Advertisement

‘ಜನಮಾನಸದಲ್ಲಿ ನೆಲೆ ನಿಂತ ಮೇರುಕಲಾವಿದ ಬಣ್ಣದ ಮಹಾಲಿಂಗ’

03:05 AM Jul 03, 2017 | Karthik A |

ಪುತ್ತೂರು: ಔದಾಸೀನ್ಯ ಇಲ್ಲದ, ವಿನಯತನದ, ಕಲೆಗೆ ಗೌರವ ತಂದುಕೊಟ್ಟ, ಆತ್ಮಾಭಿಮಾನ ಉಳಿಸಿಕೊಂಡು ಜನಮಾನಸದಲ್ಲಿ ಮೆರೆದ ಮೇರು ಕಲಾವಿದ ಬಣ್ಣದ ಮಹಾಲಿಂಗ ಎಂದು ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಬಣ್ಣಿಸಿದ್ದಾರೆ. ಅವರು ರವಿವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ ಯಕ್ಷಗಾನ ಮೇರು ಸಾಧಕ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಪುತ್ತೂರು ಇದರ ಉದ್ಘಾಟನೆ – ಬಣ್ಣದ ಮಹಾಲಿಂಗ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಬಯಲಾಟ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

Advertisement

ಬಣ್ಣದ ಮಹಾಲಿಂಗರ ಜತೆಗಿನ ತಮ್ಮ ನಿಕಟ ಸಂಪರ್ಕದ ನೆನಪುಗಳನ್ನು ಹಂಚಿಕೊಂಡ ಶ್ರೀಗಳು, ಬೆಳಗ್ಗೆ 4 ಗಂಟೆಗೆ ರಂಗ ಪ್ರವೇಶವಾದರೂ ಸಂಜೆ 7 ಗಂಟೆಗೆ ಮುಖವರ್ಣಿಕೆಗೆ ಕುಳಿತುಕೊಳ್ಳುವ ಬದ್ಧತೆ ಮಹಾಲಿಂಗರದ್ದು. ರಾಕ್ಷಸ ವೇಷದಲ್ಲಿ ಕೊನೆಯವರೆಗೂ ಸ್ವರಭಾರವನ್ನು ಉಳಿಸಿಕೊಳ್ಳುತ್ತಿದ್ದ ಏಕೈಕ ಕಲಾವಿದ ಬಣ್ಣದ ಮಹಾಲಿಂಗರು. ಅವರ ಸ್ಮರಣೆಯಲ್ಲಿ ಹುಟ್ಟಿಕೊಂಡ ಪ್ರತಿಷ್ಠಾನ ಉಜ್ವಲವಾಗಿ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಲಾಂಛನ ಅನಾವರಣ
ಲಾಂಛನ ಅನಾವರಣಗೊಳಿಸುವ ಮೂಲಕ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನಕ್ಕೆ ಚಾಲನೆ ನೀಡಿದ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ. ಶ್ಯಾಮ ಭಟ್‌ ಮಾತನಾಡಿ, ಸರಕಾರ ಮೇರು ಯಕ್ಷಗಾನ ಕಲಾವಿದರಿಗೆ ಗೌರವಧನ ನೀಡುವ ಸಂದರ್ಭ ಎಡನೀರು ಶ್ರೀಗಳ ಮೂಲಕ ಸೂಚಿಸಲ್ಪಟ್ಟ ಕಲಾವಿದರಲ್ಲಿ ಮಹಾಲಿಂಗರೂ ಒಬ್ಬರು. ಉಡುಪಿ ಆರ್‌ಆರ್‌ಸಿಯಲ್ಲಿ ಬಣ್ಣದ ಮಹಾಲಿಂಗರ ಪಾತ್ರಗಳ ದಾಖಲೀಕರಣ ಲಭ್ಯವಿದ್ದು, ಪ್ರತಿಷ್ಠಾನ ಅವರನ್ನು ಸಂಪರ್ಕಿಸಬೇಕು ಎಂದರು.

ಪ್ರಶಸ್ತಿ ಪ್ರದಾನ


ಈ ಸಂದರ್ಭ ತೆಂಕುತಿಟ್ಟಿನ ಹಿರಿಯ ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್‌ ಅವರಿಗೆ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಭಿನಂದನ ಭಾಷಣ ಮಾಡಿದ ಯಕ್ಷಗಾನ ಕಲಾವಿದ ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ, ತೆಂಕುತಿಟ್ಟಿನ ಬಣ್ಣದ ವೇಷವನ್ನು ಇತರ ಯಾವ ಪ್ರಾಕಾರಗಳಿಗೂ ಹಿಂದಕ್ಕೆ ಸರಿಸಲು ಸಾಧ್ಯವಾಗಿಲ್ಲ. ಮಕ್ಕಳೂ ಪ್ರೀತಿಸುವ ಹೃದಯ ವೈಶಾಲ್ಯವನ್ನು ಹೊಂದಿರುವ ಬಣ್ಣದ ಮಹಾಲಿಂಗರ ಶಿಷ್ಯ ಶೆಟ್ಟಿಗಾರ್‌ ಅವರಿಗೆ ಪ್ರಶಸ್ತಿ ಸಂದಿರುವುದು ಔಚಿತ್ಯಪೂರ್ಣ ಎಂದರು. ಮುಂದಕ್ಕೂ ಪ್ರಶಸ್ತಿಯನ್ನು ಬಣ್ಣದ ವೇಷಧಾರಿಗಳಿಗೇ ನೀಡಿ ಗೌರವಿಸಲು ವಿನಂತಿಸಿದರು.

ತಿರುವನಂತಪುರ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್‌ ಡಾ| ಎಂ. ರಾಮ ಅಧ್ಯಕ್ಷತೆ ವಹಿಸಿದ್ದರು. ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಪುತ್ತೂರು ಇದರ ಗೌರವಾಧ್ಯಕ್ಷರಾದ ಕೆ.ಸಿ. ಪಾಟಾಳಿ ಪಡುಮಲೆ, ರಾಮ ಮುಗರೋಡಿ, ಮಹಾಲಿಂಗ ಮಂಗಳೂರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್‌ ಪಂಜತ್ತೂಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನಾರಾಯಣ ದೇಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಶಾಸಕಿ ಶಕುಂತಳಾ ಟಿ. ಶೆಟ್ಟಿ ಕಾರ್ಯಕ್ರಮದ ಆರಂಭದಲ್ಲಿ ಭೇಟಿ ನೀಡಿದರು.

Advertisement

ಯಕ್ಷಗಾನ ಬಯಲಾಟ
ಸಭಾ ಕಾರ್ಯಕ್ರಮದ ಬಳಿಕ ವೀರ ಅಭಿಮನ್ಯು – ದುಶ್ಯಾಸನ ವಧೆ – ಗದಾಯುದ್ಧ ಪ್ರಸಂಗಗಳ ಯಕ್ಷಗಾನ ಬಯಲಾಟವು ಪ್ರಸಿದ್ಧ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಿತು. ವಿಶೇಷ ಆಕರ್ಷಣೆಯಾಗಿ ತೆಂಕುತಿಟ್ಟಿನ ಪರಂಪರೆಯ ಹರಿಕಾರರಾದ ಮೂವರು ಹಿರಿಯ ಭಾಗವತರಿಂದ ಪರಂಪರೆಯ ಅನಾವರಣ, ಬಣ್ಣದ ಮಹಾಲಿಂಗರ ಶಿಷ್ಯ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್‌ ಅವರ ಅದ್ಭುತ ರುದ್ರಭೀಮ, ಬಣ್ಣದ ಮಹಾಲಿಂಗರ ಸುಪುತ್ರ ಬಣ್ಣದ ಸುಬ್ರಾಯ ಸಂಪಾಜೆಯವರ ನೇತೃತ್ವದಲ್ಲಿ ತೆಂಕುತಿಟ್ಟಿನ ಏಳು ಜನ ಸುಪ್ರಸಿದ್ಧ ಬಣ್ಣದ ವೇಷಗಾರರಿಂದ ಪರಂಪರೆಯ ಸಂಶಪ್ತಕರು ನಡೆಯಿತು.

ದಾಖಲೆಗಳ ಕೊರತೆ
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪ್ರಾಂಶುಪಾಲ ಡಾ| ಪ್ರಭಾಕರ ಶಿಶಿಲ ಮಾತನಾಡಿ, ಬಣ್ಣದ ಮಹಾಲಿಂಗರು 7ನೇ ಕಟ್ಟಾ ವೇಷಧಾರಿಯಾಗಿ ಬೆಳೆದು ಬಣ್ಣಗಾರಿಕೆಯಲ್ಲಿ ಅನೇಕ ಆವಿಷ್ಕಾರಗಳನ್ನು ಮಾಡಿದ ಅಪ್ರತಿಮ ಕಲಾವಿದರು ಎಂದರು. ದಾಖಲೆಗಳು ಇಲ್ಲದಿರುವುದು ಯಕ್ಷಗಾನ ಕಲಾವಿದರ ದೊಡ್ಡ ಕೊರತೆ ಎಂದು ಅಭಿಪ್ರಾಯಿಸಿದ ಅವರು, ಬಣ್ಣದ ಮಹಾಲಿಂಗರ ಕುರಿತಂತೆ ರಚಿತವಾಗಿರುವ ‘ಬಣ್ಣ’ ಪುಸ್ತಕದ ಮರು ಮುದ್ರಣದ ನಿಟ್ಟಿನಲ್ಲಿ ಪ್ರತಿಷ್ಠಾನ ಮುಂದಾಗಬೇಕೆದರು.

ವಿಶೇಷ ಆಕರ್ಷಣೆ
ವಿಶೇಷ ಆಕರ್ಷಣೆಯಾಗಿ ತೆಂಕುತಿಟ್ಟಿನ ಪರಂಪರೆಯ ಹರಿಕಾರರಾದ ಮೂವರು ಹಿರಿಯ ಭಾಗವತರಿಂದ ಪರಂಪರೆಯ ಅನಾವರಣ, ಬಣ್ಣದ ಮಹಾಲಿಂಗರ ಶಿಷ್ಯ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್‌ ಅವರ ಅದ್ಭುತ ರುದ್ರಭೀಮ, ಬಣ್ಣದ ಮಹಾಲಿಂಗರ ಸುಪುತ್ರ ಬಣ್ಣದ ಸುಬ್ರಾಯ ಸಂಪಾಜೆಯವರ ನೇತೃತ್ವದಲ್ಲಿ ತೆಂಕುತಿಟ್ಟಿನ ಏಳು ಜನ ಸುಪ್ರಸಿದ್ಧ ಬಣ್ಣದ ವೇಷಗಾರರಿಂದ ಪರಂಪರೆಯ ಸಂಶಪ್ತಕರು ನಡೆಯಿತು.

ಬದ್ಧತೆ, ಶುದ್ಧತೆ
ಸಂಸ್ಮರಣ ಮಾತುಗಳನ್ನಾಡಿದ ವೈದ್ಯ, ಸಾಹಿತಿ, ಕಲಾವಿದ ಡಾ| ರಮಾನಂದ ಬನಾರಿ, ಬಣ್ಣದ ಮಹಾಲಿಂಗರಲ್ಲಿ ದೈವದತ್ತವಾದ ಪ್ರತಿಭೆ ಇತ್ತು. ಯಕ್ಷಗಾನ ಕಸುಬುದಾರಿಕೆ ಅವರಿಗೆ ಕರಗತವಾಗಿತ್ತು. ಸಿದ್ಧತೆಯ ಬದ್ಧತೆ ಮತ್ತು ಶುದ್ಧತೆಯ ಕಾರಣದಿಂದ ಅವರು ಅದ್ಭುತ ಬಣ್ಣದ ವೇಷಧಾರಿಯಾಗಲು ಕಾರಣವಾಗಿತ್ತು ಎಂದು ಅಭಿಪ್ರಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next