Advertisement

ಮತದಾರರ ಜಾಗೃತಿಗೆ ವಿಶೇಷ ಅಂಚೆ ಲಕೋಟೆ, ಚೀಟಿ

03:31 AM Apr 14, 2019 | Lakshmi GovindaRaju |

ಬೆಂಗಳೂರು: ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಚುನಾವಣಾ ಆಯೋಗವು ಅಂಚೆ ಇಲಾಖೆಯ ಸಹಯೋಗದೊಂದಿಗೆ ವಿಶೇಷ ಅಂಚೆ ಲಕೋಟೆ ಹಾಗೂ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದೆ.

Advertisement

ವಾರ್ತಾ ಸೌಧದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಹಾಗೂ ಕರ್ನಾಟಕದ ಚೀಫ್ ಪೋಸ್ಟ್‌ ಮಾಸ್ಟರ್‌ ಜನರಲ್‌ ಚಾರ್ಲ್ಸ್‌ ಲೋಬೋ ಜಂಟಿಯಾಗಿ ಈ ವಿಶೇಷ ಅಂಚೆ ಚೀಟಿ ಹಾಗೂ ಲಕೋಟೆಯನ್ನು ಬಿಡುಗಡೆಗೊಳಿಸಿದರು.

ಈ ವಿಶೇಷ ಲಕೋಟೆಗಳನ್ನು 2019ರ ಲೋಕಸಭಾ ಚುನಾವಣೆಯ ಲಾಂಛನ ಹಾಗೂ “ದೇಶದ ಮಹಾ ಉತ್ಸವ’ ಶೀರ್ಷಿಕೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇವುಗಳನ್ನು ಮತದಾರರಿಗೆ ಇವಿಎಂ ಮತ್ತು ವಿವಿಪ್ಯಾಟ್‌ಗಳ ಕುರಿತು ಮಾಹಿತಿ ನೀಡುವಂತೆ ರಚಿಸಲಾಗಿದೆ.

ಮತದಾರರು ಹೇಗೆ ಮತ ಚಲಾಯಿಸಬೇಕು ಎಂಬ ವಿವರಗಳು ಅಂಚೆ ಲಕೋಟೆ ಮೇಲಿದೆ. ಮತದಾನದ ವಿವಿಧ ಪ್ರಕ್ರಿಯೆಗಳು ಸೇರಿದಂತೆ ಇವಿಎಂ ಮತ್ತು ವಿವಿಪ್ಯಾಟ್‌ ಮೂಲಕ ಮತ ಚಲಾವಣೆ ವಿಧಾನದ ಕುರಿತ ಸಚಿತ್ರ ವಿವರಗಳನ್ನು ಮುದ್ರಿಸಲಾಗಿದೆ.

ವಿಶೇಷ ಲಕೋಟೆಯು ವಿಕಲಚೇತನ ಮತದಾರರಿಗೆ ಚುನಾವಣಾ ಆಯೋಗ ಮತದಾನದ ದಿನ ಒದಗಿಸಿರುವ ಸೌಲಭ್ಯಗಳ ಕರಿತು ಮಾಹಿತಿ ನೀಡಲಾಗಿದೆ. ಇದೇ ವೇಳೆ ಮತದಾರರಲ್ಲಿ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ನಿರ್ಮಿಸಿರುವ ವಿಡಿಯೋ ಸಹ ಬಿಡುಗಡೆಗೊಳಿಸಲಾಯಿತು.

Advertisement

ಜೊತೆಗೆ ಕನ್ನಡ ಚಿತ್ರರಂಗದ ನಿರ್ದೇಶಕ ಶ್ರೀ ಭಗವಾನ್‌ ಅವರು ಮತದಾನದ ಜಾಗೃತಿ ಬಗ್ಗೆ ರಚಿಸಿರುವ ಕಿರುಚಿತ್ರಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಜೊತೆಗೆ ದೃಷ್ಠಿದೋಷ ಮತದಾರರಲ್ಲಿ ಜಾಗೃತಿ ಮೂಡಿಸಲು ಬ್ರೈಲ್‌ ಲಿಪಿಯ ಅಂಚೆ ಕಾರ್ಡ್‌ಗಳನ್ನು ಬಿಡುಗಡೆಗೊಳಿಸಿ ಚೀಫ್ ಪೋಸ್ಟ್‌ಮಾಸ್ಟರ್‌ ಜನರಲ್‌ ಅವರಿಗೆ ಹಸ್ತಾಂತರಿಸಲಾಯಿತು.

ಅಂಚೆ ಇಲಾಖೆ “ವಿಶೇಷ ಸೇವೆ’: ಮತದಾರರಲ್ಲಿ ಜಾಗೃತಿ ಮೂಡಿಸಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಕೈಗೊಳ್ಳುತ್ತಿರುವ ವಿಶೇಷ ಪ್ರಯತ್ನಗಳಿಗೆ ಅಂಚೆ ಇಲಾಖೆ ಸಾಥ್‌ ನೀಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕದ ಚೀಫ್ ಪೋಸ್ಟ್‌ಮಾಸ್ಟರ್‌ ಜನರಲ್‌ ಚಾರ್ಲ್ಸ್‌ ಲೋಬೋ, ಮುಖ್ಯವಾಗಿ ಸೇವಾ ಮತದಾರರಿಗೆ ಸೌಲಭ್ಯ ಒದಗಿಸಲು ಚನಾವಣಾ ಆಯೋಗದ ಜೊತೆಗೆ ಅಂಚೆ ಇಲಾಖೆ ಕೈಜೋಡಿಸಿದೆ ಎಂದರು.

ದೇಶದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೇವಾ ಮತದಾರರಿಗೆ ಎಲೆಕ್ಟ್ರಾನಿಕ್‌ ಬ್ಯಾಲೆಟ್‌ಗಳನ್ನು ಪೂರೈಸಲು ಅಂಚೆ ಇಲಾಖೆ ವಿಶೇಷ ಪ್ರಯತ್ನ ಮಾಡಿದೆ. ಸಿಆರ್‌ಪಿಎಫ್, ಸಿಐಎಸ್‌ಎಫ್ ಸಿಬ್ಬಂದಿ ನಿಯೋಜನೆಗೊಂಡಿರುವ ವಿಮಾನ ನಿಲ್ದಾಣ ಮತ್ತಿತರ ಕಡೆ ಅಂಚೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತೆರಳಿ ಅವರಿಗೆ ಎಲೆಕ್ಟ್ರಾನಿಕ್‌ ಬ್ಯಾಲೆಟ್‌ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ.

ಅದರಂತೆ ಏ.11 ಮತ್ತು 12ರಂದು ಸುಮಾರು 525 ಮಂದಿ ಸೇವಾ ಮತದಾರರು ಮತ್ತು ಏ.13ರಂದು ಸಾವಿರಕ್ಕೂ ಹೆಚ್ಚು ಸೇವಾ ಮತದಾರರು ನೋಂದಾಯಿಸಿಕೊಂಡಿದ್ದಾರೆ. ಇವರು ರವಾನಿಸುವ ಎಲೆಕ್ಟ್ರಾನಿಕ್‌ ಅಂಚೆ ಮತಪತ್ರಗಳಿಗೆ ಅಂಚೆ ಶುಲ್ಕದ ವಿನಾಯಿತಿ ನೀಡಲಾಗಿದೆ ಎಂದರು.

ಅದೇ ರೀತಿ ಅಂಚೆ ಕಚೇರಿಗಳಲ್ಲಿರುವ “ಕ್ಲಿಯರೆನ್ಸ್‌ ಫ್ರಾಂಕಿಂಗ್‌ ಮಷೀನ್‌’ಗಳಲ್ಲಿ ಮತದಾನದ ದಿನದವರೆಗೆ “ಯಾವೊಬ್ಬ ಮತದಾರ ಮತದಾನದಿಂದ ದೂರ ಉಳಿಯಬಾರದು’ ಎಂಬ ಸಂದೇಶ ಅಳವಡಿಸಲಾಗುವುದು ಎಂದು ಲೋಬೋ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next