ಯಾದಗಿರಿ: ಜಿಲ್ಲಾದ್ಯಂತ ಡಿ.11ರಿಂದ ಡಿ.31ರ ವರೆಗೆ ವಿಶೇಷ ಶಾಲಾ ಲಸಿಕಾ ಅಭಿಯಾನ ನಡೆಯಲಿದ್ದು, 1ರಿಂದ 10ನೇ ತರಗತಿ ಎಲ್ಲ ಮಕ್ಕಳಿಗೆ ಅವರ ಶಾಲೆಗಳಲ್ಲಿ
ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಪ್ರತಿ ಮಕ್ಕಳಿಗೆ ಲಸಿಕೆ ಕೊಡಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ಹೇಳಿದರು. ಜಿಲ್ಲೆಯ ಬಳಿಚಕ್ರ ಗ್ರಾಮದ ಭಕ್ತಿಲಿಂಗೇಶ್ವರಹಿರಿಯ ಪ್ರಾಥಮಿಕ ಶಾಲೆ ಮತ್ತು ಬಳಿಚಕ್ರ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಶಾಲಾ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ಸರ್ಕಾರ ಟಿಟಿ ಲಸಿಕೆ ಬದಲಾಗಿ ಟಿಡಿ ಲಸಿಕೆಯನ್ನು ಏಪ್ರಿಲ್ -2019ರಿಂದ ರಾಜ್ಯದಲ್ಲಿ ಪ್ರಾರಂಭಿಸಿದೆ. ರೋಗ ನಿರೋಧಕ ರಕ್ಷಣೆ ಮುಂದುವರಿಸಲು ಡಿಪಿಟಿ- ವರ್ಧಕ ಲಸಿಕೆ ನೀಡುವುದು ಅತ್ಯಗತ್ಯ. ಲಸಿಕೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಪೂರ್ವ ಅರ್ಹತೆ ಪಡೆದಿದ್ದು, ಸುರಕ್ಷಿತವಾಗಿದೆ. ಲಸಿಕೆಯಿಂದ ಗಂಭೀರ, ಪ್ರತಿಕೂಲ ಪರಿಣಾಮಗಳು ಅಪರೂಪ. ಚುಚ್ಚು ಮದ್ದು ನೀಡಿದ ಸ್ಥಳದಲ್ಲಿ ಸ್ವಲ್ಪ ನೋವು ಮತ್ತು ಊತ ಉಂಟಾಗುತ್ತದೆ. ಕೆಲವು ಮಕ್ಕಳಲ್ಲಿ ಸ್ವಲ್ಪ ಮಟ್ಟಿನ ಜ್ವರ ಕಾಣಿಸಬಹುದು. ಜ್ವರ ಕಾಣಿಸಿದಲ್ಲಿ ವೈದ್ಯರ ಸಲಹೆ ಮೇರೆಗೆ ಪ್ಯಾರಾಸಿಟಮುಲ್ ಮಾತ್ರೆ ನೀಡಬಹುದು. ಚುಚ್ಚು ಮದ್ದು ನೀಡಿದ ಸ್ಥಳದಲ್ಲಿ ಏನನ್ನು ಹಚ್ಚಬಾರದು ಎಂದು ಸಲಹೆ ನೀಡಿದರು. ರಾಜ್ಯದಲ್ಲಿ ಡಿಪ್ತಿರಿಯಾ (ಗಂಟಲುಮಾರಿ) ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿವೆ.
ಇದರಿಂದ ಮಕ್ಕಳನ್ನು ರಕ್ಷಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 1ನೇ ತರಗತಿ ಮಕ್ಕಳಿಗೆ ಡಿಪಿಟಿ ಲಸಿಕೆ ಹಾಗೂ 2ರಿಂದ 10ನೇ ತರಗತಿ ಮಕ್ಕಳಿಗೆ (ಸರ್ಕಾರಿ,ಖಾಸಗಿ ಶಾಲೆಗಳು) ಟಿಡಿ ಲಸಿಕೆ ನೀಡುತ್ತದೆ. ಆರೋಗ್ಯ ಕೇಂದ್ರ ಹತ್ತಿರದ ಅಂಗನವಾಡಿ ಕೇಂದ್ರಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಲಸಿಕೆ ನೀಡಲಾಗುವುದು. ವಸತಿ ಶಿಕ್ಷಣ ಸಂಸ್ಥೆಗಳು ಹಾಸ್ಟೆಲ್ ಮತ್ತು ಇನ್ನಿತರ ಶಾಲಾ ಮಕ್ಕಳಿಗೂ ಲಸಿಕೆ ನೀಡಲಾಗುವುದು ಎಂದು ವಿವರಿಸಿದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ 150 ಮಕ್ಕಳಿಗೆ ಲಸಿಕೆ ನೀಡಲಾಯಿತು. ಶಿಕ್ಷಕರಾದ ನಿಜಗುಣ ಆಚಾರ್ಯ, ಉಮಾದೇವಿ, ಸ್ವಾಮಿಗೌಡ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಲಕ್ಷ್ಮೀ, ಸುಜಾತ, ರಾಜೇಂದ್ರ, ಅಣವೀರಪ್ಪ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.