Advertisement
ವಿಜಯಪುರ (ಬಿಜಾಪುರ)ವನ್ನು ಆಳಿದ ಆದಿಲ್ ಶಾಹಿ ಮನೆತನದ ಅರಸರಲ್ಲಿ ಗಮನೀಯ ಆಡಳಿತ ನೀಡಿದ ಮಹ್ಮದ್ ಆದಿಲ್ ಶಾ, 1665 ರಲ್ಲಿ ಅದ್ಭುತ ತಾಂತ್ರಿಕ ವಾಸ್ತುಶೈಲಿಯ ಬೃಹತ್ ಕಟ್ಟಡವಾದ ಗೋಲಗುಂಬಜನ್ನು ನಿರ್ಮಿಸಿದ. ತನ್ನ ಸಾವಿನ ಬಳಿಕ ನಿರ್ಮಾಣವಾಗುವ ತನ್ನ ಸಮಾಧಿ ಅದ್ಭುತವಾಗಿ ಇರಬೇಕೆಂಬ ಮಹದಾಸೆಯಿಂದ ಈ ವಿಶಿಷ್ಟ ಸ್ಮಾರಕವನ್ನು ಅವನು ನಿರ್ಮಿಸಿದ್ದ.
Related Articles
ಇಂಥ ಹಲವು ವೈಶಿಷ್ಟ್ಯಗಳಿದ್ದ ಕಟ್ಟಡ ನೋಡಲು ತನ್ನ ಆಸ್ಥಾನ ನರ್ತಕಿಯೂ, ಪ್ರೇಯಸಿಯೂ ಆಗಿದ್ದ ರಂಭಾಳೊಂದಿಗೆ ದೊರೆ ಗೋಲಗುಂಬಜಕ್ಕೆ ಬಂದಿದ್ದ. ಅತಿಲೋಕ ಸುಂದರಿಯಾಗಿದ್ದ ಕಾರಣ ಆಕೆಯನ್ನು ದೇವಲೋಕದ ಅಪ್ಸರೆಯರಲ್ಲಿ ಒಬ್ಬಳಾದ ರಂಭೆಗೆ ಹೋಲಿಸಲಾಗಿತ್ತು ಮತ್ತು ಅದೇ ಹೆಸರಿಂದ ಆಕೆಯನ್ನು ಕರೆಯಲಾಗುತ್ತಿತ್ತು.
Advertisement
ರಂಭಾ ಹಾಗೂ ದೊರೆ ಮಹ್ಮದ್ ಆದಿಲ್ ಶಾ ಇಬ್ಬರೂ ಪಿಸುಮಾತಿನ ಕಿಂಡಿಗಳಲ್ಲಿ ಸರಸ ಸಲ್ಲಾಪದ ಮಾತುಗಳನ್ನಾಡಿ ಸಂಭ್ರಮಿಸಿದರು. ಒಬ್ಬರ ಹೆಸರನ್ನು ಮತ್ತೂಬ್ಬರು ಕೂಗಿ, ಏಳು ಬಾರಿ ಧ್ವನಿಸುವ ತಮ್ಮ ಮಾತಿನ ಮೋಡಿಯನ್ನು ಕೇಳುತ್ತಾ ಸಲ್ಲಾಪದಲ್ಲಿ ಕೆಲಹೊತ್ತು ಮೈಮರೆತರು. ಆನಂತರ ಇಬ್ಬರೂ ಗೋಪುರದ ಮೆಟ್ಟಲುಗಳ ಮಾರ್ಗದಿಂದ ಕಟ್ಟಡದ ತುತ್ತ ತುದಿ ಏರಿ ಅಲ್ಲಿಂದ ಮಹಾನಗರದ ಸೌಂದರ್ಯ ಆಸ್ವಾದಿಸುತ್ತ ಸರಸ-ಸಲ್ಲಾಪದ ಮಾತಿಗಿಳಿದರು. ಇಬ್ಬರ ಮಧ್ಯೆ ಪ್ರೀತಿ, ಪ್ರೇಮ, ಪ್ರಣಯದ ಮಾತುಕತೆ ಆರಂಭಗೊಳ್ಳುತ್ತಲೇ, ಸಹಜವಾಗಿ ರಾಜ ತನ್ನ ಪ್ರೇಯಸಿ ರಂಭಾಳನ್ನು ಕಿಚಾಯಿಸಲು ಕೇಳಿದ: “ನೀನು ನನ್ನನ್ನು ಎಷ್ಟು ಪ್ರೀತಿಮಾಡುವಿ?’
“ನನ್ನ ಜೀವಕ್ಕಿಂತ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇನೆ’ ಎಂದು ದೊರೆಯ ಪ್ರಶ್ನೆಗೆ ಉತ್ತರಿಸುತ್ತಲೇ, “ಅನುಮಾನವೇಕೆ’ ಮರು ಪ್ರಶ್ನೆ ಮಾಡುತ್ತಾಳೆ ರಂಭಾ. “ನಿನ್ನ ಪ್ರಾಣಕ್ಕಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುವುದಾದರೆ ಈ ಗುಂಬಜದ ಮೇಲಿಂದ ಕೆಳಗೆ ಹಾರಬಲ್ಲೆಯಾ? ದೊರೆ ಮಹ್ಮದ್ ಆದಿಲ್ ಶಾ ಕೀಟಲೆಯ ದನಿಯಲ್ಲಿ ಕೇಳುತ್ತಾನೆ. ದೊರೆಯ ಮಾತು ಆತನ ಗಂಟಲಲ್ಲೇ ಉಸಿರಾಗುವ ಮೊದಲೇ ಅಪ್ರತಿಯ ಸೌಂದರ್ಯದ ರಂಭಾ, ಆಗಷ್ಟೇ ನಿರ್ಮಾಣಗೊಂಡಿದ್ದ ಬೃಹತ್ ಕಟ್ಟಡದಿಂದ ಕೆಳಗೆ ಹಾರಿ, ಉಸಿರು ನಿಲ್ಲಿಸಿದ್ದಳು.
ಗೋಲಗುಂಬಜ್ ಸ್ಮಾರಕದ ನೆಲಮಾಳಿಗೆಯಲ್ಲಿ ರಂಭಾಳ ಸಮಾಧಿ ಇದೆ. ನೆಲಮಾಳಿಗೆಯಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಇರುವ ಐದು ಸಮಾಧಿಗಳಲ್ಲಿ ಆದಿಲ್ ಶಾ ನ ಮೊಮ್ಮಗ, ಕಿರಿಯ ಪತ್ನಿ ಆರುಶಬೀಬಿಯ ಸಮಾಧಿಗಳಿವೆ. ದೊರೆಯ ಸಮಾಧಿಯ ಮತ್ತೂಂದು ಬದಿಗೆ ಕ್ರಮವಾಗಿ ಸುಲ್ತಾನನ ಪ್ರೇಯಸಿ ರಂಭಾ, ಅವರ ಮಗಳದ್ದೂ ಸೇರಿದಂತೆ ಐದು ಸಮಾಧಿಗಳಿವೆ. ಗೋಲಗುಂಬಜದ ಭೂಮೇಲ್ಭಾಗದಲ್ಲಿ ಈ ಸಮಾಧಿಗಳ ನಕಲು ನಿರ್ಮಾಣಗಳಿದ್ದು, ಮೂಲ ಸಮಾಧಿಗಳ ಬದಲಾಗಿ ಇವುಗಳನ್ನೇ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ರಂಭಾಳ ಚಿರಸ್ಮರಣೆಗಾಗಿ ದೊರೆ ಆದಿಲ್ ಶಹಾ ಗೋಲಗುಂಬಜ್ ಸ್ಮಾರಕದಿಂದ 2 ಕಿ.ಮೀ. ಅಂತರದಲ್ಲಿ ರಂಭಾಪುರ ಎಂಬ ಗ್ರಾಮವೊಂದನ್ನು ನಿರ್ಮಿಸಿದ್ದಾನೆ. ಇಂದಿಗೂ ಸದರಿ ಗ್ರಾಮ ಅಸ್ತಿತ್ವದಲ್ಲಿದ್ದು, ರಂಭಾಪುರ ಎಂಬ ಹೆಸರಿನಿಂದಲೇ ಕರೆಯಲ್ಪಡುತ್ತದೆ. ಜಿ. ಎಸ್. ಕಮತರ