Advertisement

ಗೋವರ್ಧನ ಗಿರಿಯಲ್ಲಿ ವೈಭವದ ಗೋಮಯ ರಂಗ ಪೂಜೆ

03:15 AM Nov 19, 2018 | Team Udayavani |

ಪೆರ್ಲ: ಗೋಪಾಷ್ಟಮಿಯ ಶುಭ ಸಂದರ್ಭದಲ್ಲಿ ಶುದ್ಧ ದೇಶೀಯ ತಳಿಯ ಗೋಮಯದಿಂದ ತಯಾರಿಸಿದ ಗೋವರ್ಧನ ಗಿರಿಯಲ್ಲಿ ಭಗವಾನ್‌ ಶ್ರೀಕೃಷ್ಣನಿಗೆ ನಡೆದ ರಂಗ ಪೂಜೆಯನ್ನು ದೀಪದ ಬೆಳಕಿನಲ್ಲಿ ಭಕ್ತಿಭಾವದೊಂದಿಗೆ ಆನಂದಿಸಿ ಅನೇಕ ಭಕ್ತಾದಿಗಳು ಕಣ್ತುಂಬಿಕೊಂಡರು. ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮಮಂದಿರದಲ್ಲಿ ಒಂದು ವಾರದಿಂದ ನಡೆದು ಬರುತ್ತಿದ್ದ ಗೋಮಾತಾ ಸಪರ್ಯಾ ಹಾಗೂ 8ನೇ ವರ್ಷದ ಗೋಪಾಷ್ಟಮೀ ಮಹೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನವಾಯಿತು.

Advertisement

ಬೆಳಗ್ಗೆ ಗಣಪತಿ ಹವನ, ಕಾಮಧೇನು ಹವನ, ಗೋವರ್ಧನ ಹವನ, ಕುಂಕುಮಾರ್ಚನೆ, ಭಜನೆ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಅಪರಾಹ್ನ ಗೋವರ್ಧನ ಪೂಜೆ, ಭಜನ ರಾಮಾಯಣ, ವಿಷ್ಣು ಸಹಸ್ರನಾಮ ಪಾರಾಯಣ, ಸಂಜೆ ಗೋ ಪೂಜೆ, ತುಳಸೀ ಪೂಜೆ, ದೀಪೋತ್ಸವ ನಡೆಯಿತು. ಮಹಾಪೂಜೆಯ ಸಂದರ್ಭದಲ್ಲಿ ರಂಗಪೂಜೆ, ಅಷ್ಟಾವಧಾನ ಸೇವೆ ನಡೆಯಿತು.

ಪೂಜೆಯ ಪ್ರಸನ್ನ ಕಾಲದಲ್ಲಿ ವೇದಮೂರ್ತಿ ಕೇಶವ ಪ್ರಸಾದ ಭಟ್‌ ಕೂಟೇಲು ಪ್ರಾರ್ಥನೆಯನ್ನು ನಡೆಸಿಕೊಟ್ಟು ಭಗವಂತನಿಂದ ಕೊಡಲ್ಪಟ್ಟ ಎಲ್ಲವನ್ನೂ ನಾವು ಭಗವಂತನಿಗೆ ಸಮರ್ಪಿಸಬೇಕು. ಭಗವಂತನ ಪ್ರಸಾದ ರೂಪವಾಗಿ ಲಭಿಸಿದುದನ್ನು ಮಾತ್ರ ನಾವು ಉಪಯೋಗಿಸಬಹುದು ಎಂದು ಶಾಸ್ತ್ರ ಹೇಳುತ್ತದೆ. ಸನಾತನ ಸಂಪ್ರದಾಯದ ಪ್ರಕಾರ ಪ್ರಾತ:ಕಾಲದಿಂದ ಶಯನದ ತನಕ ನಾವು ಮಾಡುವ ಕರ್ತವ್ಯವನ್ನು ದೇವತಾರಾಧನೆಯ ಭಾವದಿಂದ ಮಾಡಬೇಕು. ದೇವರ ಅನುಗ್ರಹದಿಂದ ಮಾತ್ರ ನಮ್ಮ ಕೆಲಸಗಳು ಸುಲಲಿತವಾಗಿ ಸಾಗಲು ಸಾಧ್ಯ.


ನಿತ್ಯಜೀವನದಲ್ಲಿ ಹಲವಾರು ದೇವತಾ ಕಾರ್ಯಗಳನ್ನು ಮಾಡಬೇಕಾಗಿದೆ. ಅದರಲ್ಲಿ ಗೋ ಪೂಜೆಯೂ ವಿಶೇಷವಾಗಿದೆ. ಸಂಪ್ರದಾಯದ ಪ್ರಕಾರ ಯಾವುದೇ ಕರ್ಮಗಳು ಗೋಗ್ರಾಸ ನೀಡಿದಲ್ಲಿಗೆ ಪರಿಪೂರ್ಣವಾಗುತ್ತದೆ. ಪ್ರತಿಯೊಂದು ಕರ್ಮವೂ ಗೋವಿನಿಂದ ಪ್ರಾರಂಭವಾಗಿ ಗೋವಿನಿಂದಲೇ ಮುಕ್ತಾಯವಾಗುತ್ತದೆ. ನಮ್ಮ ಭಾರತೀಯ ಪರಂಪರೆಯಲ್ಲಿ ಗೋವಿಲ್ಲದೆ ಮನುಷ್ಯ ಜೀವನ ಸಾಧ್ಯವಿಲ್ಲ.

ಗೋವಿನ ಪಾಲನೆಯನ್ನು ಜಗತ್ತಿಗೆ ತಿಳಿಸಿಕೊಟ್ಟವನು ಭಗವಾನ್‌ ಗೋಪಾಲಕೃಷ್ಣ ನಾಗಿದ್ದಾನೆ. ಗೋವನ್ನು ಹೇಗೆ ಪಾಲಿಸಬೇಕೆಂಬ ಶ್ರೇಷ್ಠವಾದ ಸಂದೇಶವನ್ನು ನೀಡಿದ ದಿವಸವೇ ಗೋಪಾಷ್ಟಮಿ ದಿನವಾಗಿದೆ. ಪೂರ್ವಕಾಲದಲ್ಲಿ ಗೋಪಾಲಕರು ದೇವೇಂದ್ರನನ್ನು ಪೂಜಿಸುತ್ತಿದ್ದರು. ಗೋವರ್ಧನ ಪರ್ವತವನ್ನು ಪೂಜಿಸಬೇಕೆಂದು ಶ್ರೀಕೃಷ್ಣನ ಆಶಯದಂತೆ ಗೋಪಾಲಕರು ಪೂಜಿಸಿದಾಗ ಸಿಟ್ಟುಗೊಂಡ ದೇವೇಂದ್ರನು ಧಾರಾಕಾರ ಮಳೆಯನ್ನೇ ಸುರಿಸುತ್ತಾನೆ. ಹೆದರಿದ ಗೋಪಾಲಕರು ಶ್ರೀಕೃಷ್ಣನ ಮೊರೆಯನ್ನು ಹೋಗುತ್ತಾರೆ. ಈ ಸಂದರ್ಭದಲ್ಲಿ ಗೋವರ್ಧನ ಪರ್ವತವನ್ನೇ ಎತ್ತಿ ಹಿಡಿದು ಗೋಪಾಲಕರನ್ನು, ಗೋವನ್ನು ರಕ್ಷಿಸುತ್ತಾನೆ. 7 ದಿನ ಮಳೆಸುರಿಸಿಯೂ ಗೆಲುವನ್ನು ಕಾಣದ ದೇವೇಂದ್ರನು ಶ್ರೀಕೃಷ್ಣನಿಗೆ ಶರಣಾಗುತ್ತಾನೆ.

Advertisement

ಅಹಂಕಾರವನ್ನು ತ್ಯಜಿಸಬೇಕೆಂಬ ಸಂದೇಶ ಈ ಮೂಲಕ ಜಗತ್ತಿಗೆ ನೀಡುತ್ತಾನೆ. ಈ ಹಿನ್ನೆಲೆಯಿಂದ ಗೋಮಯದಲ್ಲಿ ಗೋವರ್ಧನ ಪರ್ವತವನ್ನು ನಿರ್ಮಿಸಿ ಶ್ರೀಕೃಷ್ಣನನ್ನು ಪೂಜಿಸಿದಲ್ಲಿ ಆತ ಸಂತೃಪ್ತನಾಗುತ್ತಾನೆ. ತನ್ಮೂಲಕ ಇಷ್ಟಾರ್ಥ ಸಿದ್ಧಿಸುತ್ತದೆ ಎಂದರು. ಅನಂತರ ಎಲ್ಲರೂ ಪ್ರಸಾದ, ಭೋಜನ ಪ್ರಸಾದವನ್ನು ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next