Advertisement

ನಗರ ಜನತೆ ಸಾಥ್‌ ನೀಡಿದ್ದರೆ ಗುರಿ ತಲುಪುತ್ತಿದ್ದೆವು: ಮನೋಜ್‌ಕುಮಾರ್‌ ಮೀನಾ

11:51 AM May 09, 2024 | Team Udayavani |

ಲೋಕಸಭೆ ಅಥವಾ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಾಮಾನ್ಯವಾಗಿ ಮತದಾರರಿಗೆ ಉಚಿತ ಉಡುಗೊರೆಗಳು, ಹಣ ಹಂಚಿಕೆಗಳ ಆಮಿಷ ಒಡ್ಡಿರುವ ಕುರಿತು ದೂರುಗಳು ಬರುವುದು ಹೆಚ್ಚು. ಆದರೆ ಈ ಬಾರಿ ಅವೆಲ್ಲವುಗಳಿಗಿಂತ ಹೆಚ್ಚು “ದ್ವೇಷ ಭಾಷಣ’ಗಳ ಕುರಿತಾಗಿ ದೂರುಗಳು ಬಂದಿವೆ.

Advertisement

ರಾಜ್ಯದಲ್ಲಿ ಎಲ್ಲ 28 ಕೇತ್ರಗಳ ಮತದಾನ ಮುಗಿದಿದ್ದು ದಾಖಲೆ ಪ್ರಮಾಣದ ಶೇ.70.41 ಮತದಾನ ಆಗಿದೆ. ಚುನಾವಣ ದಿನಾಂಕ ಪ್ರಕಟಗೊಂಡು ಎರಡನೇ ಹಂತದ ಮತದಾನ ಮುಗಿದ ಮೇ 7ರ ವರೆಗೆ ಸುಮಾರು 50 ದಿನಗಳ ಕಾಲ ನಿರಂತರವಾಗಿ ಇಡೀ ಚುನಾವಣ ಪ್ರಕ್ರಿಯೆ ಮೇಲೆ ನಿಗಾ ಇಟ್ಟು ಸಮರ್ಥವಾಗಿ ನಿರ್ವಹಣೆ ಮಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಈಗ ಮತ ಎಣಿಕೆ ಹಾಗೂ ಅದರ ಮಧ್ಯೆ ಎದುರಾಗುವ ವಿಧಾನಪರಿಷತ್‌ನ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಚುನಾವಣೆಯ ನಿರ್ವಹಣೆ, ಆ ಸಂದರ್ಭದಲ್ಲಿ ಆದ ಅನುಭವ, ಎದುರಾದ ಸವಾಲುಗಳ ಬಗ್ಗೆ “ನೇರಾನೇರ’ ಮಾತನಾಡಿ ದ್ದಾರೆ. ಅವರ ವಿಶೇಷ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಚುನಾವಣೆ ನಿರ್ವಹಣೆಯ ಒಟ್ಟಾರೆ ಅನುಭವ ಹೇಗಿತ್ತು? ನಿಮಗೆ ಸಮಾಧಾನ ತಂದಿದೆಯಾ?
ಒಟ್ಟಾರೆ ನಿರ್ವಹಣೆ ಚೆನ್ನಾಗಿತ್ತು. ಶಕ್ತಿ ಮೀರಿ ಶ್ರಮ ಹಾಕಲಾಯಿತು. ಮತಗಟ್ಟೆಗಳಿಗೆ ಹೆಚ್ಚು ಜನ ಬರುವುದೇ ನಮ್ಮ ಶ್ರಮಕ್ಕೆ ಸಾಕ್ಷಿ. ನನ್ನ ವೈಯಕ್ತಿಕ ಸಮಾಧಾನದ ಪ್ರಶ್ನೆ ಅಲ್ಲ. ಮತಗಟ್ಟೆ ಅಧಿಕಾರಿಯಿಂದ ಜಿಲ್ಲಾಧಿಕಾರಿವರೆಗೆ ಹಾಗೂ ಚುನಾವಣ ನೀತಿ ಸಂಹಿತೆ ಜಾರಿ ತಂಡಗಳು ಸತತ 50 ದಿನಗಳ ಕಾಲ ಹಗಲು-ರಾತ್ರಿ ಎನ್ನದೇ, ಮಳೆ-ಬಿಸಿಲು ಲೆಕ್ಕಿಸದೆ ನಿರಂತರವಾಗಿ ಕೆಲಸ ಮಾಡಿದ್ದಾರೆ. ಚುನಾವಣ ಕರ್ತವ್ಯದ ವೇಳೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಹೆಚ್ಚು ಜನ ಮತಗಟ್ಟೆಗೆ ಬಂದು ವೋಟ್‌ ಮಾಡಿದರೆ ಅದಕ್ಕಿಂತ ದೊಡ್ಡ ಸಮಾಧಾನ ಇಲ್ಲ. ಈ ಸಮಾಧಾನದಲ್ಲಿ ನಾನೊಬ್ಬನೇ ಅಲ್ಲ ಇಡೀ ಚುನಾವಣ ಸಿಬಂದಿ ಪಾಲ್ಗೊಳ್ಳುತ್ತಾರೆ.

ಮತದಾನ ಮುಗಿಯಿತು. ಶೇ.72ರ ಗುರಿ ಮುಟ್ಟಲು ಸಾಧ್ಯವಾಗಿಲ್ಲ; ಯಾಕೆ?
ನಿಗದಿತ ಗುರಿ ಮುಟ್ಟದಿರಬಹುದು. ಆದರೆ ಶೇ.70.41 ಮತದಾನವಾಗಿದ್ದು ಇದು ಲೋಕಸಭೆ ಚುನಾವಣೆಗಳ ಈವರೆಗಿನ ದಾಖಲೆ ಮತದಾನವಾಗಿದೆ. ಕಳೆದ ಬಾರಿ ರಾಯಚೂರಲ್ಲಿ ಅತೀ ಕಡಿಮೆ ಮತದಾನ ಆಗಿತ್ತು. ಈ ಬಾರಿ ಅಲ್ಲಿ ಶೇ.5 ಮತದಾನ ಹೆಚ್ಚಳವಾಗಿದೆ. ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮತದಾನ ಹೆಚ್ಚಾಗಿದೆ. ಬಿಸಿಲು, ಪ್ರತಿಕೂಲ ಸನ್ನಿವೇಶಗಳ ಹೊರತಾಗಿಯೂ ಜನ ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದಿದ್ದಾರೆ. ಹೆಚ್ಚು ಸಂಖ್ಯೆಯ ಮತದಾರರನ್ನು ಮತಗಟ್ಟೆಗಳಿಗೆ ತರುವಲ್ಲಿ ಆಯೋಗ ಯಶಸ್ವಿಯಾಗಿದೆ. ಮತದಾನ ಪ್ರಮಾಣದಲ್ಲಿ ಆಂಧ್ರಪ್ರದೇಶ ಹೊರತುಪಡಿಸಿ ದಕ್ಷಿಣ ಭಾರತದಲ್ಲಿ ನಾವೇ ಮುಂದಿರುತ್ತೇವೆ.

ಮತದಾನದ ವೇಳೆ ಆಯೋಗ ಎದುರಿಸಿದ ಸವಾಲುಗಳು ಯಾವುವು?
ದೊಡ್ಡ ಸವಾಲು ಏನೂ ಇರಲಿಲ್ಲ. ಯಾವೆಲ್ಲ ಸವಾಲುಗಳು ಬರಬಹುದು ಎಂದು ಮೊದಲೇ ಅಂದಾಜಿಸಲಾಗಿತ್ತು. ಬಿಸಿಲು ಉತ್ತುಂಗದಲ್ಲಿರುವ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಮೊದಲೇ ತಿಳಿದಿತ್ತು. ಹಾಗಾಗಿ ಅಂತಹ ಸವಾಲುಗಳು ಇರಲಿಲ್ಲ. ಆದರೆ ರಾಜಧಾನಿ ಬೆಂಗಳೂರಿನ ಮತದಾರರನ್ನು ಮತಗಟ್ಟೆಗೆ ಕರೆತರಲು ಆಯೋಗ ಮಾಡಿದ ಪ್ರಯತ್ನಗಳು ಸಫ‌ಲವಾಗಿಲ್ಲ. ನಮ್ಮ ಎಲ್ಲ ಪ್ರಯತ್ನ ಗಳ ಹೊರತಾಗಿಯೂ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆ ಗಳಿಗೆ ಕರೆತರಲು ಸಾಧ್ಯವಾಗಿಲ್ಲ ಅನ್ನುವುದೇ ನಮ್ಮ ಮುಂದಿರುವ ಸವಾಲು ಹಾಗೂ ಚಿಂತನೆಯ ವಿಚಾರ. ನಗರ ಮತದಾರರು ಸಾಥ್‌ ನೀಡಿದ್ದರೆ ಸುಲಭವಾಗಿ ಗುರಿ ಮುಟ್ಟಲು ಸಾಧ್ಯವಾಗುತ್ತಿತ್ತು.

Advertisement

ಮತ ಎಣಿಕೆ ಸಿದ್ಧತೆ ಹೇಗಿದೆ?
ಈಗಷ್ಟೇ ಮತದಾನ ಮುಗಿದಿದೆ. ಇನ್ನೇನಿದ್ದರೂ ಮತ ಎಣಿಕೆಗೆ ಸಿದ್ಧತೆಗಳನ್ನು ಪ್ರಾರಂಭಿಸಿಬೇಕು. ಸದ್ಯ ಮತಯಂತ್ರಗಳು ಇಟ್ಟಿರುವ ಸ್ಟ್ರಾಂಗ್‌ ರೂಂಗಳನ್ನು ಕಾಯುವುದು ನಮಗಿರುವ ದೊಡ್ಡ ಸವಾಲು. ಮಳೆ, ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ ಇಂತಹ ಅನಾಹುತಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಇದರ ಜತೆಗೆ ಮತ ಎಣಿಕೆ ಸಿಬಂದಿಗೆ ತರಬೇತಿ ಕೊಡಬೇಕಾಗಿದೆ. ಈ ನಡುವೆ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳ 6 ವಿಧಾನಪರಿಷತ್‌ ಸ್ಥಾನಗಳಿಗೆ ಚುನಾವಣೆಯೂ ಘೋಷಣೆ ಯಾಗಿದ್ದು ಇದೇ ಅವಧಿಯಲ್ಲಿ ಅದನ್ನು ನಿರ್ವಹಿಸಬೇಕಾಗಿದೆ.

ಈ ಬಾರಿ ಬಂದಿರುವ ದೂರುಗಳು ಯಾವ್ಯಾವು?
ಸಾಮಾನ್ಯವಾಗಿ ಲೋಕಸಭೆ ಚುನಾವಣೆಯಲ್ಲಿ ಉಚಿತ ಉಡುಗೊರೆ, ಹಣ ಹಂಚಿಕೆಯ ದೂರುಗಳು ಬರುತ್ತವೆ. ಆದರೆ ಈ ಬಾರಿ “ದ್ವೇಷ ಭಾಷಣ’ಗಳ ದೂರುಗಳು ಹೆಚ್ಚಾಗಿ ಬಂದಿವೆ. ಜಾತಿ-ಧರ್ಮದ ಆಧಾರದಲ್ಲಿ ವ್ಯಕ್ತಿಗತ ಟೀಕೆ ಮಾಡಿದ, ದ್ವೇಷ ಭಾಷಣ ಮಾಡಿದ ಹಾಗೂ ಧಾರ್ಮಿಕ ಕೇಂದ್ರಗಳನ್ನು ದುರ್ಬಳಕೆ ಮಾಡಿಕೊಂಡಿರುವ ದೂರುಗಳು ಹೆಚ್ಚಾಗಿ ಬಂದವು. ಆ ಎಲ್ಲ ದೂರುಗಳ ಬಗ್ಗೆ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಚುನಾವಣ ಆಯೋಗಕ್ಕೆ ಬಂದ ದೂರುಗಳಿಗೆ ತಾರ್ಕಿಕ ಅಂತ್ಯ ಸಿಗುತ್ತಾ?
ಅನುಮಾನವೇ ಇಲ್ಲ. ಆಯೋಗಕ್ಕೆ ಬರುವ ಪ್ರತಿಯೊಂದು ದೂರನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ದೂರು ಬಂದ ತತ್‌ಕ್ಷಣ ಪೊಲೀಸರು ಎಫ್ಐಆರ್‌ ದಾಖಲಿಸುತ್ತಾರೆ. ತನಿಖೆ ನಡೆದು ಕೋರ್ಟ್‌ ಗೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗುತ್ತದೆ. ವಿಚಾರಣೆ ನಡೆದು ಶಿಕ್ಷೆಯೋ, ಖುಲಾಸೆಯೋ ಅನ್ನುವುದು ನಿರ್ಧಾರವಾಗುತ್ತದೆ. ಆಯೋಗಕ್ಕೆ ಬಂದ ದೂರಿನ ಎಫ್ಐಆರ್‌ ದಾಖಲಾದ ತತ್‌ಕ್ಷಣ ಆ ಕೇಸ್‌ ಪೊಲೀಸ್‌ ಇಲಾಖೆಗೆ ಹೋಗುತ್ತದೆ. ಹಾಗಂತ ಆಯೋಗ ಸುಮ್ಮನೆ ಕೂರುವುದಿಲ್ಲ. ಪ್ರಕರಣದ ವಸ್ತುಸ್ಥಿತಿ ಏನಾಯಿತು ಎಂಬ ಬಗ್ಗೆ ಜಿಲ್ಲಾಧಿಕಾರಿ, ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಮೂಲಕ ಮಾಹಿತಿ ತರಿಸಿಕೊಂಡು, ಮುಂದಿನ ಸೂಚನೆಗಳನ್ನು ನೀಡಲಾಗುತ್ತದೆ.

ಈ ಬಾರಿ ಚುನಾವಣ ಅಕ್ರಮ ಜಪ್ತಿ ಹೆಚ್ಚಾಗಿದೆ. ಇದು ಕಟ್ಟುನಿಟ್ಟಿನ ಕ್ರಮಗಳ ಪರಿಣಾಮವೋ? ಚುನಾವಣೆ ಮೇಲೆ ಹಣದ ಪ್ರಭಾವದ ಸಂಕೇತವೋ?
ಇದು ಒಂದಕ್ಕೊಂದು ಸಂಬಂಧಪಟ್ಟ ಪ್ರಶ್ನೆಗಳು. ಚುನಾವಣ ಅಕ್ರಮ ಜಪ್ತಿ ಹೆಚ್ಚಾಗಿದೆ ಎಂದರೆ, ಚುನಾವಣೆಯಲ್ಲಿ ಹಣ ಸೇರಿದಂತೆ ಇತರ ಆಮಿಷ, ಅಕ್ರಮಗಳು ಹೆಚ್ಚಾಗಿವೆ ಎಂದು ಅಂದಾಜಿಸಬಹುದು. ಆದರೆ ಭಾರತ ಚುನಾವಣ ಆಯೋಗದ ನಿರ್ದೇಶನದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಪರಿಣಾಮವೇ ದೊಡ್ಡ ಮಟ್ಟದಲ್ಲಿ ಚುನಾವಣ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯವಾಯಿತು. ಭಾರತದ ಮುಖ್ಯ ಚುನಾವಣ ಆಯುಕ್ತರು ಕರ್ನಾಟಕದಲ್ಲಿನ ಹಣದ ಪ್ರಭಾವದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅದನ್ನು ಮುಂದಿಟ್ಟುಕೊಂಡು ನೀತಿ ಸಂಹಿತೆ ಜಾರಿ ತಂಡಗಳ ಬಲಿಷ್ಠ ಜಾಲ ಹೆಣೆಯಲಾಗಿತ್ತು. ಕಳೆದ ವಿಧಾನಸಭೆ ಚುನಾವಣೆ ವೇಳೆ ಕಂಡುಕೊಂಡ ಅನುಭವಗಳ ಆಧಾರದಲ್ಲಿ ಪಾರ್ಲಿಮೆಂಟ್‌ ಚುನಾವಣೆಗೆ ನೀತಿ ಸಂಹಿತೆ ಜಾರಿ ವ್ಯವಸ್ಥೆ ರೂಪಿಸಲಾಗಿತ್ತು.

ಚುನಾವಣ ಆಯೋಗ ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡುತ್ತದೆ ಎಂಬ ಆರೋಪ ಮಾಡು ತ್ತಾರಲ್ಲ? ಹಾಗಿದ್ದರೆ ಆಯೋಗ ಆಳುವ ಪಕ್ಷದ “ಕೈಗೊಂಬೆ’ಯಾ”?
ಖಂಡಿತ ಹಾಗಿಲ್ಲ. ಚುನಾವಣ ಆಯೋಗ ಆಳುವ ಪಕ್ಷದ ಕೈಗೊಂಬೆ ಅಲ್ಲ. ಬದಲಿಗೆ, ಆಡಳಿತಾರೂಢ ಪಕ್ಷದ ಮೇಲೆಯೇ ಆಯೋಗ ಹೆಚ್ಚಿನ ನಿಗಾ ಇಟ್ಟಿರುತ್ತದೆ. ಏಕೆಂದರೆ ಆಡಳಿತ ಪಕ್ಷದ ಬಳಿ ಅನುಕೂಲಗಳು ಹೆಚ್ಚಿರುತ್ತವೆ. ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಆಡಳಿತ ಪಕ್ಷದ ಮೇಲೆ ಹೆಚ್ಚು ನಿಗಾ ಮತ್ತು ನಿಯಂತ್ರಣ ಇಡಬೇಕಾಗುತ್ತದೆ. ವಿಶೇಷವಾಗಿ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ-ಬೇರೆ ಪಕ್ಷಗಳು ಆಡಳಿತದಲ್ಲಿರುವಾಗ ಅದನ್ನು ನಿಭಾಯಿಸುವುದು ಸವಾಲಿನ ಕೆಲಸವಾಗಿರುತ್ತದೆ.

ಉದಯವಾಣಿ ಸಂದರ್ಶನ: ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next