Advertisement

ರೈತರ ಸಮಸ್ಯೆ ಚರ್ಚೆಗೆ ವಿಶೇಷ ಅಧಿವೇಶನ

12:36 PM Oct 23, 2018 | Team Udayavani |

ಬೆಂಗಳೂರು: ಕಾಫಿ ಬೆಳೆಗಾರರು ಸೇರಿ ಎಲ್ಲ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿ ನವೆಂಬರ್‌ನಲ್ಲಿ ರಾಷ್ಟ್ರಮಟ್ಟದ ಬೃಹತ್‌ ರ್ಯಾಲಿ ನಡೆಸಲು ಅಖೀಲ ಭಾರತ ಕಿಸಾನ್‌ ಸಭಾ ನಿರ್ಧರಿಸಿದೆ. 

Advertisement

ನ.30ರಂದು ದೆಹಲಿಯಲ್ಲಿ ನಡೆಯಲಿರುವ ಬೃಹತ್‌ ರ್ಯಾಲಿಯಲ್ಲಿ ಸುಮಾರು 200ಕ್ಕೂ ಅಧಿಕ ಕಿಸಾನ್‌ ಸಂಘಗಳು, ವಿವಿಧ ರೈತ ಸಂಘಟನೆಗಳು ಭಾಗವಹಿಸಲಿವೆ. ರೈತರ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು ಎನ್ನುವುದು ರ್ಯಾಲಿಯ ಒಕ್ಕೊರಲ ಒತ್ತಾಯ ಆಗಿದೆ. ಕರ್ನಾಟಕದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು ಎಂದು ಮಾಜಿ ಸಂಸದ ಮತ್ತು ಅಖೀಲ ಭಾರತ ಕಿಸಾನ್‌ ಸಭಾ ಪ್ರಧಾನ ಕಾರ್ಯದರ್ಶಿ ಅನನ್‌ ಮುಲ್ಲಾ ತಿಳಿಸಿದರು.

ನಗರದ ಎಸ್‌ಸಿಎಂ ಹೌಸ್‌ನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ಬೆಳೆಗಾರರ ಒಕ್ಕೂಟ ಸಂಯುಕ್ತವಾಗಿ ಸೋಮವಾರ ಹಮ್ಮಿಕೊಂಡಿದ್ದ ಕಾಫಿ ಬೆಳೆಗಾರರ ಅಖೀಲ ಭಾರತ ಸಮಾವೇಶದಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರ ಇಂದು ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ರೈತರಿಗೆ ಸರಿಯಾಗಿ ಬ್ಯಾಂಕ್‌ ಸಾಲ ಸಿಗುತ್ತಿಲ್ಲ. ಅನಿವಾರ್ಯವಾಗಿ ಖಾಸಗಿ ಸಾಲದ ಮೊರೆಹೋಗಬೇಕಾಗಿದೆ. ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಇಲ್ಲ.

ಮತ್ತೂಂದೆಡೆ ಸಾಗುವಳಿ ವೆಚ್ಚ ಏರಿಕೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ರೈತಾಪಿ ವರ್ಗಕ್ಕೆ ನೀಡಿದ ಭರವಸೆಗಳು ಹುಸಿಯಾಗಿವೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಶೇ.46ರಷ್ಟು ಏರಿಕೆಯಾಗಿದೆ. ಈ ಎಲ್ಲ ಸಮಸ್ಯೆಗಳ ಕುರಿತು ಚರ್ಚಿಸಲು ವಿಶೇಷ ಅಧಿವೇಶನದ ಅವಶ್ಯಕತೆ ಇದೆ ಎಂದು ಹೇಳಿದರು. 

ಕಾಫಿ ಬೆಳೆಗಾರರು ಇಂದು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ, ಮಧ್ಯವರ್ತಿಗಳ ಹಾವಳಿಯಿಂದ ನಷ್ಟ ಅನುಭವಿಸುತ್ತಿದ್ದಾರೆ. ಕಾಫಿ ಬೆಳೆ ವಿಸ್ತರಣೆಗೆ ಭೂಮಿಗಾಗಿ ಬೇಡಿಕೆ ಇದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನೈಸರ್ಗಿಕ ವಿಕೋಪಕ್ಕೆ ಕಾಫಿ ಬೆಳೆ ತುತ್ತಾಗುತ್ತಿದೆ. ಇಂತಹ ಹಲವು ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

ಬೆಂಬಲ ಬೆಲೆಗೆ ಕಾನೂನು ರೂಪಿಸಿ: ಕರ್ನಾಟ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಸಿ.ಬಯ್ನಾರೆಡ್ಡಿ ಮಾತನಾಡಿ, ಡಾ.ಎಂ.ಎಸ್‌. ಸ್ವಾಮಿನಾಥನ್‌ ವರದಿಯ ಶಿಫಾರಸಿನಂತೆ ಕಾಫಿ ಬೆಳೆಯ ಒಟ್ಟು ಉತ್ಪಾದನಾ ವೆಚ್ಚಕ್ಕೆ ಅರ್ಧದಷ್ಟು ಲಾಭಾಂಶ ಸೇರಿಸಿದ ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದಂತೆ ಕಾನೂನು ರೂಪಿಸಬೇಕು. ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಬೇಕು.

ಆನೆ ಹಾಗೂ ಇತರೆ ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸಮಾವೇಶದಲ್ಲಿ ಅಖೀಲ ಭಾರತ ಕಿಸಾನ್‌ ಸಭಾದ ಜಂಟಿ ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್‌, ವಿಜು ಕೃಷ್ಣನ್‌, ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ತೀರ್ಥ ಮಲ್ಲೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next