Advertisement

ಉಡುಪಿ ತೀರಕ್ಕೆ ಬಾರದ ಕಡಲಾಮೆಗಳು!

09:40 AM Mar 29, 2018 | Team Udayavani |

ಉಡುಪಿ: ಬರಬೇಕಿದ್ದವರು ಬಂದಿಲ್ಲ ಎಂದರೆ, ತುಸು ಆತಂಕವಾಗುವುದು ಸಹಜ! ಅಪೂರ್ವ ಜೀವಿಗಳಾದ ಕಡಲಾಮೆಗಳ ವಿಚಾರದಲ್ಲೂ ಇದೀಗ ಹಾಗೆಯೇ ಆಗಿದೆ. ಉಡುಪಿಯ ಸಮುದ್ರ ತೀರಕ್ಕೆ ಬರಬೇಕಿದ್ದ ಕಡಲಾಮೆಗಳು ಈ ವರ್ಷ ಬಂದಿಲ್ಲ! ಕಡಲಿನಲ್ಲಿ ಮತ್ಸ್ಯಸಂಪತ್ತು ವೃದ್ಧಿಗೂ ಕಾರಣವಾಗುವ ಕಡಲಾಮೆಗಳು ಒಂದರ್ಥದಲ್ಲಿ ಮೀನುಗಾರರ ಸ್ನೇಹಿತರಂತೆ. ಉಡುಪಿ ಜಿಲ್ಲೆಯ ಕಡಲ ತೀರಕ್ಕೆ ಸಂತಾನೋತ್ಪತ್ತಿ ಉದ್ದೇಶಕ್ಕೆ ಬರುತ್ತಿದ್ದ ಕಡಲಾಮೆಗಳು ಈಗ ಬರುವುದನ್ನು ಬಿಟ್ಟಿವೆ. ಕಳೆದ 5 ವರ್ಷದ ದತ್ತಾಂಶ ಪರಿಶೀಲಿಸಿದರೆ, ಕಡಲಾಮೆಗಳ ಗೂಡು ಸಿಗುತ್ತಿರುವುದು ಅಪರೂಪವಾಗುತ್ತಿದೆ. ಕಳೆದ ವರ್ಷ 5 ಗೂಡು ಸಿಕ್ಕಿರುವುದು ಆಶ್ಚರ್ಯ ಎನ್ನಲಾಗಿದೆ.

Advertisement

ಸಂತಾನೋತ್ಪತ್ತಿ ಸಮಯ: ಕರ್ನಾಟಕದ ಕರಾವಳಿಯಲ್ಲಿ ಆಲೀವ್‌ ರಿಡ್ಲೆ ಮತ್ತು ಹಸಿರು ಕಡಲಾಮೆ ಜಾತಿಯ ಕಡಲಾಮೆಗಳು ಸಾಮಾನ್ಯ. ಇವುಗಳು ಸೆಪ್ಟಂಬರ್‌ನಿಂದ ಫೆಬ್ರವರಿ ತಿಂಗಳ ಅವಧಿಯಲ್ಲಿ ತೀರಕ್ಕೆ ಆಗಮಿಸುತ್ತವೆ. ಒಮ್ಮೆಗೆ 100-200 ಮೊಟ್ಟೆಗಳನ್ನಿಟ್ಟು ತೆರಳುತ್ತವೆ. ಈ ಮೊಟ್ಟೆಗಳು ಸೂರ್ಯನ ತಾಪಕ್ಕೆ ಒಡೆದು ಮರಿಯಾಗಲು 50-60 ದಿನಗಳು ಬೇಕು. ಬಳಿಕ 24 ತಾಸಿನೊಳಗೆ ಈ ಮರಿಗಳು ನೇರ ಸಮುದ್ರಕ್ಕೆ ಸೇರಿದರೆ ಮಾತ್ರ ಉಳಿಗಾಲ. ಇಲ್ಲದಿದ್ದರೆ, ಇತರ ಜೀವಿಗಳಿಗೆ ಆಹಾರವಾಗುತ್ತವೆ. ಕಡಲಾಮೆ ಮೊಟ್ಟೆಗಳು ಮನುಷ್ಯರಿಂದ, ನಾಯಿಗಳಿಂದಲೂ ಹಾನಿಗೊಳಗಾಗುತ್ತವೆ.  


ತೀರಕ್ಕೆ ಬರುತ್ತಿಲ್ಲ !:
ಕಡಲಾಮೆಗಳು ತೀರಕ್ಕೆ ಬರದಿರಲು ಪ್ರಮುಖ ಕಾರಣ ಕರಾವಳಿಯಲ್ಲಾದ ಕೃತಕ ಭೌಗೋಳಿಕ ಬದಲಾವಣೆ ಮತ್ತು ಪರಿಸರ ಮಾಲಿನ್ಯ. ಇದರೊಂದಿಗೆ ಕಡಲ್ಕೊರೆತ ಸಮಸ್ಯೆ ಪರಿಹಾರಕ್ಕೆ ಬೃಹತ್‌ ಬಂಡೆಗಳನ್ನು
ಹಾಕಿ ತಡೆಗೋಡೆ ನಿರ್ಮಾಣ, ತೀರದಲ್ಲಿರುವ ವಿಪರೀತ ಪ್ಲಾಸ್ಟಿಕ್‌ ತ್ಯಾಜ್ಯಗಳು ಕಾರಣವಾಗಿವೆ. ಬ್ರೇಕ್‌ ವಾಟರ್‌ ಕಾಮಗಾರಿ, ಇತರ ಕಾಮಗಾರಿಗಳಿಂದಲೂ ಕಡಲಾಮೆಗಳು ದೂರವಾಗಿವೆ. ಸಾಮಾನ್ಯವಾಗಿ ಜಿಲ್ಲೆಯ ತ್ರಾಸಿ-ಮರವಂತೆ, ಗಂಗೊಳ್ಳಿ ಕಡಲ ಕಿನಾರೆಯಲ್ಲಿ ಹೆಚ್ಚಿನ ಕಡಲಾಮೆ ಗೂಡು ಸಿಗುತ್ತಿತ್ತು. ಈಗ ಅವುಗಳು ಕಾಣದಾಗಿವೆ.

ನಶಿಸುತ್ತಿರುವ ಸಂತತಿ: ಪರಿಸರ ಮಾಲಿನ್ಯ, ಸಮುದ್ರದಲ್ಲಿ ತೈಲ ಸೋರಿಕೆ, ಪ್ಲಾಸ್ಟಿಕ್‌ ಹಾವಳಿಯಿಂದ ಕಡಲಾಮೆಗಳ ಸಂತತಿ ಕ್ಷೀಣಿಸುತ್ತಿವೆ.

ಎಫ್ಎಸ್‌ಎಲ್‌ ಇಂಡಿಯಾ ಸಂರಕ್ಷಣೆ: ಜಿಲ್ಲೆಯಲ್ಲಿ 2005ರಿಂದೀಚೆಗೆ ಎಫ್ಎಸ್‌ಎಲ್‌ ಇಂಡಿಯಾ ಎಂಬ ಎನ್‌ಜಿಒ ಸಂಸ್ಥೆ ಅರಣ್ಯ ಇಲಾಖೆಯೊಂದಿಗೆ ಸೇರಿ ಕೋಡಿ ಕನ್ಯಾಣದಿಂದ ಶಿರೂರು ತನಕ ಕಡಲಾಮೆಗಳ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಕಡಲಾಮೆಗಳ ರಕ್ಷಣೆಗೂ ಜಾಗೃತಿ ಮೂಡಿಸುತ್ತಿದೆ. ಕಡಲಾಮೆಗಳು ಮೊಟ್ಟೆ ಇಟ್ಟ ಸಂದರ್ಭ ಮೊಟ್ಟೆ ಒಡೆದು ಮರಿಯಾಗಿ ಸಮುದ್ರ ಸೇರುವ ತನಕ ರಕ್ಷಣೆಗೆ ಕಾವಲು ಕಾಯುತ್ತಾರೆ. ಸಂಸ್ಥೆ ಪ್ರಕಾರ ಜಿಲ್ಲೆಯಲ್ಲಿ 2011ರವರೆಗೆ 10ರಿಂದ 20 ಕಡಲಾಮೆಗಳು ಸಂತಾನೋತ್ಪತ್ತಿಗೆಂದು ತೀರಕ್ಕೆ ಬರುತ್ತಿದ್ದವು. ಈಗ ಇದರ ಸಂಖ್ಯೆ ಕಡಿಮೆಯಾಗಿದೆ.

Advertisement


ದ.ಕ.ದಲ್ಲೂ ಇದೇ ಪರಿಸ್ಥಿತಿ:
ದ.ಕ. ಜಿಲ್ಲೆಯ ತಣ್ಣೀರು ಬಾವಿ ಮತ್ತು ಉಳ್ಳಾಲ ಭಾಗಗಳಲ್ಲಿ ಕಡಲಾಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಕೂಡ ಕಡಲಾಮೆಗಳು ಬರುವುದು ತೀರಾ ಕಡಿಮೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ  ಒಂದೇ ಒಂದು ಕಡಲಾಮೆಗಳೂ ಮೊಟ್ಟೆಯಿಡುವ ಉದ್ದೇಶಕ್ಕೆ ಮಂಗಳೂರಿನ ಕಡಲ ಕಿನಾರೆಗೆ ಬಂದಿಲ್ಲ.

ಉ.ಕ.ದ ಪರಿಸ್ಥಿತಿ ವಿಭಿನ್ನ: ಉ.ಕ. ಜಿಲ್ಲೆಯ ಕರಾವಳಿಗೆ ಇಂದಿಗೂ ಕಡಲಾಮೆಗಳು ಮೊಟ್ಟೆಯಿಡುವ ಉದ್ದೇಶಕ್ಕಾಗಿ ಬರುತ್ತಿದೆ. ಈ ವರ್ಷ ಸುಮಾರು 52 ಕಡಲಾಮೆ ಗೂಡುಗಳು ಜಿಲ್ಲೆಯಲ್ಲಿ ಸಿಕ್ಕಿದ್ದು, ಹೊನ್ನಾವರ ವಿಭಾಗದಲ್ಲಿ 23 ಮತ್ತು ಕುಮಟಾ ವಿಭಾಗದಲ್ಲಿ 19 ಗೂಡುಗಳು ಸಿಕ್ಕಿವೆ. 

ಮೀನುಗಾರ ಮಿತ್ರ ಕಡಲಾಮೆಗಳು: ಮೀನುಗಳ ಬೆಳವಣಿಗೆಯಲ್ಲಿ ಕಡಲಾಮೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಾಮಾನ್ಯ ಮೀನುಗಳ ವೈರಿ ಜೆಲ್ಲಿಫಿಶ್‌ ಕಡಲಾಮೆಗಳ ಆಹಾರ. ಇದರಿಂದ ಇವುಗಳ ಸಂತತಿ ನಿಯಂತ್ರಣದಲ್ಲಿರುತ್ತದೆ. ಇದರೊಂದಿಗೆ ಸಮುದ್ರದ ಹುಲ್ಲು ತಿನ್ನುವುದರಿಂದ ಮೀನುಗಳ ಮೊಟ್ಟೆ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡುತ್ತವೆ. ಇದು ಮೀನುಗಾರರಿಗೆ ನೆರವು ನೀಡುತ್ತದೆ.

ಇಲಾಖೆಯಿಂದಲೂ ಸೌಲಭ್ಯವಿಲ್ಲ: ಈ ಹಿಂದೆ ಅರಣ್ಯ ಇಲಾಖೆ ನೇತೃತ್ವದಲ್ಲಿ ಕಡಲಾಮೆ ಸಂರಕ್ಷಣೆ ಮಾಡಲಾಗುತ್ತಿತ್ತು. ಸುಮಾರು 12000 ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸಿ ಮರಿ ಮಾಡಿ, ಆ ಬಳಿಕ ಸಮುದ್ರಕ್ಕೆ ಬಿಡಲಾಗಿತ್ತು. ಕಡಲಾಮೆ ಮೊಟ್ಟೆಗಳನ್ನು ತೆಗೆಯುವ ವಿಧಾನದ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಇಲಾಖೆ ಅನುದಾನವಿಲ್ಲದ ಕಾರಣ ನಿರಾಸಕ್ತಿ ವಹಿಸಿತ್ತು. ಇದು ಕೂಡ ಸಂರಕ್ಷಣೆ ಹಿನ್ನಡೆಗೆ ಕಾರಣವಾಗಿದೆ ಎಂದು ವನ್ಯಜೀವಿ ತಜ್ಞ ಎನ್‌.ಎ ಮಧ್ಯಸ್ಥ ಅಭಿಪ್ರಾಯ ಪಡುತ್ತಾರೆ.

ಶಿಕ್ಷಾರ್ಹ ಅಪರಾಧ
ಭಾರತದ ವನ್ಯಜೀವಿ ವಿಭಾಗದಲ್ಲಿ ಮೊದಲ ಪಟ್ಟಿಗೆ ಸೇರುವ ಈ ಕಡಲಾಮೆಗಳಿಗೆ ಹೆಚ್ಚಿನ ಮಹತ್ವವಿದೆ. ಇವುಗಳಿಗೆ ಹಾನಿ ಮಾಡಿದರೆ ಜೈಲು ಶಿಕ್ಷೆ ಅಥವಾ ದಂಡ ಕಡ್ಡಾಯ.

2011ರ ಈಚೆಗೆ ಕಡಲಾಮೆಗಳು ಮೊಟ್ಟೆ ಇಡಲು ಬರುವ ಪ್ರಮಾಣ ಕಡಿಮೆಯಾಗುತ್ತಿದೆ. ಪರಿಸರ ಮಾಲಿನ್ಯ, ಬಲೆಗಳಿಗೆ ಸಿಲುಕಿ ಗಾಯಗೊಂಡು ಸಾವನ್ನಪ್ಪುವುದು ಇತ್ಯಾದಿ ಕಾರಣ ಕಡಲಾಮೆ ಸಂಖ್ಯೆ ಕ್ಷೀಣಿಸುತ್ತಿದೆ. 
– ಮಂಜು, ಎಫ್ಎಸ್‌ಎಲ್‌ ಇಂಡಿಯಾ ಕಡಲಾಮೆ ಸಂರಕ್ಷಣೆ ಯೋಜನೆ ಮುಖ್ಯಸ್ಥ

ಈ ವರ್ಷ ಕಡಲಾಮೆಗಳ ಗೂಡು ಸಿಕ್ಕಿಲ್ಲ. ಮೀನುಗಾರಿಕೆ ಸಂದರ್ಭ ಸಿಕ್ಕ ಕಡಲಾಮೆಗಳನ್ನು ನಾವು ರಕ್ಷಣೆ ಮಾಡುತ್ತೇವೆ. ಸಮುದ್ರ ಮಾಲಿನ್ಯದಿಂದ ಬಹಳಷ್ಟು ಕಡಲಾಮೆಗಳು ಸಾವನ್ನಪ್ಪುತ್ತಿದೆ. ಈ ವರ್ಷ ಮಲ್ಪೆ ಭಾಗದಲ್ಲೇ 4-5  ಕಡಲಾಮೆಗಳು ಸಾವನ್ನಪ್ಪಿದೆ.
– ಜನಾರ್ಧನ ತಿಂಗಳಾಯ, ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ

ಭಾರಿ ಅಪರೂಪದ ಆಲೀವ್‌ ರಿಡ್ಲೆ  ಮತ್ತು ಗ್ರೀನ್‌ ಜಾತಿಯ ಕಡಲಾಮೆಗಳು ಇಲ್ಲಿಗೆ ಬರುತ್ತವೆ. ಈ ಅತಿಥಿಗಳ ರಕ್ಷಣೆ ಮಾಡಬೇಕಾದದ್ದು ನಮ್ಮ ಕರ್ತವ್ಯ
-ಎನ್‌.ಎ. ಮಧ್ಯಸ್ಥ, ವನ್ಯಜೀವಿ ತಜ್ಞ

— ಹರೀಶ್‌ ಕಿರಣ್‌ ತುಂಗ, ಸಾಸ್ತಾನ

Advertisement

Udayavani is now on Telegram. Click here to join our channel and stay updated with the latest news.

Next