Advertisement

ಪ್ಲೀಸ್‌, ನಿಮ್ಮ ವೋಟು ನೀವೇ ಹಾಕಿಸಿಕೊಳ್ಳಿ…

12:20 AM Feb 24, 2023 | Team Udayavani |

ಮೈಸೂರು: ಪ್ಲೀಸ್‌, ನಿಮ್ಮ ವೋಟು ನೀವು ಹಾಕಿಸಿಕೊಳ್ಳಿ….

Advertisement

ಹಳೆ ಮೈಸೂರು ಭಾಗದ ಕೆಲವು ಅಸೆಂಬ್ಲಿ ಕ್ಷೇತ್ರಗಳಲ್ಲಿ ತಳಮಟ್ಟದಲ್ಲಿ ಬಿಜೆಪಿ ಮುಖಂಡರಿಗೆ ಕಾಂಗ್ರೆಸ್‌ ನಾಯಕರು ಮಾಡುತ್ತಿರುವ ಮನವಿ ಇದು.

ಇದಕ್ಕೆ ಕಾರಣ ಇಷ್ಟೇ. ಹಳೆಯ ಮೈಸೂರು ಭಾಗದ ಅನೇಕ ಅಸೆಂಬ್ಲಿ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲ್ಲುವ ಶಕ್ತಿ ಇಲ್ಲದಿರಬಹುದು. ಆದರೆ ಆ ಪಕ್ಷಕ್ಕೆ ಅದರದ್ದೇ ಆದ ಸಾಂಪ್ರದಾಯಕ ಮತದಾರರಿದ್ದಾರೆ. ಅಲ್ಲಿ ಬಿಜೆಪಿ ಗೆಲ್ಲದಿರಬಹುದು. ಆದರೆ ವೋಟುಗಳಿವೆ. ಈಗ ಈ ಕ್ಷೇತ್ರಗಳಲ್ಲಿ ಬಿಜೆಪಿಗರಿಗೆ ಕಾಂಗ್ರೆಸಿಗರ ಮನವಿ ಇಷ್ಟೇ. ನಿಮ್ಮ ಬಿಜೆಪಿ ವೋಟು ನೀವು ಹಾಕಿಸಿಕೊಳ್ಳಿ. ಯಾವುದೇ ಕಾರಣಕ್ಕೂ ನಿಮ್ಮ ವೋಟುಗಳನ್ನು ಜೆಡಿಎಸ್‌ಗೆ ವರ್ಗಾಯಿಸಬೇಡಿ. ನಿಮ್ಮ ವೋಟು ಜೆಡಿಎಸ್‌ಗೆ ವರ್ಗಾವಣೆಯಾದರೆ ಕಾಂಗ್ರೆಸ್‌ ಸೋಲುತ್ತದೆ. ಇದರಿಂದ ಬಿಜೆಪಿ ಬೆಳೆಯುವುದಿಲ್ಲ. ಕಾಂಗ್ರೆಸ್‌ಗೂ ಅನುಕೂಲವಿಲ್ಲ. ಜೆಡಿಎಸ್‌ಗೆ ಲಾಭವಾಗುತ್ತದೆ. ಅತಂತ್ರ ವಿಧಾನಸಭೆ ರಚನೆಯಾದರೆ  ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿಯನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಲು ಜೆಡಿಎಸ್‌ ಪ್ರಾರಂಭಿಸುತ್ತದೆ. ಹೀಗೆ ಮಾಡ್ಬೇಡಿ ಎಂಬುದು ಈಗ ಕಾಂಗ್ರೆಸಿಗರು ಬಿಜೆಪಿಯ ಸ್ಥಳೀಯ ನಾಯಕರ ಮುಂದಿಡುತ್ತಿರುವ ಬಿನ್ನಹ.

ಕಳೆದ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಹಳೇ ಮೈಸೂರಿನ ಅನೇಕ ಅಸೆಂಬ್ಲಿ ಕ್ಷೇತ್ರಗಳಲ್ಲಿ ಬಿಜೆಪಿ ಡಮ್ಮಿ ಅಭ್ಯರ್ಥಿಗಳನ್ನು ಹೂಡಿ ಪರೋಕ್ಷವಾಗಿ ಜೆಡಿಎಸ್‌ ಗೆಲುವಿಗೆ ಕಾರಣವಾಯಿತು. ಕಾಂಗ್ರೆಸ್‌ ಸೋಲಿಸಬೇಕೆಂಬ ಏಕೈಕ ಉದ್ದೇಶದಿಂದ ಬಿಜೆಪಿಯ ಸಾಂಪ್ರದಾಯಕ ಮತಗಳು ಜೆಡಿಎಸ್‌ಗೆ ಟ್ರಾನ್ಸ್‌ಫ‌ರ್‌ ಆಯಿತು. ಇದರಿಂದ ಕಾಂಗ್ರೆಸ್‌ ಸೋತಿತು. ಮೈಸೂರು  ಸೇರಿದಂತೆ ಹಳೆಯ ಮೈಸೂರು ಭಾಗದ ಅನೇಕ ಅಸೆಂಬ್ಲಿ ಕ್ಷೇತ್ರಗಳಲ್ಲಿ ಹೀಗಾಯಿತು. ಇದನ್ನು ಕಾಂಗ್ರೆಸಿಗರು ಈಗ ಉದಾಹರಣೆಯಾಗಿ ನೀಡುತ್ತಿದ್ದಾರೆ.

ಇತ್ತ ಬಿಜೆಪಿಯ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರಿಗೂ ಅಸೆಂಬ್ಲಿ ಚುನಾವಣೆ ಬಂತೆಂದರೆ ಜೆಡಿಎಸ್‌ ಜತೆ ಹೈಕಮಾಂಡ್‌ ಮಟ್ಟದಲ್ಲೇ ಒಳ ಒಪ್ಪಂದ ಏರ್ಪಡುವ ಬಗ್ಗೆ ಬೇಸರವಿದೆ. ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಬೇಕೆಂದು ಜೆಡಿಎಸ್‌ಗೆ  ಅನುಕೂಲ ಮಾಡಿಕೊಡಲು ಬಿಜೆಪಿಯಿಂದ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿರುವ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಳೆಯದಿರಲು ಇದೇ ಮುಖ್ಯ ಕಾರಣವಾಗಿದೆ ಎಂಬುದು ಅವರ ವಾದವಾಗಿದೆ.

Advertisement

ಪಕ್ಷದ ಹೈಕಮಾಂಡ್‌ಗೂ ಅವರು ಈ ಕುರಿತು  ಮನವರಿಕೆ ಮಾಡಿಕೊಟ್ಟಿದ್ದಾರೆ. ಬಿಜೆಪಿ ತನ್ನ ನೆಲೆ ಗಟ್ಟಿ ಇಲ್ಲದ ಅಸೆಂಬ್ಲಿ ಕ್ಷೇತ್ರಗಳಲ್ಲಿ ಸೋತರೂ ಪರವಾಗಿಲ್ಲ, ಯಾವುದೇ ಕಾರಣಕ್ಕೂ ಬಿಜೆಪಿ ಮತಗಳನ್ನು ಜೆಡಿಎಸ್‌ಗೆ ಟ್ರಾನ್ಸ್‌ಫ‌ರ್‌ ಮಾಡುವುದು ಬೇಡ. ಕೆಲವು ಚುನಾವಣೆಗಳಲ್ಲಿ ಸೋಲಬಹುದು. ಆದರೆ ಚುನಾವಣೆಯಿಂದ ಚುನಾವಣೆಗೆ ಪಕ್ಷದ ನೆಲೆಯನ್ನು ಗಟ್ಟಿ ಮಾಡಿ  ಮುಂಬರುವ ವರ್ಷಗಳಲ್ಲಿ ಜಯ ಸಾಧಿಸಬಹುದು ಎಂಬುದು ಬಿಜೆಪಿಯ ಸ್ಥಳೀಯ ಕಾರ್ಯಕರ್ತರ ವಾದವಾಗಿದೆ. ಉದಾಹರಣೆಯಾಗಿ ಅವರು ಅನೇಕ ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಉಲ್ಲೇಖೀಸುತ್ತಾರೆ. ಇದರಲ್ಲಿ ಈ ಹಿಂದೆ ಬಿಜೆಪಿ ಜಯ ಸಾಧಿಸಿದ್ದ ಕೆಲವು ಅಸೆಂಬ್ಲಿ ಕ್ಷೇತ್ರಗಳೂ ಇವೆ.

ಕಳೆದ ಚುನಾವಣೆ ವೇಳೆ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಅವರು ಹಳೇ ಮೈಸೂರು ಭಾಗದ ಬಹಿರಂಗ ಸಭೆಗಳಲ್ಲಿ ಮಾತಾಡುತ್ತಾ ಜೆಡಿಎಸ್‌ ಬಿಜೆಪಿಯ ಬಿ ಟೀಂ ಎಂದು ಜರಿದಿದ್ದರು. ಆಗ ಜೆಡಿಎಸ್‌ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಕಾಂಗ್ರೆಸ್‌ ಮಣಿಸಲು ಜೆಡಿಎಸ್‌ಗೆ ಸಾಥ್‌ ನೀಡಿದ್ದನ್ನು ಗಮನಿಸಿಯೇ ರಾಹುಲ್‌ ಈ ಮಾತು ಆಡಿದ್ದರು. ಆದರೆ ಚುನಾವಣೆ ಬಳಿಕ ಅತಂತ್ರ ವಿಧಾನಸಭೆ ರಚನೆಯಾದಾಗ ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ ಬೆಂಬಲವನ್ನು ಪಡೆದು ಸಮ್ಮಿಶ್ರ ಸರಕಾರ ರಚಿಸಿದ್ದು ಈಗ ಇತಿಹಾಸ.

– ಕೂಡ್ಲಿ ಗುರುರಾಜ 

Advertisement

Udayavani is now on Telegram. Click here to join our channel and stay updated with the latest news.

Next