ಚಳಿಗಾಲವು ಬೆಳಗಿನ ಜಾವದ ನಿದ್ದೆಯಿಂದ ಎದ್ದೇಳದೇ ರಗ್ಗುಹೊದ್ದು ಮಲಗಲು ಎಷ್ಟು ಪ್ರೇರೇಪಿಸುತ್ತದೋ, ಆರೋಗ್ಯಕ್ಕಾಗಿ ವ್ಯಾಯಾಮ, ವಾಕಿಂಗ್ ನಂತೆಯೇ ಮಂಜು ಮುಸುಕಿನ ಬೆಳಗನ್ನು, ಆ ಥಂಡಿ ಹವೆಗೆ ಬೆಚ್ಚಗೆ ಒಂದು ಮಂಕಿ ಕ್ಯಾಪು, ಸ್ವೆಟರೊಳಗೆ ತೂರಿ ಕೊರಳಲ್ಲಿ ಕ್ಯಾಮೆರಾ ನೇತಾಕಿಕೊಂಡು ಬೈಕ್ ಏರಿ ಹಾಡು ಗುನುಗುತ್ತಾ ಹೊರಟರೆ ಊರ ಹೊರಗಿನ ಹಚ್ಚ ಹಸಿರಿನ ಹಾಸು, ಬಿದ್ದ ಮಂಜು, ಮಬ್ಬಿನಲ್ಲೇ ಎದ್ದು ಇಣುಕುವ ಸೂರ್ಯನನ್ನು ಸೆರೆ ಹಿಡಿಯಲೂ ಅಷ್ಟೇ ಆಸೆಯನ್ನೂ ಹುಟ್ಟಿಸುತ್ತದೆ.
ಹಳ್ಳಿಯಿಂದ ಬುಟ್ಟಿ ಹೊತ್ತು ಸೊಪ್ಪು, ತರಕಾರಿ ಮಾರಲು ತಯಾರಾಗುತ್ತಿರುವ ರೈತಾಪಿ ಹೆಣ್ಣುಮಕ್ಕಳು, ಹಾಲಿನ ಪ್ಯಾಕೆಟ್ಟು, ದಿನಪತ್ರಿಕೆಗಳನ್ನು ಜೋಡಿಸಿಕೊಂಡು ಹೊತ್ತೂಯ್ಯಲು ಸೈಕಲ್ ಸ್ಟಾಂಡ್ ಒದೆಯುತ್ತಿರುವ ಚಿಕ್ಕ ವಯಸ್ಸಿನ ಗಂಡು ಮಕ್ಕಳ ದಿನಚರಿ ಶುರುವಾಗುವುದೇ ನಾಲ್ಕುವರೆ ಐದು ಗಂಟೆ ಸುಮಾರಿಗೆ. ಈ ಮಧ್ಯೆ ಊದುಬತ್ತಿ ಬೆಳಗಿ ಒಂದು ಕಪ್ಪು ಚಹಾವನ್ನು ಭೂಮಿಗೆ ಸುರುವಿ ಬಂದ ಮೊದಲ ಗಿರಾಕಿಗೆ, “ತಗಳಿ ಸಾ…’ ಎನ್ನುವ ಟೀ ಅಂಗಡಿಯವನು.
ಕೃಷಿ ಮಾರುಕಟ್ಟೆಯ ಬಯಲು ಹಾಸಿಗೆಯಿಂದ ಎದ್ದು ಸುತ್ತಲಿದ್ದ ಒಂದಿಷ್ಟು ಸೌದೆ, ಒಣ ಕಸವನ್ನು ಗುಡ್ಡೆ ಹಾಕಿ ಕಡ್ಡಿಗೀರಿ ಉರಿ ಹಚ್ಚಿ, “ಆಹಾ..!’ ಎಂದು ಅಂಗೈ ಬೆಚ್ಚಗೆ ಮಾಡಿ ಕೆನ್ನೆ ಗಲ್ಲಕ್ಕೆ ಒತ್ತಿ ಸುಖೀಸಿ ಬೀಡಿ ಹೊಗೆ ಬಿಡುವ ಕೂಲಿಕಾರ್ಮಿಕರು, ಸ್ವತ್ಛಗೊಳಿಸಲು ಬರುವ ಪೌರಕಾರ್ಮಿಕರು ಹೀಗೆ…
ಆರಂಭದ ಫೋಟೋಗ್ರಫಿಯ ಚಳಿಗಾಲದ ಒಂದು ದಿನ ನನ್ನನ್ನೂ ಹೀಗೆ ಎಚ್ಚರಿಸುವಂತೆ ತೆರೆದುಕೊಂಡಿತು. ಚೆಂದನೆ ನೌಕರಿಯಿದ್ದೂ, ಬೆಳಿಗ್ಗೆ ಕ್ಯಾಮೆರಾ ಹಿಡಿದು ಹೊರಟಾಗ ಇದ್ಯಾವಾಗ ಶುರು ಮಾಡಿಕೊಂಡರು? ಎನ್ನುವಂತೆ, ಓಣಿಯ ಮನೆ ಮುಂದೆ ಪಾರಿಜಾತ ಹೂವಿನ ಫೋಟೋ ತೆಗೆಯುವುದನ್ನು ನೋಡಿದ ಗೃಹಿಣಿಯ ಲುಕ್ಕು. ಅದಾಗಿ ನಾನು ಊರ ಹೊರಗೆ ಒಂದು ಚೆಕ್ ಡ್ಯಾಮ್‌ನ ಶೇಖರಣೆ, ನೀರಲ್ಲಿ ಜಮೆಯಾಗುತ್ತಿದ್ದ ಪಕ್ಷಿಗಳನ್ನು, ಸೂಯೊìದಯದ ಚಿತ್ರ ಸೆರೆಹಿಡಿಯಲು ಹೊರಟರೆ ಹೊಲ-ತೋಟಕ್ಕೆ ತೆರಳುವ ಜನ ನಿಲ್ಲಿಸಿ ಕೇಳಿದ್ದರು; “ಇಲ್ಲೇನ್ ಕೆಲ್ಸ ನಿಮ್ಗೆ?!’ ಅಂತ. ಅಂಥಾದ್ದರಲ್ಲಿ ನೆಲಹಾಸು ಹುಲ್ಲಿನ ಮೇಲೆ ಬಿದ್ದ ಮಂಜಿನ ಹನಿಗಳು ಎಳೆ ಬಿಸಿಲಿಗೆ ಮಿನುಗುವ ಜೋಡಿಸಿದ ಮುತ್ತಿನಂತಿರುವ ಚಿತ್ರವನ್ನು ಸೆರೆಹಿಡಿಯಲು ಪಟ್ಟಾಗಿ ಕುಳಿತೆ. ಅಕ್ಷರಶಃ ಅಲ್ಲೊಬ್ಬರು, “ಬೈಲ್ ಕಡಿಗೆ ಹೋಗಾ ಜಾಗ್ಧಾಗ ಅದೇನ್ ಫೋಟೋ ಹಿಡಿಯಾಕ್ ಬಂದ್ಯೋ ಮಾರಾಯ..?’ ಅಂದು ಬಿಟ್ಟಿದ್ದರು. ನಾನು ನಕ್ಕು ಸುಮ್ಮನಾದೆ. ಮಂಜಿನ ಹನಿ ಚಿತ್ರವೆಂದರೇನೇ ಖುಷಿ ಪಟ್ಟು ಫೋಟೋ ತೆಗೆಯುವ ನನಗೆ, ನೆಲಹಾಸಿನ ಹುಲ್ಲಿನಲ್ಲಿ ಸಾಲಿಡಿದು ಪೊಣಿಸಿದ ಮುತ್ತುಗಳಂತೆ ಗೋಚರಿಸಿದ ಚಿತ್ರ ಸಿಕ್ಕರೆ ಸುಮ್ಮನಿರುವುದಾದರೆ ಹೇಗೆ? ಎಳೆ ಬಿಸಿಲಿಗೆ ಹೊಳೆಯುವ ಹನಿಬಿಂದು ಸಾಲುಗಳ ಫೋಟೋ ಸಿಕ್ಕ ಖುಷಿಯಿದೆಯಲ್ಲಾ? ಆ ಖುಷಿ ಕ್ಷಣದ್ದಷ್ಟೇ ಅಲ್ಲ, ನನ್ನ ಸುಮಾರು ಚಳಿಗಾಲಗಳನ್ನು ಬೆಚ್ಚಗಿಟ್ಟಿತ್ತು. ಅದಾಗಿ ಸುಮಾರು ಎಂಟು ವರ್ಷದ ನಂತರ ಮಳೇಮಲ್ಲೇಶ್ವರ ಬೆಟ್ಟದಲ್ಲಿ ತೆಗೆದ ಮಂಜಿನ ಹನಿಗಳ ಫೊಟೋ ಕೂಡ ಇಷ್ಟೇ ಖುಷಿ ಕೊಟ್ಟಿದೆ.
ಫೋಟೋಗ್ರಫಿ ಎಂಬ ಹವ್ಯಾಸ ನನ್ನನ್ನು ಸೂರ್ಯೋದಯಕ್ಕೆ ಮುನ್ನ ನಿಚ್ಚಳವಾಗಿ ಪ್ರಕೃತಿ ಸೌಂದರ್ಯವನ್ನು, ಹವೆಯನ್ನು ಸವಿಯಲು ಅಣಿಗೊಳಿಸಿತೆಂದರೆ, ಆ ಹವ್ಯಾಸಕ್ಕೊಂದು ಧನ್ಯವಾದ ಹೇಳಲೇಬೇಕಲ್ಲವಾ? ಮೊದ ಮೊದಲು ಕ್ಯಾಮೆರಾ ಹಿಡಿದು ಹೊರ ನಡೆದರೆ ವಿಚಿತ್ರವಾಗಿ ನೋಡಿದ ಜನ ನನ್ನಲ್ಲಿರುವ ಸಂಕುಚಿತ ಭಾವನೆಯನ್ನು ಹೊರದಬ್ಬಿ ನಾನಷ್ಟೇ ಅಲ್ಲ, ಇನ್ನೊಬ್ಬರು ನಾನು ತೆಗೆದ ಫೋಟೋ ನೋಡಿ ಖುಷಿಪಡುವಂಥ ಭರವಸೆ ಹುಟ್ಟಿಸಿದರು. ಚಳಿಗಾಲದ ಒಂದು ಮುಂಜಾವು ಹೀಗೆ ತೆರೆದುಕೊಂಡಿತಲ್ಲ? ಅದಕ್ಕಿಂತ ಹೆಚ್ಚೇನು ಖುಷಿ..?
ಚಿತ್ರ ಲೇಖನ : ಪಿ. ಎಸ್. ಅಮರದೀಪ್, ಕೊಪ್ಪಳ.