ನಾಲ್ವರು ಮೋಸಗಾರರು ಎಂಥವರನ್ನಾದರೂ ತಮ್ಮ ಮೋಸದ ಜಾಲಕ್ಕೆ ಬಹಳ ಸುಲಭವಾಗಿ ಬೀಳಿಸುತ್ತಿದ್ದರು. ಕುತಂತ್ರಕ್ಕೆ ಬೇಸತ್ತ ಅನೇಕರು ಅವರ ವಿರುದ್ಧ ಏನೇ ಉಪಾಯ ಮಾಡಿದರೂ ಅವರನ್ನು ಬೇಸ್ತು ಬೀಳಿಸಲಾಗಿರಲಿಲ್ಲ. ಅಂಥದ್ದರಲ್ಲಿ ಶಮಂತನೆಂಬ ಬಾಲಕನೊಬ್ಬ ಮೋಸಗಾರರಿಗೇ ತಿರುಮಂತ್ರ ಹಾಕಲು ಹೊರಟ.
ಒಂದಾನೊಂದು ಕಾಲದಲ್ಲಿ ಚಾಮುಂಡಿಪುರ ಎಂಬ ಗ್ರಾಮದಲ್ಲಿ ಕಾಳ, ಸೋಮ, ಬೋರ ಮತ್ತು ಮುನಿಯ ಎಂಬ ನಾಲ್ವರು ಮೋಸಗಾರರಿದ್ದರು. ಮೋಸ ಮಾಡುವುದೇ ಅವರ ವೃತ್ತಿಯಾಗಿತ್ತು. ಲಕ್ಷಾಂತರ ಚಿನ್ನದ ನಾಣ್ಯಗಳನ್ನು ಕೊಳ್ಳೆ ಹೊಡೆದಿದ್ದರೂ ಅವರಿಗೆ ತೃಪ್ತಿ ಇರಲಿಲ್ಲ. ಅಗತ್ಯವಿಲ್ಲದಿದ್ದರೂ ಸಂಪತ್ತನ್ನು ಮನೆಯಲ್ಲಿ ಕೂಡಿ ಹಾಕುತ್ತಿದ್ದರು.
ಈ ಮೋಸಗಾರರು ಎಂಥವರನ್ನಾದರೂ ತಮ್ಮ ಮೋಸದ ಜಾಲಕ್ಕೆ ಸುಲಭವಾಗಿ ಬೀಳಿಸುತ್ತಿದ್ದರು. ಅವರ ಕುತಂತ್ರಕ್ಕೆ ಬೇಸತ್ತ ಅನೇಕರು ಅವರ ವಿರುದ್ಧ ಏನೇ ಉಪಾಯ ಮಾಡಿದರೂ ಮೋಸಗಾರರನ್ನು ಬೇಸ್ತು ಬೀಳಿಸಲಾಗಿರಲಿಲ್ಲ. ಮೋಸಗಾರರಿಗೆ ತಕ್ಕ ಪಾಠ ಕಲಿಸಬೇಕೆಂದುಕೊಂಡಿದ್ದವರಲ್ಲಿ ಶಮಂತನೆಂಬ ಬಾಲಕನೂ ಒಬ್ಬ.
ಒಂದು ದಿನ ಶಮಂತನಿಗೆ ಉಪಾಯವೊಂದು ಹೊಳೆಯಿತು. ಸಂಗೀತ ವಿದ್ವಾಂಸರಾಗಿದ್ದ ತನ್ನ ತಂದೆಗೆ ಮಹಾರಾಜರು ಸನ್ಮಾನಿಸಿ ನೀಡಿದ್ದ ಬಂಗಾರದ ಕಂಠೀಹಾರವನ್ನು ತನ್ನ ಕೊರಳಿಗೆ ಹಾಕಿಕೊಂಡು ಬಹಳ ಠಾಕು ಠೀಕಾಗಿ ಆ ನಾಲ್ವರು ಮೋಸಗಾರರ ಮುಂದೆ ಸುಳಿದಾಡತೊಡಗಿದ. ಬಂಗಾರದ ಕಂಠೀಹಾರದ ಮೇಲೆ ಮೋಸಗಾರರ ಕಣ್ಣುಬಿತ್ತು.
ಮೋಸಗಾರ ಕಾಳ, ಶಮಂತನನ್ನು ಕರೆದು “ಆ ಹಾರ ನಿನ್ನ ಬಳಿ ಹೇಗೆ ಬಂತು?’ ಎಂದು ಕೇಳಿದ. “ಮಹಾರಾಜರ ಅರಮನೆಯ ಹಿಂಬದಿಯ ಕೋಟೆ ಹತ್ತಿ ಒಳಕ್ಕೆ ಹೋದೆ. ಅಲ್ಲಿ ಮಹಾರಾಣಿ ಇದ್ದಳು. ದೀನನಂತೆ ನಟಿಸುತ್ತಾ ದಿಢೀರನೆ ಅವಳ ಕಾಲಿಗೆ ಬಿದ್ದೆ. ನಾನೊಬ್ಬ ಬಡ ಬಾಲಕ, ನೀವೇನಾದರೂ ನನಗೆ ಸಹಾಯ ಮಾಡಲೇಬೇಕು ಇಲ್ಲವೆಂದರೆ ನಾನು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ದಯಮಾಡಿ ನನ್ನನ್ನು ಕಷ್ಟದಿಂದ ಪಾರು ಮಾಡಿ ಎಂದು ಮಹಾರಾಣಿಯ ಬಳಿ ಬೇಡಿಕೊಂಡೆ. ಆಗ ಅವಳ ಮನಸ್ಸು ಕರಗಿತು. ಕೂಡಲೇ ಈ ಬಂಗಾರದ ಕಂಠೀಹಾರವನ್ನು ನನಗೆ ಕೊಟ್ಟಳು’ ಎಂದ ಶಮಂತ. ನಾಲ್ವರೂ ಮೋಸಗಾರರ ಕಿವಿಗಳು ನೆಟ್ಟಗಾಗಿ ಮುಖ ಅರಳಿತು. ವಾರಗಟ್ಟಲೆ ಕುತಂತ್ರ ಹೆಣೆದು ಸಾಮಾನ್ಯ ಜನರಿಗೆ ಮೋಸ ಮಾಡುವುದಕ್ಕಿಂತ ಒಂದು ಬಾರಿ ರಾಣಿಯ ಮುಂದೆ ಸುಳ್ಳು ಹೇಳುವುದು ಎಷ್ಟೋ ಸುಲಭದ ಕೆಲಸವೆಂದು ತೋರಿತು.
ಅದರಂತೆ ಅರಮನೆಯ ಹಿಂಬದಿಯ ಕಡೆಯಿಂದ ಕೋಟೆ ಹತ್ತಿ ಇಳಿದು ಮಹಾರಾಣಿಯನ್ನು ಕಾಣಲು ಹೊರಟರು. ಇತ್ತ ಶಮಂತ ಅರಮನೆಯ ಮುಂಭಾಗದಲ್ಲಿದ್ದ ಕಾವಲು ಸೈನಿಕರ ಬಳಿ ತೆರಳಿ “ಯಾರೋ ಕಳ್ಳರು ಅರಮನೆಯ ಹಿಂಬದಿಯಿಂದ ಕೋಟೆ ಹತ್ತುತ್ತಿದ್ದಾರೆ’ ಎಂದು ಸುದ್ದಿ ಮುಟ್ಟಿಸಿದ. ಎಚ್ಚೆತ್ತ ಸೈನಿಕರು ತುಕಡಿ ಸಮೇತ ಅರಮನೆಯ ಹಿಂಬದಿಗೆ ಹೋದರು.
ರಾಣಿಯನ್ನು ಹುಡುಕುತ್ತಿದ್ದ ಮೋಸಗಾರರು ಸೈನಿಕರಿಗೆ ಸೆರೆಸಿಕ್ಕರು. ಮಹಾರಾಜ “ಕಳ್ಳತನ ಮಾಡಲು ನನ್ನ ಅರಮನೆಗೇ ನುಗ್ಗಿದ ಈ ಖದೀಮರಿಗೆ ನೂರು ಛಡಿ ಏಟು ನೀಡಿ ಕುದುರೆ ಲಾಯಕ್ಕೆ ತಳ್ಳಿರಿ. ಪ್ರತಿದಿನ ಇವರು ಕುದುರೆ ಲದ್ದಿ ಎತ್ತುತ್ತಾ ಅವುಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಲಿ’ ಎಂದು ಆಜ್ಞಾಪಿಸಿದ. ಇಡೀ ಊರಿನವರನ್ನೇ ಮೋಸ ಮಾಡುತ್ತಿದ್ದ ಕುತಂತ್ರಿಗಳಿಗೆ ಶಮಂತ ಪಾಠ ಕಲಿಸಿದ ಸುದ್ದಿ ಕಾಡ್ಗಿಚ್ಚಿನಂತೆ ಊರೆಲ್ಲಾ ಹರಡಿತು.
— ಬನ್ನೂರು ರಾಜು