Advertisement

ಅನ್ಯ ಪ್ರದೇಶಗಳಿಗೂ ಇದೆ ವಿಶೇಷ ಸ್ಥಾನಮಾನ

09:55 PM Aug 06, 2019 | Lakshmi GovindaRaj |
ದಶಕಗಳಿಂದ ಜಮ್ಮು-ಕಾಶ್ಮೀರಕ್ಕೆ ವಿಶೇಷಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ನಿಷ್ಕ್ರಿಯಗೊಂಡಿರುವುದರಿಂದ ದೇಶಾದ್ಯಂತ ಸಂಭ್ರಮ ಮನೆಮಾಡಿದೆ. ಈ ವೇಳೆಯಲ್ಲೇ, ವಿಶೇಷ ಸ್ಥಾನಮಾನವೆಂದರೇನು, ಕೇವಲ ಜಮ್ಮು-ಕಾಶ್ಮೀರಕ್ಕಷ್ಟೇ ಇದು ಸೀಮಿತವಾಗಿದೆಯೇ? ಯಾವೆಲ್ಲ ರಾಜ್ಯಗಳಿಗೆ ಈ ಸವಲತ್ತನ್ನು ಒದಗಿಸಲಾಗಿದೆ ಎನ್ನುವ ಕುತೂಹಲವೂ ಜನರಲ್ಲಿದೆ. ಜಮ್ಮು-ಕಾಶ್ಮೀರವಷ್ಟೇ ಅಲ್ಲದೆ, ಹಲವು ರಾಜ್ಯಗಳು (ಮುಖ್ಯವಾಗಿ ಈಶಾನ್ಯ ರಾಜ್ಯಗಳಿಗೆ) ನಮ್ಮ ಸಂವಿಧಾನ ಆರ್ಟಿಕಲ್ ಜೆ ಅಡಿಯಲ್ಲಿ ವಿಶೇಷ ಸ್ಥಾಾನಮಾನ ದಯಪಾಲಿಸಿದೆ. ಇದರಲ್ಲಿ ನಮ್ಮ ಹೈದ್ರಾಬಾದ್ ಕರ್ನಾಟಕ ಭಾಗವೂ ಒಂದು. ಕೆಲವು ರಾಜ್ಯಗಳಲ್ಲಿ ಸಂಸದೀಯ ಕಾನೂನುಗಳ ಪಾತ್ರ ಅಷ್ಟಾಗಿ ಇಲ್ಲ…
ಆರ್ಟಿಕಲ್ 371ಎ: ನಾಗಾಲ್ಯಾಂಡ್
ನಾಗಾ ಜನರ ರಕ್ಷಣೆಯ ಹಿತಚಿಂತನೆಯಿಂದ ಸಂವಿಧಾನದಲ್ಲಿ ಅಳವಡಿಸಲಾದ ವಿಧಿಯಿದು. ನಾಗಾ ಜನರ ಸಾಮಾಜಿಕ ಅಥವಾ ಧಾರ್ಮಿಕ ಪದ್ಧತಿಗಳಿಗೆ ಸಂಸತ್ತಿನಿಂದ ರೂಪಿತವಾದ ಯಾವುದೇ ಕಾಯ್ದೆಯೂ ಅನ್ವಯವಾಗುವುದಿಲ್ಲ ಎಂಬ ನಿಯಮವನ್ನು ಇದು ಹೊಂದಿದೆ. ಅಲ್ಲದೇ ದೇಶದ ಇತರೆ ರಾಜ್ಯಗಳಲ್ಲಿ ಅನ್ವಯವಾಗುವ ಕಾನೂನುಗಳು ನಾಗಾ ಪಂಗಡದ ಸಾಂಪ್ರದಾಯಿಕ ನಿಯಮಗಳಿಗೆ ಅನ್ವಯವಾಗುವುದಿಲ್ಲ. ಇನ್ನು ನಾಗಾಲ್ಯಾಂಡ್‌ನ ಭೂಮಿ ಮತ್ತು ಸಂಪನ್ಮೂಲಗಳ ಮಾಲೀಕತ್ವ ಮತ್ತು ವರ್ಗಾವಣೆಯ ವಿಚಾರಗಳೂ ಅಲ್ಲಿನ ಜನರಿಗೇ ಮೀಸಲಾಗಿದೆ. ನಾಗಾಲ್ಯಾಂಡ್‌ನ ನೆಲ ಮತ್ತು ಅದರ ಸಂಪನ್ಮೂಲಗಳು ಜನರಿಗೆ ಸಂಬಂಧಿಸಿದ್ದೇ ಹೊರತು ಸರ್ಕಾರಕ್ಕಲ್ಲ ಎನ್ನುತ್ತದೆ ಆರ್ಟಿಕಲ್ 371ಎ. ಈ ಅಂಶಗಳಿಗೆಲ್ಲ ಕೇಂದ್ರದ ಕಾನೂನುಗಳು ಅನ್ವಯವಾಗಬೇಕೆಂದರೆ, ಅದಕ್ಕೆ ವಿಧಾನಸಭೆಯಿಂದ ಅನುಮೋದನೆ ದೊರೆಯಲೇಬೇಕು. ಇನ್ನು ಮುಖ್ಯಮಂತ್ರಿಗಳ ನಿರ್ಣಯವನ್ನು ರದ್ದುಪಡಿಸುವ ವಿಶೇಷಾಧಿಕಾರವನ್ನು ರಾಜ್ಯಪಾಲರಿಗೆ ಒದಗಿಸುತ್ತದೆ ಈ ವಿಧಿ.
ಆರ್ಟಿಕಲ್ 371 ಸಿ: ಮಣಿಪುರ
ಅಸ್ಸಾಂನ ಆರ್ಟಿಕಲ್ 371ಬಿಗೆ ಸಮಾನಾಂತರವಾಗಿದೆ ಆರ್ಟಿಕಲ್ 371 ಸಿ. ಮಣಿಪುರದ ಪರ್ವತ ಪ್ರದೇಶಗಳ ಶ್ರೇಯೋಭಿವೃದ್ಧಿಯಲ್ಲಿ ಈ ವಿಧಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಸ್ಸಾಂನಂತೆಯೇ ಮಣಿಪುರದಲ್ಲೂ ಕೂಡ ಬೆಟ್ಟ ಪ್ರದೇಶಗಳಿಂದ ಆಯ್ಕೆಯಾದ ಸದ್ಯಸರನ್ನೊೊಳಗೊಂಡ ಶಾಸಕಾಂಗ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಮತ್ತು ರಾಷ್ಟ್ರಪತಿಯ ನಡುವೆ ರಾಜ್ಯಪಾಲರು ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತಾರೆ. ಪರ್ವತ ಪ್ರದೇಶಗಳಲ್ಲಿ ಆಡಳಿತ ಹೇಗಿದೆ ಎನ್ನುವ ಕುರಿತು ರಾಜ್ಯಪಾಲರು ರಾಷ್ಟ್ರಪತಿಗಳಿಗೆ ವಾರ್ಷಿಕ ವರದಿ ಸಲ್ಲಿಸಬೇಕು.
ಆರ್ಟಿಕಲ್ 371ಎಫ್ -ಸಿಕ್ಕಿಂ
1975ರಲ್ಲಿ ಸಿಕ್ಕಿಂ ಭಾರತದ 22ನೇ ರಾಜ್ಯವಾಗಿ ಸೇರ್ಪಡೆಗೊಂಡಾಗ ಅಳವಡಿಸಲಾದ ವಿಧಿಯಿದು. ಇಂದಿಗೂ ಸಿಕ್ಕಿಂ ಈಶಾನ್ಯ ರಾಜ್ಯಗಳಲ್ಲೇ ಅತಿ ಶಾಂತ ರಾಜ್ಯವಾಗಿ ಉಳಿದಿರುವುದರಲ್ಲಿ ಆರ್ಟಿಕಲ್ 371ಎಫ್ ಪಾತ್ರ ದೊಡ್ಡದು ಎನ್ನಲಾಗುತ್ತದೆ. ಸಿಕ್ಕಿಂನ ಸ್ಥಳೀಯ ಸಂಸ್ಕೃತಿಯ ರಕ್ಷಣೆಗೆ ಆದ್ಯತೆ ಕೊಡುವ ಈ ವಿಧಿಯು, ರಾಜಕೀಯವಾಗಿಯೂ ವಿವಿಧ ಪಂಗಡದ ಜನರಿಗೆ ಮನ್ನಣೆ ನೀಡುತ್ತದೆ. ಈ ವಿಧಿಯ ಮತ್ತೊಂದು ವಿಶೇಷತೆಯೆಂದರೆ, ಭಾರತದೊಂದಿಗೆ ಒಂದಾಗುವ ಮುಂಚೆ ಸಿಕ್ಕಿಂ ಹೊಂದಿದ್ದ ಕಾನೂನುಗಳನ್ನು ಈಗಲೂ ಕಾಪಾಡಿಕೊಂಡು ಬಂದಿರುವುದು.
ಆರ್ಟಿಕಲ್ 371 ಎಚ್: ಅರುಣಾಚಲ
ಆರ್ಟಿಕಲ್ 371 ಎಚ್ ಅರುಣಾಚಲ ಪ್ರದೇಶದ ಕಾನೂನು ಸುವ್ಯವಸ್ಥೆಯ ಮೇಲೆ ರಾಜ್ಯಪಾಲರಿಗೆ ವಿಶೇಷಾಧಿಕಾರವನ್ನು ಒದಗಿಸುತ್ತದೆ. ಆರ್ಟಿಕಲ್ 371ಎಚ್ ವಿಧಿಯ ಆಧಾರದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳ ನಿರ್ಣಯವನ್ನು ರದ್ದು ಮಾಡಬಹುದಾಗಿದೆ. ಅರುಣಾಚಲದಲ್ಲಿ ಚೀನಾದ ಮೂಗುತೂರಿಸುವಿಕೆಯನ್ನು ಹತ್ತಿಕ್ಕುವಲ್ಲಿ ಈ ವಿಧಿಯು ಪ್ರಮುಖ ಪಾತ್ರ ವಹಿಸಿದೆ.
ಆರ್ಟಿಕಲ್ 371 ಬಿ: ಅಸ್ಸಾಂ
ಅಸ್ಸಾಂನ ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗಾಗಿ ತರಲಾದ ವಿಧಿಯಿದು. ಅಸ್ಸಾಂನ ಬುಡಕಟ್ಟುಗಳಿಗೆ ಸ್ವಾಯತ್ತತೆ ಮತ್ತು ಧ್ವನಿ ನೀಡುವ ಮಹತ್ತರ ಉದ್ದೇಶ ಇದಕ್ಕಿದೆ. ಈ ವಿಧಿಯ ಪ್ರಕಾರ, ಅಸ್ಸಾಂನ ಬುಡಕಟ್ಟು ಪ್ರದೇಶಗಳಿಂದ ಚುನಾಯಿತರಾದ ರಾಜಕಾರಣಿಗಳನ್ನು ಒಳಗೊಂಡ ಪ್ರತ್ಯೇಕ ಶಾಸಕಾಂಗ ಸಭೆಯ ಸಮಿತಿಯನ್ನು ರಚಿಸಲು ರಾಜ್ಯಪಾಲರಿಗೆ ರಾಷ್ಟ್ರಪತಿಗಳು ಅಧಿಕಾರ ದಯಪಾಲಿಸಿದ್ದಾರೆ. ರಾಜ್ಯಪಾಲರು ಈ ಬುಡಕಟ್ಟು ಪ್ರದೇಶಗಳ ಕುರಿತ ವಾರ್ಷಿಕ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಬೇಕಾಗುತ್ತದೆ.
ಆರ್ಟಿಕಲ್ 371 ಐ- ಗೋವಾ
ಗೋವಾದ ವಿಧಾನಸಭೆಯು 30 ಕ್ಕಿಂತಲೂ ಕಡಿಮೆ ಸದಸ್ಯರನ್ನು ಹೊಂದಿರಬಾರದು ಎಂದು ಹೇಳುತ್ತದೆ ಈ ವಿಧಿ. ಆರ್ಟಿಕಲ್ 371 ಐ ಅಡಿಯಲ್ಲಿ ಭೂ ಮಾರಾಟ, ಆಸ್ತಿಗಳ ಮಾಲೀಕತ್ವದ ವಿಚಾರದಲ್ಲಿ ಕಾನೂನು ಗಳನ್ನು ರೂಪಿಸುವ ವಿಶೇಷಾಧಿಕಾರ ಗೋವಾ ವಿಧಾನಸಭೆಗೆ ಇದೆ.
ಆರ್ಟಿಕಲ್ 371ಡಿ  ಮತ್ತು ಇ- ಆಂಧ್ರಪ್ರದೇಶ
1974ರಂದು ಸಂವಿಧಾನಕ್ಕೆ ಸೇರ್ಪಡೆಗೊಂಡ ಈ ವಿಧಿಯು ಉದ್ಯೋಗ ಮತ್ತು ಶಿಕ್ಷಣದಲ್ಲಿ ಆಂಧ್ರದ ಜನರಿಗೆ ಸಮಾನ ಅವಕಾಶಗಳನ್ನು ಮತ್ತು ಸೌಲಭ್ಯಗಳನ್ನು ಒದಗಿಸುತ್ತದೆ. ಸರಳವಾಗಿ ಹೇಳಬೇಕೆಂದರೆ, ಆಂಧ್ರವಾಸಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಖಾತ್ರಿಿಪಡಿಸುವ ವಿಶೇಷಾಧಿಕಾರವನ್ನು ಈ ವಿಧಿಯು ನೀಡಿದೆ.
ಆರ್ಟಿಕಲ್ 371 ಜಿ: ಮಿಜೋರಾಂ
ಆರ್ಟಿಕಲ್ 371-ಜೆ ವಿಧಿಯು ನಾಗಾಲ್ಯಾಂಡ್‌ಗೆ ಅನ್ವಯವಾಗುವ ಆರ್ಟಿಕಲ್ 371ಎಗೆ ಸಾಮ್ಯತೆ ಹೊಂದಿದೆ. ಗಡಿ ರಾಜ್ಯದ ಜನರ ಸಾಂಪ್ರದಾಯಿಕ ಕಾನೂನು-ಕಟ್ಟಳೆಗಳು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಭೂ ಹಕ್ಕುಗಳಿಗೆ ದೇಶದ ಕಾನೂನು ಅನ್ವಯವಾಗುವುದಿಲ್ಲ. ಈ ಭಾಗದಲ್ಲೂ ಹೊರಗಿನ ರಾಜ್ಯಗಳವರಿಗೆ ಜಾಗ ಖರೀದಿಸುವ ಅಧಿಕಾರವಿಲ್ಲ. ಒಂದು ವೇಳೆ ಈ ವಿಧಿಯಲ್ಲಿ ಬದಲಾವಣೆ ತರಬೇಕೆಂದರೆ, ವಿಧಾನಸಭೆಯ ಅಂಗೀಕಾರ ಅಗತ್ಯವಾಗುತ್ತದೆ. ರಾಜ್ಯಪಾಲರು ಮಿಜೋರಾಂನ ಅಭಿವೃದ್ಧಿಯ ಕುರಿತ ವಾರ್ಷಿಕ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಬೇಕು.
ಆರ್ಟಿಕಲ್ 371 ಜೆ: ಹೈದ್ರಾಬಾದ್ ಕರ್ನಾಟಕ
ಹೈದ್ರಾಬಾದ್ ಕರ್ನಾಟಕ ಭಾಗದ ಆರು ಹಿಂದುಳಿದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ವಿಧಿಯಿದು. ಇದು ಮಹಾರಾಷ್ಟ್ರ ಮತ್ತು ಗುಜರಾತ್‌ಗೆ ಅನ್ವಯಿಸಲಾಗುವ ಆರ್ಟಿಕಲ್ 370 ಅನ್ನು ಹೋಲುತ್ತದೆ. ಸ್ಥಳೀಯರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಈ ವಿಧಿಯು ಹೇಳುತ್ತದೆ. ಇದರಿಂದಾಗಿ ವೃತ್ತಿಪರ ಕೋರ್ಸ್‌ಗಳಿಗೆ ಸಾವಿರಾರು ವಿದ್ಯಾರ್ಥಿಗಳು ಪ್ರವೇಶವನ್ನೂ, ವಿದ್ಯಾವಂತರು ಉದ್ಯೋಗವನ್ನೂ ಪಡೆಯುವಂತಾಗಿದೆ. ಆದರೂ ಆರ್ಟಿಕಲ್ 371(ಜೆ) ಅನ್ವಯ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯ ಸಮರ್ಪಕ ಅನುಷ್ಠಾನವಾಗುತ್ತಿಲ್ಲ ಎನ್ನುವ ಅಸಮಾಧಾನವೂ ಇದೆ.
Advertisement

Udayavani is now on Telegram. Click here to join our channel and stay updated with the latest news.

Next