Advertisement

ಹಳ್ಳಿಗಳಲ್ಲಿ ಕಾನೂನು ಅರಿವು ಮೂಡಿಸಲು ವಿಶೇಷ ಸಪ್ತಾಹ

12:06 AM Nov 07, 2021 | Team Udayavani |

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸಲು ಜನರ ಮನೆ ಬಾಗಿಲಿಗೆ ತೆರಳುತ್ತಿರುವ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನ.8ರಿಂದ 14ರ ವರೆಗೆ ವಿಶೇಷ ಕಾನೂನು ಸೇವಾ ಸಪ್ತಾಹ ಆಚರಿಸುತ್ತಿದೆ.

Advertisement

ಸ್ವಾತಂತ್ರ್ಯ ಅಮೃತೋತ್ಸವದ ಅಂಗ ವಾಗಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ ಕಾನೂನು ಅರಿವು ಅಭಿಯಾನದ ಭಾಗವಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಕಾನೂನು ಅರಿವು ಕಾರ್ಯಕ್ರಮ ಹಾಗೂ ವಿಶೇಷ ಕಾನೂನು ಸೇವಾ ಸಪ್ತಾಹವನ್ನು ಹಮ್ಮಿಕೊಂಡಿದೆ.

16 ಸಾವಿರ ಹಳ್ಳಿ ತಲುಪಿದ ಅಭಿಯಾನ
ರಾಜ್ಯದಲ್ಲಿ ಅ.2ರಿಂದ ಕಾನೂನು ಅರಿವು ಅಭಿಯಾನ ಆರಂಭ ಗೊಂಡಿದ್ದು, ನ.14ರ ವರೆಗೆ ನಡೆಯ ಲಿದೆ. 45 ದಿನಗಳ ಈ ಅಭಿಯಾನದಲ್ಲಿ ಎಲ್ಲ ಹಳ್ಳಿಗಳಿಗೆ ತಲುಪುವ ಗುರಿ ಇಟ್ಟುಕೊಂಡಿರುವ ಕಾನೂನು ಸೇವಾ ಪ್ರಾಧಿಕಾರವು ರಾಜ್ಯದ ಒಟ್ಟು 29,736 ಹಳ್ಳಿಗಳ ಪೈಕಿ ಈವರೆಗೆ 16 ಸಾವಿರ ಹಳ್ಳಿಗಳನ್ನು ತಲುಪಿದೆ.

ಈ ಅಭಿಯಾನದಲ್ಲಿ ಹಿರಿಯ ನಾಗರಿಕರು, ವಿಕಲಚೇತನರ ಹಕ್ಕುಗಳು, ಪೋಕ್ಸೋ ಕಾಯ್ದೆ, ಕೋವಿಡ್‌-19 ಜಾಗೃತಿ ಮತ್ತು ವ್ಯಾಕ್ಸಿನೇಷನ್‌, ಮೋಟಾರು ವಾಹನ ಕಾಯ್ದೆ, ಗ್ರಾಹಕರ ಹಕ್ಕುಗಳ ಕಾನೂನುಗಳು, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ, ಕಾರ್ಮಿಕರ ಹಕ್ಕು ಮತ್ತು ಕಾನೂನುಗಳು, ತೃತೀಯ ಲಿಂಗಿಗಳ ಕಾಯ್ದೆ ಕುರಿತು ಅರಿವು ಮೂಡಿಸಲಾಗುತ್ತಿದೆ.

ಇದನ್ನೂ ಓದಿ:2026ರಲ್ಲಿ ಚಂದ್ರನಲ್ಲಿ ರೋವರ್‌; ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ, ನಾಸಾದಿಂದ ಹೊಸ ಯೋಜನೆ

Advertisement

ಜೈಲುಗಳಲ್ಲಿ ಕಾರ್ಯಕ್ರಮ
ಕಾನೂನು ಅರಿವು ಅಭಿಯಾನ ಮತ್ತು ಕಾನೂನು ಸೇವಾ ಸಪ್ತಾಹದ ಅಂಗವಾಗಿ ಎಲ್ಲ ಜಿಲ್ಲೆಗಳಲ್ಲಿ 1,775 ಕಾರ್ಯಕ್ರಮಗಳು, 186 ಶಿಬಿರಗಳು ಮತ್ತು ಜೈಲುಗಳಲ್ಲಿ 49 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಅಭಿಯಾನಕ್ಕಾಗಿ ರಾಜ್ಯ ಕಾನೂನು ಸೇವಾ ಪ್ರಾಧಿ ಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ತಾಲೂಕು ಕಾನೂನು ಸೇವಾ ಸಮಿತಿಗಳ ಮಟ್ಟದಲ್ಲಿ ಕಾರ್ಯಯೋಜನೆ ರೂಪಿಸಲಾಗಿದೆ. ಕಾನೂನು ಕಾಲೇಜುಗಳು ವಿದ್ಯಾರ್ಥಿ ಗಳು, ವಕೀಲರು, ಪ್ರಾಧಿಕಾರದ ಪ್ಯಾರಾ ಲೀಗಲ್‌ ಸ್ವಯಂಸೇವಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಕೈ ಜೋಡಿಸಲಿದ್ದಾರೆ ಎಂದು ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಚ್ಛತೆ ಮತ್ತು ಮಕ್ಕಳ ಹಕ್ಕುಗಳ ಕುರಿತು ಜಾಗೃತಿ
ನ.8ರಿಂದ 14ರ ವರೆಗೆ ನಡೆಯುವ ಕಾನೂನು ಸೇವಾ ಸಪ್ತಾಹದಲ್ಲಿ, ನ.9ರಂದು “ಆಹಾರ ಕಲಬೆರಕೆ ತಡೆ ಕಾಯ್ದೆ’ ಅಭಿಯಾನ ಹಾಗೂ ನ.10ರಿಂದ 13ರ ವರೆಗೆ ಪ್ರತಿ ದಿನ ಸ್ವಚ್ಛತಾ ಅಭಿಯಾನ ನಡೆಯಲಿದೆ. ಈ ಅವಧಿಯಲ್ಲಿ ಮನೆ-ಮನೆಗೆ ತೆರಳಿ ತ್ಯಾಜ್ಯ ವಿಲೇವಾರಿ, ಪ್ಲಾಸ್ಟಿಕ್‌ ಬಳಕೆ ಮತ್ತಿತರ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ನ.14ರಂದು ಮಕ್ಕಳ ಹಕ್ಕುಗಳ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಲಿವೆ.

ಬಡವರು, ಶೋಷಿತರು ಹಾಗೂ ದುರ್ಬಲ ವರ್ಗದ ಜನರಿಗೆ ಅವರ ಹಕ್ಕುಗಳು ಮತ್ತು ಕಾನೂನುಬದ್ಧ ಸೇವೆಗಳ ಕುರಿತು ಅರಿವು ಮೂಡಿಸಬೇಕು. ಮನೆ ಬಾಗಿಲಿಗೆ ತೆರಳಿ ಕಾನೂನು ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ಅಭಿಯಾನ ಮತ್ತು ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಈವರೆಗೆ ಒಳ್ಳೆಯ ಸ್ಪಂದನೆ ಸಿಕ್ಕಿದೆ.
– ಎಚ್‌. ಶಶಿಧರ ಶೆಟ್ಟಿ, ಸದಸ್ಯ ಕಾರ್ಯದರ್ಶಿ, ರಾಜ್ಯ ಕಾ. ಸೇವಾ ಪ್ರಾಧಿಕಾರ

Advertisement

Udayavani is now on Telegram. Click here to join our channel and stay updated with the latest news.

Next