ದೋಟಿಹಾಳ: ನವರಾತ್ರಿ ಹಬ್ಬ ಆರಂಭವಾದರೆ ಸಾಕು ಮಹಿಳೆಯರಿಗೆ ಎಲ್ಲಿಲ್ಲದ ಸಡಗರ, ಸಂಭ್ರಮ. ಕಾರಣ ನವರಾತ್ರಿ ಹಬ್ಬದ 9 ದಿನಗಳ ಕಾಲ ಮಹಿಳೆಯರು ವಿಶೇಷ ಮೌನವೃತ ಆಚರಣೆ ಮಾಡುತ್ತಿರುವುದಾಗಿದೆ. ಕಳೆದ 20 ವರ್ಷಗಳಿಂದಲೂ ಗ್ರಾಮದಲ್ಲಿ ಈ ವಿಶೇಷ ವೃತ ಕಂಡು ಬರುತ್ತಿದೆ.
ಕಳೆದ ಎರಡು ವರ್ಷ ಕೊರೊನಾ ಮಾಹಾಮಾರಿಯಿಂದ ಮಂಕಾಗಿದ್ದ ದಸರಾ ಹಬ್ಬ ಈ ವರ್ಷ ಮತ್ತೆ ತನ್ನ ವೈಭವವನ್ನು ಕಾಣುತ್ತಿದೆ. ಸೋಮವಾರಿದಿಂದ ನವರಾತ್ರಿ ಆರಂಭವಾದ ಪ್ರಯುಕ್ತ ಗ್ರಾಮದಲ್ಲಿನ ಮಹಿಳೆಯರು ಮತ್ತು ಮಕ್ಕಳು ಆಶ್ವೀಜ ಮಾಸದ ನವರಾತ್ರಿ ಹಬ್ಬದಲ್ಲಿ ವಿಶಿಷ್ಠವಾದ ಮೌನಾಚರಣೆಯೊಂದನ್ನು ಆಚರಿಸುತ್ತಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಇಲ್ಲಿನ ನೂರಕ್ಕೂ ಹೆಚ್ಚು ಮಹಿಳೆಯರು ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಮೌನವಾಗಿ ಬನ್ನಿ ಮಹಾಕಾಳಿ ಕಟ್ಟೆಗೆ ಹೋಗಿ ಪೂಜೆ ಸಲ್ಲಿಸಿ ವಿಶೇಷವಾದ ಮೌನವೃತಾಚರಣೆ ಬೆಳಗಿನ ಜಾವ ಆಚರಿಸುತ್ತಿರುವುದು ಕಂಡು ಬರುತ್ತದೆ.
ಆಚರಣೆ ಕ್ರಮ: ಆಶ್ವೀಜ ಮಾಸದ ನವರಾತ್ರಿಯ ಪ್ರತಿದಿನ ಗ್ರಾಮದ ಯುವತಿಯರು, ಮಹಿಳೆಯರು, ಮತ್ತು ಮಕ್ಕಳು ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಮನೆ ಸ್ವಚ್ಛಗೊಳಿಸಿ, ದೇವರ ಕೋಣೆಯಲ್ಲಿ ರಂಗೋಲಿ ಹಾಕಿ, ಶೃಂಗಾರ ಮಾಡಿ ಮೌನವಾಗಿಯೇ ಇದ್ದು, ಮಡಿವಂತಿಕೆಯಿಂದ ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಗುಂಪು ಗುಂಪಾಗಿ ಮಬ್ಬು ಕತ್ತಲಲ್ಲಿ ಕೈಯಲ್ಲಿ ಹೂ-ಕಾಯಿ, ಕುಂಕುಮ ಹಣ್ಣುಹಂಪಲುಗಳೊಂದಿಗೆ ಗ್ರಾಮದಲ್ಲಿರುವ ಬನ್ನಿ ಮಹಾಕಾಳಿ ಕಟ್ಟೆಗೆ ಯಾರೊಂದಿಗೂ ಮಾತನಾಡದೆ ತೆರಳಿ ಪೂಜೆ ಸಲ್ಲಿಸುತ್ತಾರೆ.
ಅಕ್ಕಪಕ್ಕ ಜನರಿದ್ದರೂ ಪರಸ್ಪರ ಮಾತನಾಡದೆ ಕತ್ತಲಲ್ಲಿ ಮೌನವಾಗಿಯೆ ಹೆಜ್ಜೆ ಹಾಕುತ್ತಾರೆ. ಬನ್ನಿಕಟ್ಟೆಗೆ ಹೋಗಿ ಪೂಜೆ ಸಲ್ಲಿಸಿ ತಮ್ಮ ತಮ್ಮ ಪ್ರಾರ್ಥನೆ, ಹರಕೆಯನ್ನು ದೇವರಿಗೆ ಸಲ್ಲಿಸುತ್ತಾರೆ. ಬನ್ನಿಕಟ್ಟೆಗೆ ಇದೆ ರೀತಿ ಮೌನ ಆಚರಿಸಲು ಬರುವ ತಮ್ಮ ಗೆಳತಿಯರೊಂದಿಗೂ ಅಲ್ಲಿ ಮಾತನಾಡುವುದಿಲ್ಲ. ಪೂಜೆ ಮುಗಿಸಿಕೊಂಡು ಮನೆಗೆ ಮರಳಿದ ಬಳಿಕವೇ ಮೌನ ಬಿಟ್ಟು ಮಾತನಾಡುತ್ತಾರೆ.
ನಂಬಿಕೆ: ಬ್ರಾಹ್ಮಿ ಮಹೂರ್ತದಲ್ಲಿ ಮೌನವೃತ ಆಚರಿಸಿ ಬನ್ನಿ ಮಹಾಕಾಳಿಗೆ ಪೂಜೆ ಸಲ್ಲಿಸುವುದರಿಂದ ಕಷ್ಟಗಳು ನಿವಾರಣೆಯಾಗುತ್ತವೆ ಎಂಬುದು ಹಿಂದೂ ಧರ್ಮದ ಶ್ರೇಷ್ಟವಾದ ನಂಬಿಕೆಯಾಗಿದೆ. ಮೌನವೃತಾಚರಣೆ ಸುಮಾರು 18-20 ವರ್ಷಗಳಿಂದ ಆಚರಣೆಯಲ್ಲಿದೆ. ಈ ವೃತಾಚರಣೆಯಿಂದ ಗ್ರಾಮದ ಹಲವಾರು ಜನರಿಗೆ ಒಳಿತಾಗಿರುವ ಉದಾಹರಣೆಗಳಿವೆ. ಮಹಿಳೆಯರು ತಮ್ಮ ಗಂಡಂದಿರ ಒಳಿತಿಗಾಗಿ ಪೂಜೆ ಸಲ್ಲಿಸಿದರೇ, ಯುವತಿಯರು ಕಂಕಣಭಾಗ್ಯ ದೊರೆತು ಉತ್ತಮ ಜೀವನ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ. ಮಕ್ಕಳು ಒಳ್ಳೆಯ ವಿಧ್ಯಾಬ್ಯಾಸ ದೊರೆಯಲಿ ಎಂದು ಪ್ರಾರ್ಥಿಸುತ್ತಾರೆ.
ಕೆಲವೇ ಜನರಿಂದ ಪ್ರಾರಂಭವಾದ ಈ ಆಚರಣೆ ನಂತರದ ದಿನಗಳಲ್ಲಿ ನಂಬಿಕೆ ಬಲವಾದ ಕಾರಣ ಊರಿನ ಪ್ರತಿ ಮನೆಯಿಂದ ಒಬ್ಬರಾದರೂ ಮೌನಾಚರಣೆ ಮೂಲಕ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ.
-ಮಲ್ಲಿಕಾರ್ಜುನ ಮೆದಿಕೇರಿ