Advertisement

‘ಆಟಿದ ಸಂಪು, ನೆಂಪು’ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿ ಅನಾವರಣ

01:20 AM Aug 10, 2018 | Karthik A |

ಮಂಗಳೂರು: ಜಿಲ್ಲಾ ಪಂಚಾಯತ್‌ ನಲ್ಲಿ ಗುರುವಾರ ತುಳುನಾಡಿನ ಸಂಸ್ಕೃತಿ ಮೇಳೈ ಸಿತ್ತು. ಎಲ್ಲರೂ ಹೊಸ ಹೊಸ ಬಟ್ಟೆ ಧರಿಸಿ ಕಂಗೊಳಿಸುತ್ತಿದ್ದರು. ತುಳುನಾಡಿನ ಆಹಾರ, ಆಚಾರ, ವಿಚಾರಗಳನ್ನು ಅನಾವರಣವಾಗಿತ್ತು. ತುಳು ಸಂಸ್ಕೃತಿಯನ್ನು ಬಿಂಬಿಸುವ ಕ್ರೀಡೆ ಹಾಗೂ ಮನೋರಂಜನ ಕಾರ್ಯಕ್ರಮಗಳಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷ. ಹೌದು… ಜಿಲ್ಲಾ ಪಂಚಾಯತ್‌ ವತಿಯಿಂದ ಇದೇ ಮೊದಲ ಬಾರಿಗೆ ನಗರದ ಜಿಲ್ಲಾ ಪಂಚಾಯತ್‌ ಆವರಣದಲ್ಲಿ ಆಯೋಜಿಸಿದ ‘ಆಟಿದ ಸಂಪು, ನೆಂಪು’ ಎಂಬ ಕಾರ್ಯಕ್ರದಲ್ಲಿ ಕಂಡುಬಂದ ದೃಶ್ಯವಿದು. ಸಿಬಂದಿ, ಸದಸ್ಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಜಿಲ್ಲಾ ಪಂಚಾಯತ್‌ ಸದಸ್ಯರು ಮತ್ತು ಸಿಬಂದಿಗೆಂದೇ  ಆಯೋಜಿಸಲಾಗಿದ್ದ ಕ್ರೀಡಾಕೂಡದಲ್ಲಿ ಹಗ್ಗಜಗ್ಗಾಟ ಏರ್ಪಡಿಸಲಾಗಿತ್ತು. ಪುರುಷರು ಮತ್ತು ಮಹಿಳೆಯರು ಪಾಲ್ಗೊಂಡರು.

Advertisement

ಅದೇ ರೀತಿ ಚೆನ್ನೆಮಣೆ ಆಟದಲ್ಲಿಯೂ ಉತ್ಸಾಹದಿಂದ ಭಾಗವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೋಲಾಟ, ಜಾನಪದ ನೃತ್ಯ, ಯಕ್ಷಗಾನ ನೃತ್ಯ, ತುಳು ಗೀತೆ, ತುಳು ಕವನ ವಾಚನ, ಮಹಿಷಮರ್ದಿನಿ ತುಳು ರೂಪಕ, ತುಳು ಹಾಸ್ಯ ಪ್ರಹಸನ, ತುಳು ಚಿತ್ರಗೀತೆ, ಗೊಂಬೆಯಾಟ ಸೇರಿದಂತೆ ತುಳು ನಾಡಿನ ಸಾಂಸ್ಕೃತಿಕ ಕಲೆಗಳ ಪರಿಚಯ ಮಾಡಿಕೊಡಲಾಯಿತು. ಆಗಮಿಸಿದ ಮಂದಿಗೆ ಸದಸ್ಯರು ಕರಿಮೆಣಸಿನ ಕಷಾಯ, ಬೆಲ್ಲ-ನೀರು ನೀಡಿ ಸತ್ಕರಿಸಿದರು.


ಕರಾವಳಿ ಸಂಸ್ಕೃತಿ ಮತ್ತಷ್ಟು ಪಸರಿಸಲಿ: ವೇದವ್ಯಾಸ ಕಾಮತ್‌

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಿ. ವೇದವ್ಯಾಸ ಕಾಮತ್‌, ಭಾರತೀಯ ಸಂಸ್ಕಾರ, ಸಂಸ್ಕೃತಿಯನ್ನು ಇಂದಿನ ಯುವಜನತೆಗೆ ತಿಳಿಯಪಡಿಸುವ ಅಗತ್ಯವಿದೆ. ತುಳುನಾಡಿನ ಸಂಸ್ಕೃತಿ ಮರೆಯಾಗಬಾರದು ಎಂಬ ಉದ್ದೇಶದಿಂದ ಆಟಿ ದಿನವನ್ನು ಆಚರಿಸಲಾಗುತ್ತಿದೆ. ಮಳೆಗಾ ಲದ ಸಮಯದಲ್ಲಿ ಗದ್ದೆಯಲ್ಲಿ ಕೆಲಸಕ್ಕೆ ಹೋಗಲಾಗದ ವೇಳೆ ಈ ಹಿಂದೆ ಆಟಿ ಹಬ್ಬವನ್ನು ಆಚರಣೆ ಮಾಡುತ್ತಿದ್ದರು. ರೋಗ ರುಜಿನಗಳಿಗೆ ಆಟಿ ಕಷಾಯ, ತಿನಿಸುಗಳು ಮದ್ದು ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಮಾತನಾಡಿ, ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡುವುದರಿಂದ ನಮ್ಮ ಸಂಸ್ಕೃತಿಯ ಪರಿಚಯ ಮಾಡಿದಂತಾಗುತ್ತದೆ. ಭೌಗೋಳಿಕವಾಗಿ ಬದಲಾವಣೆಯಾಗುತ್ತಿರುವ ಈ ಸಮಯದಲ್ಲಿ ನಮ್ಮ ಸಂಸ್ಕೃತಿಯನ್ನು ನೆನಪು ಮಾಡುವ ಅಗತ್ಯವಿದೆ ಎಂದರು. ಶಾಸಕ ಡಾ| ವೈ. ಭರತ್‌ ಶೆಟ್ಟಿ, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ| ರವಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜನಾರ್ದನ ಗೌಡ, ಇಬ್ರಾಹಿಂ, ಅನಿತಾ ಹೇಮನಾಥ ಶೆಟ್ಟಿ ಮೊದಲಾದವರಿದ್ದರು.

ವಸ್ತು ಪ್ರದರ್ಶನ
ಕರಾವಳಿ ಪ್ರದೇಶದಲ್ಲಿ ಈ ಹಿಂದೆ ಬಳಕೆ ಮಾಡುತ್ತಿದ್ದಂತಹ ಅಪರೂಪದ ವಸ್ತುಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಅದ ರಲ್ಲಿಯೂ ದೈವದ ಗಗ್ಗರ, ಶ್ಯಾವಿಗೆ ಮಣೆ, ಚೆನ್ನೆಮಣೆ, ಹಳೆ ಕಾಲದ ರೇಡಿಯೋ, ಮರದ ಹರಿವಾಣ, ಉಜ್ಜೆಲ್‌, ಪುಂಡಿದ ಬಂದ, ತೊಟ್ಟಿಲು, ಕಡ್ತಲೆ, ದೈವದ ಕಡ್ತಲೆ, ಮಂತ್‌, ಕುಡುಪು, ನೇಗಿಲು, ಮರಯಿ, ಸೇರು, ಟೇಪು ರೆಕಾರ್ಡ್‌, ಹೂಜಿ ಮತ್ತಿತರ ಪರಿಕರಗಳು ಪ್ರದರ್ಶನಕ್ಕಿದ್ದವು. ನೂರಾರು ಮಂದಿ ಹಳೆ ಕಾಲದ ವಸ್ತುಗಳನ್ನು ಕಣ್ತುಂಬಿಕೊಂಡರು.

Advertisement

101 ಬಗೆಯ ತಿನಿಸು
ಆಟಿದ ಸಂಪು, ನೆಂಪು ಕಾರ್ಯಕ್ರಮದಲ್ಲಿ ಜಿ.ಪಂ. ಸಿಬಂದಿ ಮತ್ತು ಸದಸ್ಯರು ತಮ್ಮ ತಮ್ಮ ಮನೆಗಳಿಂದ ವಿವಿಧ ಬಗೆಯ ತಿನಿಸುಗಳನ್ನು ಮಾಡಿ ತಂದಿದ್ದರು. ಅದರಲ್ಲಿಯೂ, ಶ್ಯಾವಿಗೆ-ಕಾಯಿಹಾಲು, ಅರ್ತಿ ಕಾಯಿ ಚಟ್ನಿ, ಹಲಸಿನ ಅಪ್ಪ, ಮಾವಿನ ಕಾಯಿ ಚಟ್ನಿ,ತಂಜಕ್‌, ಚಗಟೆ ಸೊಪ್ಪಿನ ಪಲ್ಯ, ಹಲಸಿನ ಗಟ್ಟಿ, ಗುಳಿಅಪ್ಪ, ಕಂಚಲ ಪುಳಿಮುಂಚಿ, ಹೆಸರುಕಾಳು ಅಣಬೆ ಗಸಿ, ರೊಟ್ಟಿ, ಮೂಡೆ, ಅಕ್ಕಿ ಉಂಡೆ, ಪಾಯಸ, ಮೆಂತೆ ಗಂಜಿ, ಚೇವು ಗಸಿ, ಗುಜ್ಜೆ ಗಸಿ, ಪತ್ರೊಡೆ ಸೇರಿದಂತೆ 101 ಬಗೆಯ ತಿನಿಸುಗಳು ಬಾಯಿ ನೀರೂರಿಸುತ್ತಿದ್ದವು.

ಸಂಸ್ಕೃತಿ ಅರಿವು
ಈ ಕಾರ್ಯಕ್ರಮದ ಮೂಲಕ ಯುವಜನತೆ‌ಗೆ ಆಟಿಯ ಮಹತ್ವ ತಿಳಿಸುವ ಉದ್ದೇಶವಿತ್ತು. ಜಿ.ಪಂ. ಕಚೇರಿಯಲ್ಲಿಯೇ ಅನೇಕ ಮಂದಿ ಕರಾವಳಿಯೇತರರು ಇದ್ದು, ಅವರಿಗೆ ಈ ಕಾರ್ಯಕ್ರಮದ ಮೂಲಕ ತುಳುನಾಡಿನ ಸಂಸ್ಕೃತಿ ತಿಳಿದಂತಾಯಿತು.
– ಫ್ರಾಂಕಿ ಕುಟಿನ್ಹೊ, ಗ್ರೂಪ್‌ ಡಿ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next