Advertisement

ದಾಸ್‌, ಜೆಸ್ಸಿ, ಚಿನ್ನಿ ಜೊತೆಯಾಟದಲ್ಲಿ ಜಾಣ ಜಾನಿಯ ಕಥೆ!

09:48 PM Aug 08, 2017 | Karthik A |

ಒಂದು ಸಿನಿಮಾ ಮಾಡಬೇಕಾದರೆ ಮೊದಲು ಸಿನಿಮಾ ಮೇಲೆ ಪ್ರೀತಿ ಇರಬೇಕು, ಅದಾದ ಮೇಲೆ ಒಳ್ಳೆಯ ಕಥೆ ಬೇಕು, ಅದಕ್ಕೆ ತಕ್ಕಂತಹ ನಿರ್ದೇಶಕ ಇರಬೇಕು, ಹಾಗೆಯೇ ನಾಯಕ, ನಾಯಕಿ, ಕಲಾವಿದರು ಹಾಗೂ ನುರಿತ ತಂತ್ರಜ್ಞರು ಇರಬೇಕು. ಇವೆಲ್ಲವನ್ನೂ ಒಟ್ಟುಗೂಡಿಸಿದರೆ ಮಾತ್ರ ಒಂದೊಳ್ಳೆಯ ಚಿತ್ರವನ್ನು ಕೊಡಲು ಸಾಧ್ಯ. ವಿಜಯ್‌ ರಾಘವೇಂದ್ರ ಅಭಿನಯದ ‘ಜಾನಿ’ ಚಿತ್ರಕ್ಕೆ ಇವೆಲ್ಲಾ ಕೂಡಿಬಂದಿದೆ ಎನ್ನುತ್ತದೆ ಚಿತ್ರತಂಡ. ಈ ಚಿತ್ರವನ್ನು ಛಾಯಾಗ್ರಾಹಕ ಪಿ.ಕೆ.ಎಚ್‌. ದಾಸ್‌ ನಿರ್ದೇಶಿಸಿದ್ದಾರೆ. ಇದು ಇವರ ಮೊದಲ ನಿರ್ದೇಶನದ ಸಿನಿಮಾ. ಇನ್ನು, ಪಿ.ಕೆ.ಎಚ್‌ ದಾಸ್‌ ಅವರನ್ನು ನಂಬಿ ಹಣ ಹಾಕಿರೋದು ಪುರುಷೋತ್ತಮ್‌ ಮತ್ತು ಅವರ ಗೆಳೆಯರಾದ ಜಾನಕಿರಾಮ್‌ ಹಾಗೂ ಆನಂದ್‌. ‘ಜಾನಿ’ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸುಮಾರು 140 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರದ ಬಗ್ಗೆ ನಿರ್ಮಾಪಕ ಪುರುಷೋತ್ತಮ್‌ ಒಂದಷ್ಟು ಮಾತನಾಡಿದ್ದಾರೆ.

Advertisement

ಮನರಂಜನೆಯ ಪಾಕ
ಇದು 2015ರ ಆಗಸ್ಟ್‌ನಲ್ಲಿ ಶುರುವಾದ ಚಿತ್ರ. ಸ್ವಲ್ಪ ತಡವಾಗಿಯೇ ಬಿಡುಗಡೆಯಾಗುತ್ತಿದೆ. ಅದಕ್ಕೆ ಕಾರಣ, ಇಲ್ಲಿ ಎಲ್ಲರೂ ಬಿಜಿಯಾಗಿರುವಂತಹ ಕಲಾವಿದರು, ತಂತ್ರಜ್ಞರೇ ಕೆಲಸ ಮಾಡಿದ್ದರಿಂದ ಚಿತ್ರದ ಕೆಲಸಗಳು ಕೂಡ ನಿಧಾನವಾದವು. ಜೆಸ್ಸಿಗಿಫ್ಟ್ ಅವರು ಟ್ಯೂನ್‌ ಕೊಟ್ಟಾಗ, ಇಂತಿಂಥ ಹಾಡುಗಳಿಗೆ ಇಂತಹ ಗಾಯಕರೇ ಬೇಕು ಅಂತ ಡಿಮ್ಯಾಂಡ್‌ ಮಾಡಿದ್ದರಿಂದ, ವಿಜಯಪ್ರಕಾಶ್‌, ಉದಿತ್‌ ನಾರಾಯಣ್‌, ಶ್ರೇಯಾ ಘೋಷಾಲ್‌ ಅವರ ಬಳಿ ಹೋಗಿ ಹಾಡು ಹಾಡಿಸಿಕೊಂಡು ಬರುವುದು ತಡವಾಯ್ತು. ಅಂತೆಯೇ, ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್‌ ಅವರು ಚಿತ್ರದ ಎಲ್ಲಾ ಹಾಡುಗಳಿಗೂ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಶೇಷವೆಂದರೆ, 30 ವರ್ಷದ ನಂತರ ಚಿನ್ನಿ ಮಾಸ್ಟರ್‌, ಚಿತ್ರದ ಎಲ್ಲಾ ಹಾಡುಗಳಿಗೂ ನೃತ್ಯ ಸಂಯೋಜಿಸಿದ್ದಾರೆ. ಅವರು ಟಾಲಿವುಡ್‌ನ‌ಲ್ಲಿ ಸಾಕಷ್ಟು ಬಿಜಿ ಇದ್ದಾರೆ. ಈಗ ಚೈನೀಸ್‌ ಭಾಷೆಯಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಬಿಜಿ ಇದ್ದರೂ, ನಮ್ಮ ಚಿತ್ರಕ್ಕೆ ಬಂದು ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ರಂಗಾಯಣ ರಘು, ಸಾಧುಕೋಕಿಲ, ಮೂಗು ಸುರೇಶ್‌, ಶೋಭರಾಜ್‌, ಪವನ್‌, ಡ್ಯಾನಿ ಕುಟ್ಟಪ್ಪ  ಇವರೆಲ್ಲರೂ ಬಿಜಿ ಕಲಾವಿದರು.  ಎಲ್ಲರನ್ನೂ ಒಟ್ಟಿಗೆ ಸೇರಿಸಿ, ಅವರ ಡೇಟ್ಸ್‌ ಹೊಂದಿಸಿಕೊಂಡು ಮಾಡೋದು ಕಷ್ಟವಾಗಿತ್ತು. ಪ್ರತಿಯೊಂದು ದೃಶ್ಯದಲ್ಲೂ ಅವರು ಬೇಕಿತ್ತು. ಹಾಗಾಗಿ, ಅವರನ್ನು ಒಂದುಗೂಡಿಸುವುದೇ ಸಾಹಸವಾಗಿತ್ತು. ಇಲ್ಲಿ ಇನ್ನೊಂದು ವಿಶೇಷವೆಂದರೆ, ಸಾಧು ಕೋಕಿಲ ಹಾಗೂ ರಂಗಾಯಣ ರಘು ಇಬ್ಬರೂ ಫ‌ುಲ್‌ ಸಿನಿಮಾದಲ್ಲಿದ್ದಾರೆ. ‘ಚಡ್ಡಿದೋಸ್ತ್’ ಬಳಿಕ ಇಬ್ಬರಿಗೂ ಇಲ್ಲಿ ಒಳ್ಳೆಯ ಪಾತ್ರಗಳೇ ಸಿಕ್ಕಿವೆ. ಇಡೀ ಸಿನಿಮಾವನ್ನು ನೋಡಿಸಿಕೊಂಡು ಹೋಗುವ ಜವಾಬ್ದಾರಿಯೂ ಅವರ ಮೇಲಿದೆ. ಇದೊಂದು ಪಕ್ಕಾ ಎಂಟರ್‌ಟೈನ್‌ಮೆಂಟ್‌ ಚಿತ್ರ.


ಹಾಡುಗಳೇ ಹೈಲೈಟ್‌

ನಾಯಕ ವಿಜಯ್‌ ರಾಘವೇಂದ್ರ ಅವರೊಬ್ಬ ನಟರಷ್ಟೇ ಅಲ್ಲ, ಒಳ್ಳೆಯ ಗೆಳೆಯ ಕೂಡ. ಪಾತ್ರಕ್ಕೆ ನೂರರಷ್ಟು ಜೀವ ತುಂಬಿದ್ದಾರೆ. ಅದ್ಭುತವಾಗಿ ಡ್ಯಾನ್ಸ್‌ ಮಾಡಿದ್ದಾರೆ. ನಟಿ ಮಿಲನ ನಾಗರಾಜ್‌ ಅವರಿಗಿಲ್ಲಿ ವಿಶೇಷ ಪಾತ್ರವಿದೆ. ಇನ್ನು, ಮಿಸ್‌ ಕೇರಳ ಜನನಿ ಆಂಟೋನಿ ನಾಯಕಿಯಾಗಿದ್ದಾರೆ. ಕನ್ನಡದಲ್ಲಿ ಅವರಿಗೆ ಇದು ಮೊದಲ ಚಿತ್ರ. ಚಿತ್ರದ ಇನ್ನೊಂದು ಹೈಲೈಟ್‌ ಅಂದರೆ, ಅದು ಕಲಾನಿರ್ದೇಶಕ ರವಿಸಂತೆಹೈಕ್ಲು. ನಾವು ಒಂದು ಹಾಡಿಗೆ ವಿಶೇಷ ಸೆಟ್‌ ಹಾಕಿಸಿ ಚಿತ್ರೀಕರಿಸಿದ್ದೇವೆ. ‘ಬಾಂಗಡೆ’ ಎಂಬ ಹಾಡೊಂದನ್ನು ಮಂಗಳೂರಲ್ಲಿ ಚಿತ್ರೀಕರಿಸಬೇಕಿತ್ತು. ಸಿಕ್ಕಾಪಟ್ಟೆ ಮಳೆ ಇತ್ತು. ಅದರಲ್ಲೂ ಆ ಸಾಂಗ್‌ನಲ್ಲಿ ಮುಖ್ಯ ಕಲಾವಿದರಿದ್ದರು. ಚಿನ್ನಿ ಪ್ರಕಾಶ್‌ ಅವರು ನೃತ್ಯ ಸಂಯೋಜನೆ ಮಾಡಬೇಕಿತ್ತು. ಎಲ್ಲರೂ ಬಿಜಿ ಇದ್ದರು. ಆದರೆ, ಮಳೆ ಜಾಸ್ತಿ ಇತ್ತು. ಕೊನೆಗೆ, ಡೇಟ್‌ ಇಲ್ಲವೆಂದರೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಕಂಠೀರವ ಸ್ಟುಡಿಯೋದಲ್ಲೇ ಸುಮಾರು 15 ಲಕ್ಷ ರೂ ವೆಚ್ಚದಲ್ಲಿ ಬೀಚ್‌ ಸೆಟ್‌ ಹಾಕಿಸಿ ಆ ಸಾಂಗ್‌ ಚಿತ್ರೀಕರಿಸಲಾಗಿದೆ. ಉಳಿದಂತೆ ಮಲೇಷ್ಯಾದಲ್ಲೊಂದು ಹಾಡನ್ನು ಚಿತ್ರೀಕರಿಸಿದ್ದೇವೆ. ಅಂದಹಾಗೆ, ಸೆಟ್‌ ಸಾಂಗ್‌ ಒಂದಕ್ಕೆ ಆರು ಕ್ಯಾಮೆರಾಗಳನ್ನು ಬಳಸಿದ್ದು ವಿಶೇಷ.


ಅನಾಥನೊಬ್ಬನ ಸಿಂಪಲ್‌ ಸ್ಟೋರಿ

ಚಿತ್ರದ ನಾಯಕ ಜಾನಿ ತುಂಬಾ ಸಿಂಪಲ್‌. ಅವನೊಬ್ಬ ಕಳ್ಳ. ಕಳ್ಳತನ ಮಾಡಿದರೆ ಮಾತ್ರ ಅವನ ಬದುಕು ಅನ್ನುವಂಥದ್ದು. ಆದರೆ, ಅವನು ತುಂಬಾ ಒಳ್ಳೆಯವನು. ಅವನೊಬ್ಬ ಅನಾಥನಾಗಿದ್ದರೂ, ಅವನೊಂದಿಗೆ ಒಂದು ನಾಯಿ ಇದೆ. ಅದು ನಿಯತ್ತಿನ ನಾಯಿ. ಒಬ್ಬ ಯಜಮಾನನಿಗೆ ಏನೆಲ್ಲಾ ಸಹಾಯ ಮಾಡಬೇಕೋ ಅದನ್ನೆಲ್ಲಾ ಆ ನಾಯಿ ಮಾಡುತ್ತೆ. ಏನೇನು ಮಾಡುತ್ತೆ ಅನ್ನೋದನ್ನು ಸಿನಿಮಾದಲ್ಲಿ ನೋಡಬೇಕು. ಇನ್ನು, ಚಿತ್ರದಲ್ಲಿ ತೆಲುಗಿನ ನಟ ಸುಮನ್‌ ಇದ್ದಾರೆ. ಆ ಪಾತ್ರಕ್ಕೆ ಅವರೇ ಬೇಕು ಎಂಬ ಕಾರಣಕ್ಕೆ, ಅವರ ಡೇಟ್ಸ್‌ಗಾಗಿ ಕಾದು ಚಿತ್ರೀಕರಣ ಮಾಡಿದ್ದೇವೆ. ಇಲ್ಲಿ ಒಟ್ಟು ನಾಲ್ವರು ವಿಲನ್‌ಗಳಿದ್ದಾರೆ. ನಾಲ್ಕು ಅದ್ಭುತ ಆ್ಯಕ್ಷನ್‌ ಮತ್ತು ಚೇಸಿಂಗ್‌ ಇದೆ. ಮಾಸ್‌ ಮಾದ ಹಾಗೂ ಆ್ಯಕ್ಷನ್‌ ಪ್ರಕಾಶ್‌ ಅವರು ಚೆನ್ನಾಗಿಯೇ ಸ್ಟಂಟ್‌ ಮಾಡಿಸಿದ್ದಾರೆ. ವಿಜಯ್‌ ರಾಘವೇಂದ್ರ ಕೂಡ ವಿಶೇಷವಾಗಿಯೇ ಸ್ಟಂಟ್‌ ಮಾಡಿದ್ದಾರೆ.


ಇನ್ನು, ಜೆಸ್ಸಿಗಿಫ್ಟ್ ಅವರ 25 ನೇ ಚಿತ್ರ ಇದಾಗಿರುವುದರಿಂದ ಒಳ್ಳೆಯ ಹಾಡುಗಳನ್ನೇ ಕೊಟ್ಟಿದ್ದಾರೆ. ಎ.ಆರ್‌.ರೆಹಮಾನ್‌ ಸ್ಟುಡಿಯೋದಲ್ಲೇ ವಾಯ್ಸ ಮಿಕ್ಸ್‌ ಮಾಡಿಸಿದ್ದೇವೆ. ಜೆಮಿನಿ ಸ್ಟುಡಿಯೋದಲ್ಲಿ ಡಿಐ ಮಾಡಿಸಲಾಗಿದೆ. ಕಾರಣ, ಒಳ್ಳೆಯ ಗುಣಮಟ್ಟದ ಸಿನಿಮಾ ಕೊಡಬೇಕು ಎಂಬ ಉದ್ದೇಶವಷ್ಟೇ. ಮೊದಲ ಪ್ರಯತ್ನದಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿದ್ದು ನಿಜ. ಆದರೆ, ಈಗ ಚಿತ್ರ ನೋಡಿದ ಮೇಲೆ ಕಷ್ಟ ಯಾವ ಲೆಕ್ಕ ಎಂಬಂತಾಗಿದೆ.

Advertisement

140 ಚಿತ್ರಮಂದಿರಗಳಲ್ಲಿ ಜಾನಿ
ಒಂದು ಸಿನಿಮಾ ನಿರ್ಮಾಣ ಮಾಡುವುದು ಅಷ್ಟೇನೂ ದೊಡ್ಡ ಕಷ್ಟ ಅಲ್ಲದಿದ್ದರೂ, ಅದನ್ನು ಬಿಡುಗಡೆ ಮಾಡುವುದು ಕಷ್ಟದ ಕೆಲಸ ಎಂಬುದು ನಿಜ. ಈ ಚಿತ್ರದ ವಿತರಣೆ ಮಾಡಲು ಮುಂದಾಗಿರುವುದು ಜಯಣ್ಣ, ಭೋಗೇಂದ್ರ. ಇಬ್ಬರು ಕಳೆದ ಎರಡು ವರ್ಷಗಳಿಂದಲೂ ‘ಜಾನಿ’ ಸಿನಿಮಾ ಬಗ್ಗೆ ಕೇಳಿಕೊಂಡು ಬಂದವರು. ಅವರ ಬಳಿ ಹೊದಾಗ, ನಿಮ್ಮ ಸಿನಿಮಾ ಕುರಿತು ಎಲ್ಲವೂ ಗೊತ್ತಿದೆ. ನಾನೇ ನಿಮ್ಮ ಸಿನಿಮಾವನ್ನು ವಿತರಣೆ ಮಾಡುತ್ತೇನೆ. ಜನರಿಗೆ ತಲುಪುವಂತೆ ಎಲ್ಲಾ ಚಿತ್ರಮಂದಿರಗಳಲ್ಲೂ ಬಿಡುಗಡೆ ಮಾಡಲು ಸಹಾಯ ಮಾಡುತ್ತೇನೆ ಎಂದು ಮುಂದೆ ಬಂಇದ್ದಾರೆ.  ಸುಮಾರು 140 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ರೆಡಿಯಾಗಿದ್ದಾರೆ. ಅವರ ಸಹಾಯ ಮರೆಯುವಂತಿಲ್ಲ. ಆಗಸ್ಟ್‌ 11 ರಂದು ಶಿವರಾಜ್‌ಕುಮಾರ್‌ ಅವರ ‘ಮಾಸ್‌ ಲೀಡರ್‌’ ಬರಲಿದ್ದು, ಅಂದೇ ‘ಜಾನಿ’ ಚಿತ್ರ ಬಿಡುಗಡೆಯಾಗುತ್ತಿದೆ. ಎರಡರಲ್ಲೂ ವಿಜಯ್‌ ರಾಘವೇಂದ್ರ ಇದ್ದಾರೆ. ಎರಡು ಸಿನಿಮಾಗೂ ಜನರು ಪ್ರೋತ್ಸಾಹ ಕೊಡಬೇಕು ಎನ್ನುತ್ತಾರೆ ಪುರುಷೋತ್ತಮ್‌.

Advertisement

Udayavani is now on Telegram. Click here to join our channel and stay updated with the latest news.

Next