Advertisement
ಏನಾದರೊಂದು ವಿಸ್ಮಯಗಳು, ಅದ್ಭುತಗಳನ್ನು ಸೃಷ್ಟಿಸುತ್ತಲೇ ಬಂದಿದ್ದಾರೆ ಚೀನಾ ದೇಶದ ತಂತ್ರಜ್ಞರು. ಅವರ ಮಹತ್ಸಾಧನೆಗೆ ಸಾಕ್ಷಿಯಾಗಿದೆ ಈ ರೈಲು ಸೇತುವೆ. ರಾಜಧಾನಿ ಬೀಜಿಂಗ್ ಮತ್ತು ಶಾಂಗೈ ಪಟ್ಟಣಗಳ ನಡುವೆ ಸಂಪರ್ಕ ಕಲ್ಪಿಸುವ ಈ ಬೃಹತ್ ಸೇತುವೆಯ ಉದ್ದ ಎಷ್ಟೆಂದು ಹೇಳಿದರೆ ಬೆರಗಾಗುತ್ತೀರಿ. 102. 4 ಮೈಲು(164.8 ಕಿ. ಮೀ.) ಅದರ ಉದ್ದವಾಗಿದ್ದರೆ, ನೆಲದಿಂದ ಸರಾಸರಿ 260 ಅಡಿಗಳಷ್ಟು ಎತ್ತರದಲ್ಲಿ ಈ ಸೇತುವೆಯಿದೆ.
ಎರಡು ಸಾವಿರ ಕಂಭಗಳ ಮೇಲೆ ಸೇತುವೆ ನಿಂತಿದೆ. 45 ಸಾವಿರ ಟನ್ ಉಕ್ಕಿನ ಕಂಬಿಗಳು ಇದರ ನಿರ್ಮಾಣಕ್ಕೆ ಬಳಕೆಯಾಗಿವೆ. ನೈಸರ್ಗಿಕ ವಿಪತ್ತುಗಳಿಗೆ ಸುಲಭವಾಗಿ ಜಗ್ಗುವುದಿಲ್ಲ. ಚಂಡಮಾರುತಕ್ಕೆ ಬಗ್ಗುವುದಿಲ್ಲ. ಎಂಟು ಭೂಕಂಪಗಳನ್ನು ಎದುರಿಸಿ ಸ್ಥಿರವಾಗಿ ಉಳಿಯಬಲ್ಲ ಚೈತನ್ಯವೂ ಇದೆ. ಮೂರು ಲಕ್ಷ ಟನ್ ತೂಕದ ನೌಕಾಘಾತಕ್ಕೂ ಮುರಿಯುವುದಿಲ್ಲ ಎಂಬ ಭರವಸೆ ತಂತ್ರಜ್ಞರಿಗೂ ಇದೆ. ಇದರಲ್ಲಿ ಸೇತುವೆಯ ಮಧ್ಯೆ ರೈಲುಗಳನ್ನು ನಿಲ್ಲಿಸಲು ಬೇಕಿದ್ದರೆ ಪ್ರತ್ಯೇಕ ಕಂಬಿಗಳ ವ್ಯವಸ್ಥೆಯೂ ಇದೆ.
Related Articles
ಹಳೆಯ ರೆಕಾರ್ಡ್ ಮುರಿದು
ಈ ಹಿಂದೆ ಚೀನಾದಲ್ಲಿಯೇ ಇರುವ ನಲ್ಯಾಂಗ್ಟಾಂಗ್ ಕ್ವಿಂಗ್ಸ್ಟಿಯಾನ್ ಸೇತುವೆ ಅತಿ ಉದ್ದದ ರೈಲು ಸೇತುವೆ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಈಗ ಆ ದಾಖಲೆ ಧನ್ಯಾಂಗ್ ಪಾಲಾಗಿದೆ. ಅಲ್ಲದೆ ಜಗತ್ತಿನ ಪ್ರವಾಸಿಗರನ್ನೆಲ್ಲ ಸೆಳೆಯುತ್ತಿದೆ.
Advertisement
ಪ್ರಕೃತಿಗೆ ಗೌರವಯಾವುದೇ ನಿರ್ಮಾಣ ಕಾರ್ಯದಿಂದ ಕಾಡು, ನದಿ ಮುಂತಾದ ನೈಸರ್ಗಿಕ ಸಂಪತ್ತಿಗೆ ಆಪತ್ತು ಎದುರಾಗುತ್ತದೆ. ಆದರೆ ಇಷ್ಟೊಂದು ಬೃಹತ್ತಾದ ಯೋಜನೆಯಲ್ಲಿ ಪ್ರಕೃತಿಗೆ ಯಾವುದೇ ಆಪತ್ತು ಎದುರಾಗದಂತೆ ಕೆಲಸ ಮಾಡಿರುವುದು ತಂತ್ರಜ್ಞರ ಹೆಗ್ಗಳಿಕೆ. ಈ ಸೇತುವೆ ಕೆಳಗೆ ಕೇವಲ ನದಿ ಇದೆ, ಭತ್ತದ ಹೊಲಗಳು, ವಿಶಾಲವಾದ ಮೈದಾನಗಳು, ಮನೆಗಳು, ತೋಟಗಳು, ಕಾಡುಗಳು ಸಕಲವೂ ಇದೆ. ಒಂದನ್ನೂ ಹಾಳು ಮಾಡದೆ ತಗ್ಗು ಪ್ರದೇಶವನ್ನು ದಾಟಲು ಇಷ್ಟುದ್ದದ ಸೇತುವೆ ನಿರ್ಮಿಸಿದುದರಿಂದ ಸಾಕಷ್ಟು ಆಸ್ತಿ ಪಾಸ್ತಿಗಳು, ಕೊಳಗಳು, ಕಾಲುವೆಗಳು ಮುಕ್ಕಾಗದೆ ಉಳಿದವು. – ಪ. ರಾಮಕೃಷ್ಣ ಶಾಸ್ತ್ರಿ