Advertisement
ಸರಕಾರಿ ಶಾಲೆಗಳನ್ನು ಜನಸ್ನೇಹಿಗೊಳಿಸುವಲ್ಲಿ ಶಾಲಾ ಶಿಕ್ಷಕ ವರ್ಗದವರ ಪಾತ್ರವೂ ಬಹಳ ಪ್ರಾಮುಖ್ಯವಾದುದಾಗಿದೆ. ಅಂತಹ ಒಂದು ಉದಾಹರಣೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿರುವ ವಳಾಲು ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಈ ಪ್ರೌಢಶಾಲೆಯ ಶಿಕ್ಷಕಿಯೊಬ್ಬರು ತಮ್ಮ ಶಾಲೆಯ ವಾಚನಾಲಯದಲ್ಲಿ ವಿದ್ಯಾರ್ಥಿಗಳಿಗೆ ಓದಲು ಉತ್ತಮ ಪುಸ್ತಕಗಳನ್ನು ಸಂಗ್ರಹಿಸಲು ಸಾಮಾಜಿಕ ಜಾಲತಾಣದ ಮೂಲಕ ಹರಿಯಬಿಟ್ಟಿರುವ ಸಂದೇಶವೊಂದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಆ ಶಿಕ್ಷಕಿ ಮಾಡಿಕೊಂಡಿರುವ ಮನವಿ ಈ ರೀತಿಯಾಗಿದೆ…
‘ನಾನು ವಳಾಲು ಪ್ರೌಢಶಾಲಾ ಶಿಕ್ಷಕಿ ಶ್ರೀಮತಿ ಪುಷ್ಪಲತಾ.ಎಂ. ಪ್ರಕೃತ ವರ್ಷ ನನ್ನ ಶಾಲಾ ಗ್ರಂಥಾಲಯದ ಜವಾಬ್ದಾರಿ ನನ್ನದಾಗಿರುತ್ತದೆ. ಸರಕಾರ ಕೊಡಮಾಡಿದ ಒಂದಷ್ಟು ಪುಸ್ತಕಗಳ ಜತೆಗೆ ನನ್ನ ಪ್ರಯತ್ನದಿಂದ ಮತ್ತಷ್ಟು ಪುಸ್ತಕಗಳನ್ನು ಸೇರಿಸಿ ಗ್ರಂಥಾಲಯವನ್ನು ಅಭಿವೃಧ್ಧಿಪಡಿಸುವ ಆಸೆ. ತಾಂತ್ರಿಕ ಯುಗದ ಈ ದಿನಗಳಲ್ಲಿ ಓದುವ ಹವ್ಯಾಸ ಮರೆಯಾಗುತ್ತಿದೆ. ಉತ್ತಮ ಪುಸ್ತಕಗಳಿದ್ದಾಗ ಸಹಜವಾಗಿ ವಿದ್ಯಾರ್ಥಿಗಳು ಓದಿನ ಕಡೆ ಆಕರ್ಷಿತರಾಗಬಹುದೆಂಬುದು ನನ್ನ ನಂಬಿಕೆ. ಬಂಧುಗಳೇ ಸಹೃದಯರಾದ ತಮ್ಮಲ್ಲಿ ನನ್ನದೊಂದು ವಿಜ್ಞಾಪನೆ. ನಿಮ್ಮ ಮಕ್ಕಳ ಹುಟ್ಟು ಹಬ್ಬ, ಮದುವೆ ದಿನ, ಮದುವೆ ವಾರ್ಷಿಕೋತ್ಸವ, ಗೃಹಪ್ರವೇಶವೇ ಮೊದಲಾದ ಸುದಿನಗಳ ನೆನಪಿಗೆ ನಮ್ಮ ಶಾಲೆಗೊಂದು ಪುಸ್ತಕದ ಉಡುಗೊರೆ ನೀಡುವಿರಾ? ಪ್ರೀತಿಯಿಂದ ನೀವು ಕಳುಹಿಸಿದ ಪುಸ್ತಕಗಳನ್ನು ಜತನದಿಂದ ರಕ್ಷಿಸಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಬಳಸುವೆನೆಂದು ಪ್ರಮಾಣಿಸುವೆನು. ನೀವು ಪುಸ್ತಕಗಳ ಉಡುಗೊರೆಯನ್ನು ಕಳುಹಿಸಿ ನನ್ನ ಪ್ರಯತ್ನಕ್ಕೆ ಸಾರ ನೀರೆರೆಯುವಿರೆಂಬ ನಂಬಿಕೆಯೊಂದಿಗೆ ವಿರಮಿಸುವೆ. ನನ್ನ ಶಾಲಾ ವಿಳಾಸ…
Related Articles
Advertisement
ಶಿಕ್ಷಕಿಯ ‘ಪುಸ್ತಕ ಕೊಡುಗೆ’ ಮನವಿಗೆ ಉತ್ತಮ ಸ್ಪಂದನೆಮೊತ್ತಮೊದಲಿಗೆ ‘ನಮ್ಮೂರು ನೆಕ್ಕಿಲಾಡಿ’ ಸಂಸ್ಥೆಯ ಅಧ್ಯಕ್ಷರಾಗಿರುವ ಜತೀಂದ್ರ ಶೆಟ್ಟಿ ಮತ್ತು ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿಯವರು ಶಿಕ್ಷಕಿಯ ಮನವಿಗೆ ಸ್ಪಂದಿಸಿ 25 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಇನ್ನು ಬೆಂಗಳೂರಿನ ಗೆಳೆಯರ ಬಳಗದವರು ಐದು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಮಂಗಳೂರಿನಲ್ಲಿರುವ ನವಕರ್ನಾಟಕ ಪ್ರಕಾಶನದ ಮೂಲಕ ಶಾಲೆಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಹೆಬ್ರಿ ಸಮೀಪದ ಶಿವಪುರದ ಬಿ.ಸಿ. ರಾವ್ ಎಂಬ 77 ವರ್ಷದ ಹಿರಿಯ ಸಾಹಿತಿ ಮತ್ತು ಹರಿಕಥಾ ವಿದ್ವಾಂಸರು ತಮ್ಮ ಸಂಗ್ರಹದಲ್ಲಿರುವ ಪುಸ್ತಕಗಳ ಪೈಕಿ ಮಕ್ಕಳಿಗೆ ಪ್ರಯೋಜನವಾಗಬಹುದಾಗಿರುವ ಎರಡು ಬಾಕ್ಸ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಭರವಸೆಯನ್ನು ಈಗಾಗಲೇ ನೀಡಿದ್ದಾರೆ. ಇನ್ನೂ ಹಲವಾರು ವ್ಯಕ್ತಿಗಳು ವಳಾಲು ಶಾಲೆಗೆ ಪುಸ್ತಕಗಳನ್ನು ನೀಡಲು ಮುಂದೆ ಬಂದಿದ್ದು ಶಿಕ್ಷಕಿಯ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ತಮ್ಮ ಈ ವಿನೂತನ ಪ್ರಯತ್ನಕ್ಕೆ ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾ ಮತ್ತು ತಮ್ಮ ಸಹ ಶಿಕ್ಷಕರ ಸಹಕಾರ ಅಮೂಲ್ಯ ಎಂಬುದನ್ನು ಹೇಳಲು ಮರೆಯುವುದಿಲ್ಲ. ಕ್ಯಾಶ್ ಬೇಡ ಬುಕ್ಸ್ ಕೊಡಿ
ನಾವು ಹಣ ನೀಡುತ್ತೇವೆ ಮಕ್ಕಳಿಗೆ ಅಗತ್ಯವಿರುವ ಪುಸ್ತಕಗಳನ್ನು ನೀವೇ ಖರೀದಿಸಿ ಕೊಡಿಸಿ ಎಂದು ಹಲವರು ಶಿಕ್ಷಕಿ ಪುಷ್ಪಲತಾ ಅವರಿಗೆ ಹೇಳುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೆ ನಾವು ಹಣವನ್ನು ಸ್ವೀಕರಿಸುವುದಿಲ್ಲ ; ನಮ್ಮ ಉದ್ದೇಶ ನಾಡಿನ ಪುಸ್ತಕ ಪ್ರಿಯರ ಸಂಗ್ರಹದಲ್ಲಿರುವ ಪುಸ್ತಕಗಳು ನಮ್ಮ ಶಾಲೆಯ ಮಕ್ಕಳಿಗೆ ಸಿಗುವಂತಾಗಬೇಕು ಎಂಬುದಾಗಿದೆ, ಹಾಗಾಗಿ ದಯವಿಟ್ಟು ಪುಸ್ತಕಗಳನ್ನು ಮಾತ್ರ ಕಳುಹಿಸಿಕೊಡಿ ಎಂದು ಪುಷ್ಪಲತಾ ಅವರು ಮನವಿ ಮಾಡಿಕೊಂಡಿದ್ದಾರೆ. ತಾನು ಕರ್ತವ್ಯನಿರ್ವಹಿಸುತ್ತಿರುವ ಗ್ರಾಮೀಣ ಭಾಗದ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ‘ಪ್ರೌಢ’ರನ್ನಾಗಿ ಮಾಡಬೇಕೆಂದು ಶಿಕ್ಷಕಿ ಪುಷ್ಪಲತಾ ಅವರು ಸಾಮಾಜಿಕ ಜಾಲತಾಣವನ್ನು ಸಶಕ್ತವಾಗಿ ಬಳಸಿಕೊಂಡಿರುವುದು ಮತ್ತು ಆ ಮೂಲಕ ಅವರು ಮಾಡಿಕೊಂಡಿರುವ ಮನವಿಗೆ ಇದೀಗ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನೋವಿಕಾಸಕ್ಕಾಗಿ ಈ ಶಿಕ್ಷಕಿ ಮಾಡುತ್ತಿರುವ ಪ್ರಯತ್ನವನ್ನು ನಾವೆಲ್ಲರೂ ಬೆಂಬಲಿಸಬೇಕಿದೆ.