Advertisement

18 ಕಂಪೆನಿಗಳು ಇಂದು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದು, ಈ ಕಂಪೆನಿಗಳು ಸ್ಥಳೀಯರಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಜಿಲ್ಲೆಯಲ್ಲಿ 1,400 ಹುದ್ದೆಗಳು ಖಾಲಿ ಇದ್ದು, ಇಂದು 700 ಮಂದಿ ಮಾತ್ರ ಉದ್ಯೋಗ ಮೇಳದಲ್ಲಿ ಸಂದರ್ಶನಕ್ಕೆ ಬಂದಿದ್ದಾರೆ. ನಿಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರನ್ನೂ ಕರೆ ತನ್ನಿ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಿ.ಬಿ. ವೇದಮೂರ್ತಿ ಮಾತನಾಡಿ, ಕೌಶಲ್ಯವಿಲ್ಲದಿದ್ದರೆ ಉದ್ಯೋಗ ಇಲ್ಲ. ಹಾಗಾಗಿ ಕೌಶಲ್ಯ ವೃದ್ಧಿಸಿಕೊಳ್ಳಿರಿ. ಆಗ ಎಲ್ಲರೂ ಗುರುತಿಸುತ್ತಾರೆ. ತಮ್ಮ- ತಮ್ಮ ಕೌಶಲ್ಯದಿಂದಲೇ ಮೈಕ್ರೋಸಾಫ್ಟ್‌ ಸಿಇಒ ಸತ್ಯನಾದೆಲ್ಲಾ, ಪೆಪ್ಸಿ ಕೋ ಸಿಇಒ ಇಂದಿರಾ ನೂಯಿ ಅಂಥವರು ಉನ್ನತ ಹುದ್ದೆಯಲ್ಲಿದ್ದಾರೆ ಎಂದರು.

ಜಿಪಂ ಉಪ ಕಾರ್ಯದರ್ಶಿ ಅಶೋಕ್‌ ರಾಠೊಡ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕಿ ರೇಖಾ ಮ್ಯಾಗೇರಿ, ಯಾದಗಿರಿ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಕೆ.ಎಂ. ಸಿದ್ದೇಶ್ವರ್‌, ಜಿಲ್ಲಾ ಕೌಶಾಲ್ಯಾಭಿವೃದ್ಧಿ ಅಧಿಕಾರಿ ರಾಜು, ಜಿಪಂ ಮುಖ್ಯ ಯೋಜನಾಧಿಕಾರಿ ಗುರುನಾಥ್‌ ಗೌಡಪ್ಪನವರ್‌, ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ್‌ ಇದ್ದರು. ಬಸವರಾಜು ಸ್ವಾಗತಿಸಿದರು. ಕಿಶನ್‌ ರಾಠೊಡ ವಂದಿಸಿದರು. ಕಲಾವಿದ ಚಂದ್ರಶೇಖರ್‌ ಗೋಗಿ ಮತ್ತು ಅವರ ತಂಡ ನಾಡಗೀತೆ ಹಾಡಿದರು.

ಯಾದಗಿರಿ ಜಿಲ್ಲೆಯಲ್ಲದೆ, ಬೇರೆ ಜಿಲ್ಲೆಯಲ್ಲೂ ಉದ್ಯೋಗ ಸಿಕ್ಕರೆ ಹೋಗುವಂತಿರಬೇಕು. ನಾನು ನನ್ನ ಹುಟ್ಟೂರಿನಿಂದ 2,500 ಕಿ.ಮೀ. ದೂರ ಬಂದು ಕಾರ್ಯನಿರ್ವಹಿಸುತ್ತಿದ್ದೇನೆ. -ಶಿಲ್ಪಾ ಶರ್ಮಾ, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next