Advertisement

Bidar; ಬಿಜೆಪಿಗೆ ನಾಗಮಾರಪಳ್ಳಿ ಕುಟುಂಬದ ಬೆಂಬಲ

09:33 PM Apr 14, 2024 | Team Udayavani |

ಬೀದರ್ : ಸಹಕಾರ ಕ್ಷೇತ್ರದಲ್ಲಿನ ಅನನ್ಯ ಸಾಧನೆಯಿಂದಾಗಿ ಜಿಲ್ಲೆಯಾದ್ಯಂತ ಅಪಾರ ಬೆಂಬಲಿಗರನ್ನು ಹೊಂದಿರುವ ನಾಗಮಾರಪಳ್ಳಿ ಪರಿವಾರವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರನ್ನು ಬೆಂಬಲಿಸಲು ತೀರ್ಮಾನಿಸಿದೆ.

Advertisement

ಇಲ್ಲಿನ ಮಾಧವನಗರದ ನಾಗಮಾರಪಳ್ಳಿ ಅವರ ನಿವಾಸದಲ್ಲಿ ರವಿವಾರ ನಡೆದ ಬೃಹತ್ ಸಮಾವೇಶದಲ್ಲಿ ಈ ಕುರಿತು ಘೋಷಿಸಲಾಯಿತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ನಾಗಮಾರಪಳ್ಳಿ ಬೆಂಬಲಿಗರು, ಕಾರ್ಯಕರ್ತರು ತೀರ್ಮಾನಕ್ಕೆ ಒಮ್ಮತ ಸೂಚಿಸಿದರು.

ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಪ್ರಧಾನಿ ಮೋದಿಯವರ ಕೈ ಬಲಪಡಿಸಬೇಕಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರ ಗೆಲುವಿಗಾಗಿ ಶ್ರಮಿಸಬೇಕು. ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ, ಖೂಬಾ ಅವರು ಕೇಂದ್ರದಲ್ಲಿ ಸಚಿವರಾಗುತ್ತಾರೆ ಎಂದು ಭವಿಷ್ಯ ನುಡಿದರು.

ಎನ್‌ಡಿಎ ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿ, ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಮಾಡುತ್ತಿರುವವರಿಗೆ ಪಾಠ ಕಲಿಸಬೇಕಾಗಿದೆ, ಖಂಡ್ರೆ ಪರಿವಾರದ ಡಿಎನ್‌ಎದಲ್ಲಿ ದ್ವೇಷ ತುಂಬಿಕೊಂಡಿದೆ. ಖಂಡ್ರೆಯವರು ಅವರದೇ ಪಕ್ಷದ ನಾಯಕರನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತು ಅವರದೇ ಪಕ್ಷದಲ್ಲಿ ಸಮಾಧಾನ ಇಲ್ಲ ಎಂದು ಹೇಳಿದ ಅವರು, ಉಮಾಕಾಂತ ನಾಗಮಾರಪಳ್ಳಿ ಅವರನ್ನು ಮತ್ತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಬೇಕಾಗಿದೆ ಎಂದು ಭಗವಂತ ಖೂಬಾ ಹೇಳಿದರು.

ಜೆಡಿಎಸ್ ನಾಯಕ ಸೂರ್ಯಕಾಂತ್ ನಾಗಮಾರಪಳ್ಳಿ ಮಾತನಾಡಿ, ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದರು. ಖೂಬಾ ಅವರು ಗೆದ್ದಲ್ಲಿ, ಜಿಲ್ಲೆಯ ಅಭಿವೃದ್ಧಿಯ ವೇಗ ಹೆಚ್ಚಲಿದೆ. ಕಳೆದ ೧೦ ವರ್ಷಗಳಲ್ಲಿ ಖೂಬಾ ಅವರು ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಗೆದ್ದು, ಅವರು ಇನ್ನಷ್ಟು ಅಭಿವೃದ್ಧಿ ಮಾಡುವ ವಿಶ್ವಾಸ ಇದೆ ಎಂದರು,

Advertisement

ಮಾಜಿ ಸಚಿವ ಬಂಡೆಪ್ಪ ಖಾಶಂಪುರ ಮಾತನಾಡಿ, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ಅಗಾಧ ಬದಲಾವಣೆ ಆಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ರೈತರಿಗಾಗಿ ಯಾವ ಗ್ಯಾರಂಟಿ ಇದೆ. ಬೀಜದ ಗ್ಯಾರಂಟಿ ಇಲ್ಲ, ರಸಗೊಬ್ಬರದ ಗ್ಯಾರಂಟಿ ಇಲ್ಲ, ರೈತರ ಸಾಲ ಮನ್ನಾಕ್ಕೆ ಗ್ಯಾರಂಟಿ ಇಲ್ಲ ಎಂದು ಹೇಳಿದ ಅವರು, ಬೀದರ ಉತ್ತರ ಕ್ಷೇತ್ರದಲ್ಲಿ ನಾಯಕ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಬಿಜೆಪಿಗೆ ಒಂದು ಲಕ್ಷ ಮತ ಕೊಡಿಸುವ ಕೆಲಸ ಮಾಡಬೇಕು ಎಂದು ನುಡಿದರು.

ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಮಾತನಾಡಿ, ಬೆಂಬಲಿಗರನ್ನು ಬೆಳೆಸಿದವರಲ್ಲಿ ನಾಗಮಾರಪಳ್ಳಿ ಅವರೇ ಮೊದಲಿಗರು. ಲೋಕಸಭಾ ಚುನಾವಣೆಯಲ್ಲಿ ನಾಗಮಾರಪಳ್ಳಿ ಪರಿವಾರದ ಬೆಂಬಲಿಗರು, ಹಿತೈಷಿಗಳು ಬಿಜೆಪಿಯನ್ನು ಬೆಂಬಲಿಸಬೇಕು. ಖೂಬಾ ಅವರನ್ನು ಗೆಲ್ಲಿಸದಿದ್ದಲ್ಲಿ ಗುಲಾಮರು ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಾಜಿ ಶಾಸಕ ಎಂ.ಜಿ. ಮುಳೆ ಮಾತನಾಡಿದರು. ಸಭೆಯಲ್ಲಿ ಜೆಡಿಎಸ್ ಜಿಲ್ಲಾದ್ಯಕ್ಷ ರಮೇಶ ಪಾಟೀಲ. ಪ್ರಮುಖರಾದ ವಿಜಯಕುಮಾರ ಪಾಟೀಲ ಗಾದಗಿ, ಶಾಂತಕುಮಾರ ಸಾವಳಗಿ, ಬಸವರಾಜ ಪಾಟೀಲ, ರಾಜು ಕಡ್ಯಾಳ್, ರಾಜಕುಮಾರ ಜವಳೆ, ದೇವೇಂದ್ರ ಸೋನಿ, ಐಲಿನ್ ಜಾನ್ ಮಠಪತಿ, ಸುದರ್ಶನ್, ಫನಾಂಡಿಸ್ ಹಿಪ್ಪಳಗಾಂವ್, ಅಶೋಕ ಕೊಡಗೆ, ನವಾಜ್ ಖಾನ್, ಸುಂದರ ಮಾಳೆಗಾಂವ್, ಶಿವಕುಮಾರ ಭಾಲ್ಕೆ, ಬಾಲಾಜಿ ಚಹ್ವಾಣ್, ವೀರಶೆಟ್ಟಿ ಪಟ್ನೆ, ಭೀಮರಾವ್ ಪಾಟೀಲ್ ಡಿಗ್ಗಿ, ಮಾಧವರಾವ್ ಪಾಟೀಲ್, ಶಾಂತಕುಮಾರ ಮುದ್ದಾಳೆ, ನಂದು ಜೋಶಿ ಮತ್ತು ಸಂಜು ಸಿದ್ದಾಪುರ್ ಇದ್ದರು.

ನಾಗಮಾರಪಳ್ಳಿ ಫೋಟೊ ಮಾಯ, ಆಕ್ರೋಶ
ಒಳ್ಳೆಯ ಕೆಲಸ ಮಾಡಿದವರ ಭಾವಚಿತ್ರ ಹಾಕುವ ಪರಂಪರೆ ಇದೆ. ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಡಿಸಿಸಿ ಬ್ಯಾಂಕ್, ಶಾರದಾ ಆರ್‌ಸೆಟಿ, ಸಹರ್ದಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಅದರೆ, ‘ಅವರು’ ಅಧಿಕಾರಕ್ಕೆ ಬರುತ್ತಲೇ ನಾಗಮಾರಪಳ್ಳಿ ಅವರ ಫೋಟೊ ತೆಗೆದು ಹಾಕಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಉಮಾಕಾಂತ್ ನಾಗಮಾರಪಳ್ಳಿ ಅವರು ಖಂಡ್ರೆ ಪರಿವಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಮಾತನಾಡಿದ ಅವರು, ದಿ. ಗುರುಪಾದಪ್ಪ ಅವರು ಕಟ್ಟಿದ ಡಿಸಿಸಿ ಬ್ಯಾಂಕು ಇಡೀ ದೇಶದ ಗಮನ ಸೆಳೆಯುವ ರೀತಿಯಲ್ಲಿ ಬೆಳೆದಿದೆ. ನಾನು ಅಧ್ಯಕ್ಷನಾದ ನಂತರ ಬ್ಯಾಂಕು ಇನ್ನಷ್ಟು ಪ್ರಗತಿ ಸಾಧಿಸಿತ್ತು. ಆದರೆ, ಕಳೆದ ಚುನಾವಣೆಯ ನಂತರ ಬ್ಯಾಂಕಿನ ಸ್ಥಿತಿ ಏನಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ೬ ತಿಂಗಳಿಂದ ಒಬ್ಬ ರೈತನಿಗೂ ಸಾಲ ನೀಡಲಾಗಿಲ್ಲ ಎಂದರು.

‘ಅಧಿಕಾರ ಬೇಡ ಎನ್ನುತ್ತಲೇ ಅವರು ಮಂತ್ರಿ ಆದರು. ತಮ್ಮನನ್ನು ಬ್ಯಾಂಕಿನ ಅಧ್ಯಕ್ಷನನ್ನಾಗಿ ಮಾಡಿದರು. ಬ್ಯಾಂಕ್ ಚುನಾವಣೆಯಲ್ಲಿ ಅಧಿಕಾರ ದುರ್ಬಳಕೆ ಮಾಡಿದರು. ಹಣಬಲ ಬಳಸಿದರು’ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next