Advertisement

Special Story: ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ…

01:23 PM Aug 27, 2023 | Team Udayavani |

ಮೊನ್ನೆ ಆಗಸ್ಟ್‌ 23 ರಂದು “ಚಂದ್ರಯಾನ-3′ ಯೋಜನೆ ಯಶಸ್ವಿಯಾದ ಕ್ಷಣದಿಂದ ಚಂದ್ರಮ ಮತ್ತಷ್ಟು ಹತ್ತಿರದವನಾದ. ಅದಕ್ಕೂ ಮುನ್ನ ಅವನನ್ನು ನಮ್ಮ ಕವಿಗಳು, ಚಿತ್ರಸಾಹಿತಿಗಳು ಹೇಗೆಲ್ಲಾ ವರ್ಣಿಸಿದ್ದರು, ಚಿತ್ರಿಸಿದ್ದರು ಅಂದರೆ…

Advertisement

ಚಂದ್ರನಂಗಳಕ್ಕೆ ಕಾಲಿಡಲೇಬೇಕೆಂಬ ಹಂಬಲವಿದ್ದವರು ವಿಜ್ಞಾನಿಗಳಾದರು. ಪದಗಳ ಲಾಲಿತ್ಯದಲ್ಲೇ ಚಂದ್ರನನ್ನು ಆರಾಧಿಸುವೆ ಎಂದವರು ಕವಿಗಳಾದರು. ಪ್ರೇಯಸಿಯ ಸೌಂದರ್ಯವನ್ನೇ ಚಂದ್ರನಿಗೆ ಹೋಲಿಸಿದವರು ರಸಿಕರಾದರು. ಉಳಿದವರು ಚಂದ್ರನೊಂದಿಗೆ ತಮ್ಮ ಗುಟ್ಟುಗಳನ್ನು ಹೇಳಿಕೊಂಡರು, ಅತ್ತರು, ನಕ್ಕರು, ಬಣ್ಣಬಣ್ಣಗಳ ಕನಸು ಕಂಡರು, ಹುಣ್ಣಿಮೆಯ ರಾತ್ರಿಯಲಿ ಚಂದ್ರನೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಅಲ್ಲಿಗೆ ಹುಣ್ಣಿಮೆಯ ಇರುಳಿನಲ್ಲಿ ಬೆಳಕ ಚೆಲ್ಲುವ ಚಂದ್ರನು ಕೇವಲ ಉಪಗ್ರಹವಾಗಿರದೇ ಎಲ್ಲರ ಬಂಧುವಾದ. ಕವಿತೆ, ಹಾಡು, ನೃತ್ಯ, ಚಿತ್ರ ಎಲ್ಲದರಲ್ಲೂ ಇಣುಕಿದ.

ಎಲ್ಲಾ ಕವಿಗಳಿಗೂ ಅಚ್ಚುಮೆಚ್ಚು
ಎಲ್ಲಾ ಕವಿಗಳಿಗೂ ಚಂದಿರನ ಕುರಿತು ಇನ್ನಿಲ್ಲದ ಮೋಹ. ಅವರ ಪದ್ಯ- ಕಥೆಗಳಲ್ಲಿ ಚಂದ್ರನಿಗೆ ಶಾಶ್ವತ ಸ್ಥಾನವಿರುತ್ತಿತ್ತು. ಈ ಮಾತಿಗೆ ಸಿಗುವ ಉದಾಹರಣೆಗಳನ್ನು ನೋಡುತ್ತಾ ಹೋಗಿ. ಕಂದನಿಗೆ ಕೈ ತುತ್ತು ಉಣಿಸುವಾಗ ಅಮ್ಮಂದಿರು- “ಚಂದ್ರನೊಳಗೊಂದು ಮೊಲವಿದೆ. ಅದು ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತದೆ. ನೀನು ಚುಕ್ಕಿ- ತಾರೆಗಳೊಂದಿಗೆ ಆಡಿ ನಲಿಯಬಹುದು’ ಎಂದೆಲ್ಲಾ ಕಥೆ ಹೇಳುತ್ತಾರೆ. ಮಗು ಬೆರಗಾಗಿ ಅಮ್ಮನಾಡುವ ಸುಳ್ಳನ್ನು ನಂಬಿ- “ದೇವರ ಪೆಪ್ಪರಮೆಂಟೇನಮ್ಮಾ ಗಗನದೊಳಲೆಯುವ ಚಂದಿರನು’ ಎಂದು ಪ್ರಶ್ನಿಸುತ್ತದೆ. ಅರ್ಥಾತ್‌, ಕುವೆಂಪು ಅವರು ತಮ್ಮ ಲೇಖನಿಯ ಮೂಲಕ ಹೀಗೆ ಹೇಳಿಸುತ್ತಾರೆ. ಅಮ್ಮ ಉತ್ತರಿಸದಿದ್ದಾಗ ಪುನಃ ಮಗು- “ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೇ? ಬೆಳ್ಳಿಯ ಮೋಡದ ಅಲೆಗಳ ಕಂಡು ಚಂದಿರ ಬೆದರಿಹನೆ?’ ಎಂದು ಅಚ್ಚರಿಯಿಂದ ಕೇಳುವಂತೆ ಮಾಡುತ್ತಾರೆ ಕವಿ ನೀ. ರೆ. ಹಿರೇಮಠ.

ಯಾರನ್ನೂ ಬಿಡದ ಮಾಯಾವಿ…
ಅದೇ ಮಗುವನ್ನು ತಟ್ಟಿ ಮಲಗಿಸುವಾಗ- “ಮಲಗು ಮುದ್ದಿನ ಗಿಣಿಯೆ ಮಲಗು ಮುತ್ತಿನ ಮಣಿಯೆ ಚಂದಿರನೂರ ಹೋಗುವೆಯಂತೆ…’ ಎನ್ನುವ ಮೂಲಕ “ಮೈಸೂರ ಮಲ್ಲಿಗೆ’ಯ ಕವಿ ಕೆಎಸ್‌ನ, ಅಮ್ಮನಿಗೆ ಮಗುವನ್ನು ಮಲಗಿಸಲು ನೆರವಾಗುವರು. ದುಃಖದಲ್ಲೇ ಚಂದಿರನನ್ನು ನೆನೆದವರು ವರಕವಿ ಬೇಂದ್ರೆ. “ದಿಗಿಲಾಗಿ ಅನ್ನತದ ಜೀವ, ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ ಹುಣ್ಣಿಮೆ ಚಂದಿರನ ಹೆಣಾ ಬಂತೋ, ಮುಗಿಲಾಗ ತೇಲತಾ ಹಗಲ’ ಎಂದು ಮಗುವಿನ ಶವದೆದುರು ಕುಳಿತು ದುಃಖೀಸುತ್ತಿರುವ ಹೆಂಡತಿಗೆ ಸಾಂತ್ವನ ಹೇಳುವ ಪ್ರಯತ್ನ ಮಾಡುತ್ತಾರೆ.

ಜಿ. ಎಸ್‌. ಶಿವರುದ್ರಪ್ಪನವರು, “ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೇ ಸಾಕೇ?’ ಎಂದು ಭೂಮಿ ತೂಕದ ಸಮಸ್ತ ಸ್ತ್ರೀ ಕುಲಕ್ಕೆ ಚಂದ್ರನ ಸಾಮರ್ಥ್ಯವನ್ನು ಹೋಲಿಸುತ್ತಾರೆ.

Advertisement

ಕವಿ ಎನ್‌. ಎಸ್‌. ಲಕ್ಷ್ಮೀ ನಾರಾಯಣ ಭಟ್ಟರು, “ಯಾರು ಕರೆಸುವರು ತಪ್ಪದೆ ಸೂರ್ಯನ, ಯಾರು ಕರೆಸುವರು ಬಾನಿಗೆ ಹುಣ್ಣಿಮೆ ಚಂದ್ರನ’ ಎಂದು ಬೀಸುತ್ತಿರುವ ಗಾಳಿಯನ್ನು ಪ್ರಶ್ನಿಸುವಾಗ ಚಂದ್ರನನ್ನು ನೆನೆಯುತ್ತಾರೆ. ಎಸ್‌. ವಿ. ಪರಮೇಶ್ವರ ಭಟ್ಟರು- “ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು’ ಎನ್ನುತ್ತಾ ಚಂದಿರನಿಗೂ ಆಯಾಸ ಆಗಬಹುದೆಂದು ಕಾಳಜಿ ತೋರುತ್ತಾರೆ.

ನೈದಿಲೆಗೆ ಸಂಭ್ರಮ…
“ಮಧುಮಾಸ ಚಂದ್ರಮ ನೈದಿಲೆಗೆ ಸಂಭ್ರಮ…’ ಎನ್ನುತ್ತಾ ಗೆಳತಿಯರಿಬ್ಬರು ಹುಣ್ಣಿಮೆಯ ರಾತ್ರಿಯಲಿ ತಮ್ಮ ಇನಿಯನ ನೆನೆದು ಪುಳಕಿತರಾಗುತ್ತಾರೆ. ಒಂದು ಕಡೆ ಪ್ರಿಯಕರ ತನ್ನ ಬಾಲ್ಯದ ಗೆಳತಿಗೆ ಎದೆಯಲ್ಲಿ ಅದುಮಿಟ್ಟ ಪ್ರೀತಿಯನ್ನು ಅವಳೆದುರು ವ್ಯಕ್ತಪಡಿಸಲಾ­ಗದೆ ಪ್ರೇಮ ಚಂದ್ರಮ ಕೈಗೆ ಸಿಗುವುದೇ ಹೇಳೆ ತಂಗಾಳಿ ಎಂದು ತನ್ನ ಒಲವನ್ನು ಅಳುಕಿನಿಂದಲೇ ಹೊರಚೆಲ್ಲುತ್ತಾನೆ. ಇನ್ನೊಂದು ಕಡೆ, “ಚಂದ್ರನ ಚೆಲುವಿಗೆ ಚಂದ್ರನೆ ಸಾಟಿ ಹೋಲಿಸಲಾರಿಲ್ಲ ನಿನ್ನೀ ಚಂದಕೆ ನೀನೆ ಸಾಟಿ ಬೇರೆ ಯಾರಿಲ್ಲ…’ ಎಂದು ಮನದನ್ನೆಯ ಚೆಂದವನ್ನು ನಾಯಕ ಹಾಡಿ ಹೊಗಳುತ್ತಾನೆ. ಮತ್ತೂಂದೆಡೆ, ಪ್ರಿಯತಮೆ ಒಲಿದ ಸಂಭ್ರಮದಲ್ಲಿ ಮೈಮರೆತು “ಬಾ ನಲ್ಲೆ ಬಾ ನಲ್ಲೆ… ಮಧುಚಂದ್ರಕೆ, ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ…’ ಎಂದು ತನ್ನೊಳಗಿನ ಪ್ರಣಯದಿಂಗಿತವನ್ನು ವ್ಯಕ್ತಪಡಿಸುತ್ತಾನೆ.

ಹೀಗೆ, ಇಷ್ಟು ದಿನಗಳ ಕಾಲ ಕೇವಲ ಕವಿತೆ ಹಾಗೂ ಸಿನಿಮಾ ಗೀತೆಗಳಲ್ಲಿ ಮಿನುಗಿ ರಂಜಿಸುತ್ತಿದ್ದ ಚಂದ್ರನೀಗ ವಿಕ್ರಮನ ಸ್ಪರ್ಶಕ್ಕೂ ನಿಲುಕಿದ. ನಮ್ಮ ಅಂಗಳದ ಹೊಸ ಗೆಳೆಯನಾದ. ಬಂಧುವಿನಂತೆ ಮತ್ತಷ್ಟು ಹತ್ತಿರದವನಾದ..!

ಚಂದಮಾಮ ಚಕ್ಕುಲಿಮಾಮ…
ಸಿನಿಮಾ ಗೀತೆಗಳಲ್ಲೂ ನುಸುಳಿ ಎಲ್ಲರ ಮನೆಮನಗಳಲ್ಲಿ ಬೆಳದಿಂಗಳು ಚೆಲ್ಲುವನು ಬಿದಿಗೆ ಚಂದ್ರಮ. “ಚಂದಮಾಮ ಚಕ್ಕುಲಿಮಾಮ ನನ್ನನ್ನು ನೋಡಿ ನಗುತಿರುವ ಮುತ್ತನು ಕೊಟ್ಟು ಕಚಗುಳಿ ಇಟ್ಟು ನಿನ್ನನು ನಗಿಸು ಎನುತಿರುವ’ ಎಂದು ಮು¨ದ್ದಾಗಿ ಹಾಡುತ್ತಾ ತನ್ನ ಮಾಮನ ಕೋಪ ತಣಿಸಲು ಮಗು ಪ್ರಯತ್ನಿಸುವುದನ್ನು ಆಲಿಸಿದರೆ ಎಂಥವರಿಗೂ ಕಚಗುಳಿ ಆಗದಿರದು. ಅದಕ್ಕೆ ಕಾರಣವೂ ಗಗನದೊಳು ನಗುತಿರುವ ಚಂದಮಾಮನೇ. ಮತ್ತೂಂದು ಚಿತ್ರದಲ್ಲಿ- “ಬಾನ ದಾರಿಯಿಂದ ಸೂರ್ಯ ಜಾರಿ ಹೋದ ಚಂದ್ರ ಮೇಲೆ ಬಂದ…’ ಎನ್ನುತ್ತಾ ತಾನು ಪುಟ್ಟ ಮಗುವಿದ್ದಾಗ ತನಗೆ ಹಾಡಿದ ಅದೇ ಲಾಲಿ ಹಾಡನ್ನು ಪುನಃ ತನ್ನ ಪ್ರೀತಿಯ ದೊಡ್ಡಪ್ಪನಿಗೇ ಅರ್ಪಿಸುತ್ತಾನೆ ಮುದ್ದು ಬಾಲಕ. ಹೀಗೆ, ಪದ ಮತ್ತು ಹಾಡುಗಳ ಮೂಲಕ ಚಂದ್ರಮ ನೀಡಿದ ಪುಳಕಕ್ಕೆ ಕೊನೆ ಮೊದಲಿಲ್ಲ.

– ಮೇಘನಾ ಕಾನೇಟ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next