Advertisement

ವಿಶೇಷ ವರದಿ: ರಸಗೊಬ್ಬರ ಕೊರತೆಯಿಲ್ಲ; ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ

09:57 PM Aug 10, 2020 | mahesh |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೂರಿಯಾ ಸಹಿತ ಅವಶ್ಯ ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದ್ದು, ಸದ್ಯಕ್ಕೆ ಯಾವುದೇ ಕೊರತೆ ಕಂಡುಬಂದಿಲ್ಲ. ಜಿಲ್ಲೆಯ ರೈತರ ಬೇಡಿ ಕೆಗಳಿಗೆ ಪೂರಕವಾಗಿ ರಸಗೊಬ್ಬರ ದಾಸ್ತಾನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೃಷಿ ಇಲಾಖೆ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು, ಅಂತರ್‌ ಜಿಲ್ಲಾ ಮಾರಾಟವನ್ನು ನಿರ್ಬಂಧಿಸಿದೆ.

Advertisement

ಪ್ರಸ್ತುತ ಕೆಲವು ಜಿಲ್ಲೆಗಳಲ್ಲಿ ಯೂರಿಯಾ ಕೊರತೆ ಎದುರಾಗಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೀತಿಯ ಸಮಸ್ಯೆ ಉಂಟಾಗಿಲ್ಲ. ಜಿಲ್ಲೆಯಲ್ಲಿ ಖಾರಿಫ್‌ನಲ್ಲಿ 4082 ಮೆ. ಟನ್‌ ಯೂರಿಯಾ ಆವಶ್ಯಕತೆಯಿದ್ದು, ಈ ವರೆಗೆ 3,558 ಮೆ. ಟನ್‌ ಮಾರಾಟವಾಗಿದೆ. ಪ್ರಸ್ತುತ ಕೆಎಸ್‌ಸಿಎಂಎಫ್‌ ಹಾಗೂ ಮಾರಾಟಗಾರರು ಸಹಿತ ಒಟ್ಟು 3,902 ಮೆ.ಟನ್‌ ಯೂರಿಯಾ ದಾಸ್ತಾನು ಇದೆ.ಜಿಲ್ಲೆಯಲ್ಲಿ ಖಾರಿಫ್‌ನಲ್ಲಿ ಒಟ್ಟು 9,640 ಮೆ. ಟನ್‌ ಕಾಂಪ್ಲೆಕ್ಸ್‌ ರಸಗೊಬ್ಬರಕ್ಕೆ ಬೇಡಿಕೆ ಇರುತ್ತದೆ. ಪ್ರಸ್ತುತ 7,000 ಮೆ.ಟನ್‌ ಮಾರಾಟವಾಗಿದ್ದು, 11,087 ಮೆ. ಟನ್‌ ದಾಸ್ತಾನು ಇದೆ. 1,106 ಮೆ. ಟನ್‌ ಡಿಎಪಿ ಮಾರಾಟವಾಗಿದ್ದು, 833 ಮೆ. ಟನ್‌ ದಾಸ್ತಾನು ಇದೆ. 3,567 ಮೆ. ಟನ್‌ ಎಂಒಪಿ ರಸಗೊಬ್ಬರ ದಾಸ್ತಾನು ಇದ್ದು, 1,108 ಮೆ. ಟನ್‌ ಮಾರಾಟವಾಗಿದೆ.

ಯೂರಿಯಾ ಸಹಿತ ರಸಗೊಬ್ಬರ ರೈತರಿಗೆ ವ್ಯವಸ್ಥಿತವಾಗಿ ದೊರೆಯುವಂತೆ ಇಲಾಖೆ ಕ್ರಮ ಕೈಗೊಂಡಿದೆ. ಮಾರಾಟಗಾರರ ಸಭೆಯನ್ನು ಈಗಾಗಲೇ ನಡೆಸಲಾಗಿದ್ದು, ಜಿಲ್ಲೆಯಿಂದ ಹೊರಗಿನವರಿಗೆ ಯೂರಿಯಾ ಮಾರಾಟ ಮಾಡದಂತೆ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಡಾ| ಸೀತಾ ತಿಳಿಸಿದ್ದಾರೆ. ಯೂರಿಯಾ ಸಹಿತ ರಸಗೊಬ್ಬರ ಕೊರತೆ ಇರುವ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ ಎಂದು ರೈತಸಂಘದ ಮುಖಂಡ ರವಿಕಿರಣ್‌ ಪುಣಚ ತಿಳಿಸಿದ್ದಾರೆ.

ಚಿಕ್ಕಹರಳಿನ ಯೂರಿಯಾಕ್ಕೆ ಬೇಡಿಕೆ
ಯೂರಿಯಾದಲ್ಲಿ ಚಿಕ್ಕ ಹರಳು, ದೊಡ್ಡ ಹರಳು ಎಂಬ ಎರಡು ರೀತಿಯ ರಸಗೊಬ್ಬರ ಇದೆ. ದಪ್ಪ ಹರಳಿನ ಯೂರಿಯಾ ನಿಧಾನವಾಗಿ ಕರಗುತ್ತದೆ. ಚಿಕ್ಕ ಹರಳಿನ ಯೂರಿಯಾ ಬೇಗ ಕರಗುತ್ತದೆ. ಜಿಲ್ಲೆಯಲ್ಲಿ ಚಿಕ್ಕ ಹರಳಿನ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇರುವುದು ಕಂಡುಬಂದಿದೆ. ಆದರೆ ಈ ಎರಡೂ ರೀತಿಯ ಯೂರಿಯಾದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಬೆಳೆಗೆ ಬೇಕಾಗಿರುವ ಪೋಷಕಾಂಶಗಳು ಸಮಾನವಾಗಿರುತ್ತದೆ. ಅದುದರಿಂದ ರೈತರು ಇದರಲ್ಲಿ ಭೇದಭಾವ ಮಾಡದೆ ಎರಡನ್ನೂ ತಮ್ಮ ಆವಶ್ಯಕತೆಗಳಿಗನುಗುಣವಾಗಿ ಬಳಸಬಹುದು ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮಳೆ ಜಾಸ್ತಿ ಇರುವ ಸಂದರ್ಭದಲ್ಲಿ ರಸಗೊಬ್ಬರ ಬಳಕೆ ಮಾಡಬಾರದು. ನೀರಲ್ಲಿ ಕೊಚ್ಚಿಕೊಂಡು ಹೋಗುವ ಸಂಭವ ಇರುತ್ತದೆ. ಆದುದರಿಂದ ಮಳೆ ಕಡಿಮೆಯಾದ ಸಂದರ್ಭ ರಸಗೊಬ್ಬರ ಬಳಕೆ ಮಾಡುವುದು ಸೂಕ್ತ ಎಂದವರು ಸಲಹೆ ಮಾಡಿದ್ದಾರೆ.

ಆತಂಕ ಬೇಡ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೂರಿಯಾ ಸಹಿತ ರಸಗೊಬ್ಬರಗಳು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಿದ್ದು ರೈತರು ಆತಂಕ ಪಡುವ ಆವಶ್ಯಕತೆ ಇಲ್ಲ. ಎಲ್ಲಿಯಾದರೂ ಯೂರಿಯಾ ಕೊರತೆ ತಲೆದೋರಿದಲ್ಲಿ ಸಂಬಂಧಪಟ್ಟ ತಾಲೂಕುಗಳಲ್ಲಿರುವ ಕೃಷಿ ಇಲಾಖಾ ಅಧಿಕಾರಿಗಳನ್ನು ರೈತರು ಸಂಪರ್ಕಿಸಬಹುದು. ಕೂಡಲೇ ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು.
– ಡಾ| ಸೀತಾ, ಜಂಟಿ ಕೃಷಿ ನಿರ್ದೇಶಕರು ದ.ಕ. ಜಿಲ್ಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next