Advertisement

ಹಬ್ಬದ ವಿಶೇಷ ಉಪ್ಪಿನ ಪಾಯಸ!

07:20 PM Oct 29, 2019 | mahesh |

ಹೋದಷ್ಟೇ ರಭಸದಲ್ಲಿ ಪಾಯಸ ಅವರ ಬಾಯಿಯಿಂದ ಹಿಂದಕ್ಕೆ ಬಂತು. ಯಾಕ್ರೋ, ಬಿಸಿ ಆಯ್ತಾ? ಅಂತ ಕೇಳಿದೆ. ಅವರು, ಇಲ್ಲ ಆಂಟಿ ಎಂದಷ್ಟೇ ಹೇಳಿ, ಪರಸ್ಪರ ಮುಖ ಮುಖ ನೋಡಿಕೊಂಡರು.

Advertisement

ಕಳೆದ ಬಾರಿಯ ದೀಪಾವಳಿ ಹಬ್ಬಕ್ಕೆ ಓಮಾನ್‌ನಿಂದ ಗೆಳೆಯರ ಕುಟುಂಬ ನಮ್ಮ ಮನೆಗೆ ಬಂದಿತ್ತು. ಹಬ್ಬದ ಖುಷಿ, ಗೆಳೆಯರು ಬಂದ ಸಡಗರದಲ್ಲಿ ರುಚಿರುಚಿಯಾಗಿ ಅಡುಗೆ ಮಾಡುವ ಉತ್ಸಾಹದಲ್ಲಿದ್ದೆ ನಾನು. ಗೆಳತಿಯ ಮಕ್ಕಳಿಬ್ಬರಿಗೂ ಶ್ಯಾವಿಗೆ ಪಾಯಸ ಅಂದರೆ ಬಹಳ ಇಷ್ಟ. ಹಾಗಾಗಿ, ಮೆನುವಿನಲ್ಲಿ ಪಾಯಸವೂ ಇತ್ತು. ಮಕ್ಕಳೂ ಸಹ, ಮೊದಲು ಪಾಯಸವನ್ನೇ ಮಾಡಿ ಆಂಟಿ ಅಂತ ಕೇಳಿಕೊಂಡರು. ಅರ್ಧ ಗಂಟೆ ಸಮಯ ಕೊಡಿ, ಮಾಡುತ್ತೇನೆ ಅಂತ ಅಡುಗೆ ಮನೆಗೆ ಓಡಿದೆ.

ತೆಂಗಿನ ಕಾಯಿ ಹೆರೆದು ಹಾಲು ತೆಗೆದೆ. ಶ್ಯಾವಿಗೆಯನ್ನು ತುಪ್ಪದಲ್ಲಿ ಹುರಿದು, ಕೊನೆಯಲ್ಲಿ ತೆಗೆದ ತೆಂಗಿನ ಕಾಯಿ ಹಾಲಿನಲ್ಲಿ ಬೇಯಿಸಲಿಟ್ಟು, ಸಕ್ಕರೆ ಹಾಕಿದೆ. ಆರಂಭದಲ್ಲಿ ತೆಗೆದ ದಪ್ಪ ತೆಂಗಿನ ಕಾಯಿ ಹಾಲು ಹಾಕಿ, ಕುದಿಯಲು ಬಿಟ್ಟೆ. ಏಲಕ್ಕಿ, ಗೋಡಂಬಿ, ದ್ರಾಕ್ಷಿ ಹಾಕಿ ಪಾಯಸ ಮಾಡಿದೆ.

ಇಷ್ಟೇ ಅಲ್ಲ; ಮಧ್ಯ ಮಧ್ಯದಲ್ಲಿ ಅತಿಥಿ ಸತ್ಕಾರ, ಇತರೆ ಅಡುಗೆಗಳ ತಯಾರಿಯೂ ನಡೆದಿತ್ತು. ಹಾಗಾಗಿ, ಪಾಯಸ ಮಾಡುವುದು ಕೊಂಚ ತಡವೇ ಆಯ್ತು. ಆಮೇಲೆ ಚಂದದ ಬೌಲ್‌ಗ‌ಳನ್ನು ಹೊರತೆಗೆದು, ಅದರಲ್ಲಿ ಬಿಸಿಬಿಸಿ ಪಾಯಸವನ್ನು ಹಾಕಿ ಮಕ್ಕಳಿಗೆ ಕೊಟ್ಟೆ. ಹಬೆಯಾಡುತ್ತಿದ್ದ ಪಾಯಸವನ್ನು ಮಕ್ಕಳು ತಿನ್ನುವುದನ್ನು ನೋಡುತ್ತಾ, ಅವರ ಪ್ರತಿಕ್ರಿಯೆಗಾಗಿ ಕಾಯುತ್ತಾ ನಿಂತೆ. ಹೋದಷ್ಟೇ ರಭಸದಲ್ಲಿ ಪಾಯಸ ಅವರ ಬಾಯಿಯಿಂದ ಹಿಂದಕ್ಕೆ ಬಂತು. ಯಾಕ್ರೋ, ಬಿಸಿ ಆಯ್ತಾ? ಅಂತ ಕೇಳಿದೆ. ಅವರು, ಇಲ್ಲ ಆಂಟಿ ಎಂದಷ್ಟೇ ಹೇಳಿ, ಪರಸ್ಪರ ಮುಖ ಮುಖ ನೋಡಿಕೊಂಡರು. ನಂತರ, “ಆಂಟೀ, ಇದು ಸಿಹಿ ಇಲ್ಲ. ಉಪ್ಪಿದೆ’ ಅಂತ ಮುಖ ಕಿವುಚಿದರು.

ನಾನು ನಂಬಲೇ ಇಲ್ಲ. ಅದು ಹ್ಯಾಗೆ ಉಪ್ಪಾಗಲು ಸಾಧ್ಯ? ಅಂತ ರುಚಿ ನೋಡಿದರೆ, ಬಾಯಿಗಿಡಲೂ ಆಗದಷ್ಟು ಉಪ್ಪುಪ್ಪು! ತಕ್ಷಣ ನಡೆದ ಅಚಾತುರ್ಯದ ಅರಿವಾಯ್ತು. ನಾನು ಗಡಿಬಿಡಿಯಲ್ಲಿ, ಪಾಯಸಕ್ಕೆ ಸಕ್ಕರೆ ಹಾಕುವ ಬದಲು ಉಪ್ಪು ಸುರಿದಿದ್ದೆ. ಅಡುಗೆ ಮಾಡಿದ್ದನ್ನು ಬಡಿಸುವ ಮುನ್ನ ರುಚಿ ನೋಡಬಾರದು ಎಂಬ ನಿಯಮ ನಮ್ಮ ಮನೆಯಲ್ಲಿ ಇರುವುದರಿಂದ, ಪಾಯಸ ಆದ ಕೂಡಲೆ ಮಕ್ಕಳಿಗೆ ಹಾಗೆಯೇ ಕೊಟ್ಟಿದ್ದೆ. ಆಸೆಪಟ್ಟು ಪಾಯಸಕ್ಕೆ ಕೈ ಚಾಚಿದ್ದ ಮಕ್ಕಳು ಪೆಚ್ಚಾಗಿದ್ದನ್ನು ನೋಡಿ, ತುಂಬಾ ಬೇಜಾರಾಯ್ತು. ಕೊನೆಗೆ ಆ ದಿನ ಸಂಜೆ ಅವರಿಗೆ ಪುನಃ ಪಾಯಸ ಮಾಡಿಕೊಟ್ಟು, ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡೆ.

Advertisement

ಅಡುಗೆಮನೆಯ ಯಾವ ಮೂಲೆಯಲ್ಲಿ ಏನಿದೆ, ಯಾವ ವಸ್ತು ಎಲ್ಲಿದೆ ಅಂತ ಮನೆಯೊಡತಿಗೆ ಚೆನ್ನಾಗಿ ಗೊತ್ತಿರುತ್ತದೆ. ಕಣ್ಣು ಕಟ್ಟಿ ಬಿಟ್ಟರೂ ಆಕೆ ಎಲ್ಲೆಲ್ಲಿ ಏನೇನಿದೆ ಅಂತ ಗುರುತಿಸಬಲ್ಲಳು. ಆದರೂ, ಅವತ್ತು ಉಪ್ಪು-ಸಕ್ಕರೆ ಬದಲಾಗಲು ಕಾರಣವೇನು ಗೊತ್ತೇ? ನನ್ನವರು ಮಜ್ಜಿಗೆ ನೀರು ಮಾಡಲು ಉಪ್ಪು ತೆಗೆದುಕೊಂಡಿದ್ದರು. ಅದನ್ನು ತಂದು ಸಕ್ಕರೆ ಡಬ್ಬದ ಎದುರು ಇರಿಸಿ ಹೋಗಿದ್ದರು. ಅವೆರಡರ ಡಬ್ಬ ಒಂದೇ ಥರದ್ದು. ಅಷ್ಟು ಮಾತ್ರವಲ್ಲ, ದುಬೈನಲ್ಲಿ ಸಿಕ್ಕುವ ಸಕ್ಕರೆ ಹಾಗೂ ಉಪ್ಪಿನ ಹರಳುಗಳು ಸಾಮಾನ್ಯವಾಗಿ ಒಂದೇ ಗಾತ್ರದಲ್ಲಿ ಇರುತ್ತವೆ. ಅದಕ್ಕಾಗಿಯೇ ನಾನು ಉಪ್ಪು ಮತ್ತು ಸಕ್ಕರೆಯ ಡಬ್ಬಿಗಳನ್ನು ಯಾವತ್ತೂ ಒಂದೇ ಕಡೆ ಇರಿಸುವುದಿಲ್ಲ. ಆದರೆ, ಅವತ್ತು ಯಜಮಾನರು ಸ್ಥಳ ಬದಲಾವಣೆ ಮಾಡಿಬಿಟ್ಟಿದ್ದರು. ನಾನು ಅಭ್ಯಾಸಬಲದಂತೆ ಸಕ್ಕರೆ ಡಬ್ಬಿ ಅಂತ ಉಪ್ಪನ್ನು ಕೈಗೆತ್ತಿಕೊಂಡಿದ್ದೆ. ಮಕ್ಕಳು ಪಾಯಸಕ್ಕೆ ಕಾಯುತ್ತಿದ್ದಾರೆ ಅಂತ ಗಡಿಬಿಡಿಯಲ್ಲಿ ಪಾಯಸಕ್ಕೆ ಸಕ್ಕರೆ (ಉಪ್ಪು) ಸುರಿದಿದ್ದೆ.

ದೀಪಾವಳಿ ಬಂದಾಗ, ಶ್ಯಾವಿಗೆ ಪಾಯಸ ಅಂದಾಗೆಲ್ಲಾ ನಾನು ಮಾಡಿದ ಉಪ್ಪಿನ ಪಾಯಸವೇ ನೆನಪಿಗೆ ಬರುತ್ತದೆ. “ಆಂಟೀ, ನಿಮ್ಮನೆಯಲ್ಲಿ ಪಾಯಸಕ್ಕೆ ಉಪ್ಪು ಹಾಕ್ತೀರಾ?’ ಅಂತ ಕೇಳಿದ್ದು ನೆನಪಾಗುತ್ತದೆ..

-ರಜನಿ ಭಟ್‌ ದುಬೈ

Advertisement

Udayavani is now on Telegram. Click here to join our channel and stay updated with the latest news.

Next