Advertisement
ಸೆ. 1ರಿಂದ ಪತ್ತನಾಜೆ ಶುರು..!ನಮ್ಮ ಕಲಾ ಜಗತ್ತು ಕ್ರಿಯೇಶನ್ಸ್ ಸಂಸ್ಥೆಯ ನಿರ್ಮಾಣದ ‘ಪತ್ತನಾಜೆ” ತುಳು ಸಿನೆಮಾ ಸೆ.1ರಂದು ತೆರೆಗೆ, ಬರುವುದು ಪಕ್ಕಾ ಆಗಿದೆ. ಬರೋಬರಿ 10 ಹಾಡುಗಳ ಮೂಲಕ ಹೊಸ ದಾಖಲೆಯೊಂದು ಈ ಸಿನೆಮಾದ ಮೂಲಕ ನಿರ್ಮಾಣವಾಗಿದೆ. ಇದರ ಜತೆಯಲ್ಲಿ ಮುಖ್ಯವಾಗಿ ಸಿನೆಮಾದ ತುಂಬಾ ಮುದ್ದು ಮುದ್ದಾದ ಬಿಟ್ ಸಾಂಗ್‌ಗಳು ಇಂಪಾಗಿವೆ. ಅಂದಹಾಗೆ ಚಿತ್ರವನ್ನು ಪಾವಂಜೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಆರಂಭಗೊಂಡು ಮೂಲ್ಕಿ, ಉಡುಪಿ, ಮಂಗಳೂರಿನ ಪದವು ಮೇಗಿನಮನೆ, ಶಕ್ತಿನಗರ, ಕುತ್ತಾರ್, ಸಸಿಹಿತ್ಲು, ಸುಲ್ತಾನ್ ಬತ್ತೇರಿ, ಕೊಡವೂರು, ಮೂಡುಬಿದಿರೆ ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. 26 ದಿನಗಳಲ್ಲಿ ಸತತ ಚಿತ್ರೀಕರಣ ನಡೆಸಲಾಗಿದ್ದು, ಒಂದೇ ಶೆಡ್ಯೂಲ್‌ನಲ್ಲಿ ಪೂರ್ಣಗೊಂಡಿದೆ. ತುಳು ಸಂಸ್ಕೃತಿ, ಸಂಸ್ಕಾರ, ಶ್ರೇಷ್ಠತೆಗೆ ಹೆಚ್ಚಿನ ಒತ್ತು ನೀಡಿ ಸಿದ್ಧಪಡಿಸಿದ ಕೌಟುಂಬಿಕ ಹಾಸ್ಯ ಮಿಶ್ರಿತ ಚಿತ್ರ ಇದಾಗಿದೆ. ವಿ. ಮನೋಹರ್ ಸಂಗೀತ, ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಸಂಭಾಷಣೆ, ಸುರೇಶ್ ಬಾಬು ಛಾಯಾಗ್ರಹಣ ಮಾಡಿದ್ದಾರೆ. ಶಿವಧ್ವಜ್, ಮುಂಬಯಿಯ ರೇಷ್ಮಾ ಶೆಟ್ಟಿ, ಚೇತನ್ ರೈ ಮಾಣಿ, ಸೂರ್ಯ ರಾವ್, ಸುರೇಂದ್ರ ಹೆಗ್ಗಡೆ, ಸೀತಾ ಕೋಟೆ ಮುಂತಾದವರು ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕತೆ, ಚಿತ್ರಕಥೆ ಮತ್ತು ನಿರ್ದೇಶನವನ್ನು ತೋನ್ಸೆ ವಿಜಯ ಕುಮಾರ್ ಶೆಟ್ಟಿ ಮಾಡಿದ್ದಾರೆ.
ಕುಡ್ಲದೂರಿನ ‘ಅಂಡೆ ಪಿರ್ಕಿ’ಗಳು ಈಗ ಅಂತಾರಾಷ್ಟ್ರೀಯ ಅಂಗಳದಲ್ಲಿ ತಮ್ಮ ಜಾದೂ ತೋರಿಸಲಿದ್ದಾರೆ. ಜಗತ್ತಿನ ಪ್ರಸಿದ್ಧ ಟಿವಿ ವಾಹಿನಿಯೊಂದರಲ್ಲಿ ಮಂಗಳೂರಿನ ಹುಡುಗರು ನಿರ್ಮಿಸಿದ ಕಾರ್ಟೂನ್ ಸಿರೀಯಲ್ ‘ಅಂಡೆ ಪಿರ್ಕಿ’ ಪ್ರಸಾರ ಮಾಡುವ ಅವಕಾಶ ದಕ್ಕಿದೆ. ಸುಮಾರು ಏಳು ನಿಮಿಷ ಅವಧಿಯ 78 ಸಂಚಿಕೆಗಳ ಪ್ರಸಾರಕ್ಕೆ ಅನುಮತಿ ಸಿಕ್ಕಿದೆ. ಈಗಾಗಲೇ ಅಂಡೆ ಪಿರ್ಕಿಯ 9 ಸಂಚಿಕೆಗಳ ಪ್ರಸಾರ ನಿರ್ಮಾಣ ಪೂರ್ಣಗೊಂಡಿದ್ದು ,2018ರ ಫೆಬ್ರವರಿಯಿಂದ ಪ್ರಸಾರವಾಗಲಿದೆ. ಮಂಗಳೂರಿನಲ್ಲಿ ವಿವೇಕ್ ಬೋಳಾರ್ ಅವರ ಬ್ಲೂ ಫಿಕ್ಸೆಲ್ ಆ್ಯನಿಮೇಶನ್ ಸ್ಟುಡಿಯೋ ಆರಂಭದಲ್ಲಿ ಆರ್ಕಿಟೆಕ್ಚರ್ ಪ್ರಾಜೆಕ್ಟ್ಗಳನ್ನು ನಿರ್ಮಿಸುವ ಕೆಲಸವನ್ನು ಮಾಡುತ್ತಿತ್ತು. 2015ರಿಂದ ಆ್ಯನಿಮೇಶನ್ ಚಿತ್ರ ನಿರ್ಮಾಣಕ್ಕೂ ಈ ಸಂಸ್ಥೆ ಕೈ ಹಾಕಿತು. ಇದೇ ಸಮಯದಲ್ಲಿ ಈ ಕಿರು ಚಿತ್ರಕ್ಕೆ ಸಂಗೀತ ನೀಡಲು ಚೆನ್ನೈನಲ್ಲಿರುವ ಗೆಳೆಯರೊಬ್ಬರನ್ನು ಸಂಪರ್ಕಿಸಿದರು. ಅವರು ಇದನ್ನು ನೋಡಿ ಸ್ಪರ್ಧೆಗೆ ಕಳುಹಿಸುವಂತೆ ಒತ್ತಾಯಿಸಿದರು. ಅಲ್ಲಿ ಭಾಗವಹಿಸಲು ಚಿತ್ರಕ್ಕೆ ಹೆಸರು ನೀಡಬೇಕಾಯಿತು. ಅಲ್ಲಿ ಹುಟ್ಟಿದ ಟೈಟಲ್ ‘ಅಂಡೆ ಪಿರ್ಕಿ’ ಪ್ರಶಸ್ತಿಗಾಗಿ ಕಾದಾಡಿದ ಅಂಡೆಪಿರ್ಕಿ ಗೆಲುವು ದಾಖಲಿಸಿತು. ಅಲ್ಲಿಂದ ವಿವೇಕ್ ಅವರ ಆತ್ಮವಿಶ್ವಾಸ ಬಲಗೊಳ್ಳುತ್ತಾ ಸಾಗಿತು. ಸಂಸ್ಥೆಯನು ಓಂ ಆ್ಯನಿಮೇಶನ್ ಸ್ಟುಡಿಯೋಸ್ ಎಂದು ಮರುನಾಮಕರಣ ಮಾಡಿ ಆ್ಯನಿಮೇಶನ್ ಮೂವಿ ಸೆಕ್ಟರ್‌ನಲ್ಲಿ ತೊಡಗಿಸಿಕೊಂಡರು. – ದಿನೇಶ್ ಇರಾ