ಮುಂಡರಗಿ: ತಾಲೂಕಿನ ವಿಠಲಾಪೂರ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಪರೂಪದ ಪಂಚಲೋಹದ ರಸಲಿಂಗ(ಶಿವಲಿಂಗ)ಇದ್ದು, ಮಹಾಶಿವರಾತ್ರಿಯಂದು ವಿಶೇಷವಾಗಿ ರಸಲಿಂಗ ಪೂಜೆ ನಡೆಯುತ್ತದೆ. ಶಿವರಾತ್ರಿ ದಿನ ರಸಲಿಂಗವನ್ನು ತೊಳೆದು ಸಕಲ ಹೂಗಳು, ಬಿಲ್ವಪತ್ರಿಗಳಿಂದ ಮಹಾಪುರುಷರ ಕುಟುಂಬದವರು ಪೂಜೆ ನೆರವೇರಿಸುತ್ತಾರೆ. ದಕ್ಷಿಣ ಭಾರತದಲ್ಲಿಯೇ ವಿಶೇಷವಾಗಿರುವ ರಸಲಿಂಗ ಹಲವು ಕುತೂಹಲಕರ ಸಂಗತಿಗಳಿಂದ ಒಡಗೂಡಿದೆ. ರಸಶಾಸ್ತ್ರ ಅಧ್ಯಯನ ಮಾಡಿದ್ದ ಯೋಗಗುರುಗಳು ರಸಲಿಂಗವನ್ನು ರಚನೆ ಮಾಡಿದ್ದರು ಎನ್ನುವ ಮಾತು ಜನಜನಿತವಾಗಿದೆ. ವಿಠಲಾಪೂರದ ಮಹಾಪುರುಷರ ಕುಟುಂಬದ ಮೂಲ ಪುರುಷರಾದ ಬಿಷ್ಟಪ್ಪಯ್ಯ ಅವರೇ ರಸಲಿಂಗ ರಚನೆ ಮಾಡಿರುವ ಐತಿಹ್ಯವಿದೆ.
ರಸಲಿಂಗ ರಚನೆ:
ವಿಜಯನಗರ ಆಳ್ವಿಕೆಯ ಸಂದರ್ಭದಲ್ಲಿ ಹದಿನಾರನೇ ಶತಮಾನದ ಪೂರ್ವಾರ್ಧ ಕಾಲಘಟ್ಟದಲ್ಲಿ (1608-1698) ಇದ್ದ ಬಿಷ್ಟಪ್ಪಯ್ಯ ಮಹಾಪುರುಷರು ವಿಠಲಾಪೂರದಲ್ಲಿ ನೆಲೆ ನಿಂತು ಯೋಗ, ರಸಶಾಸ್ತ್ರ, ಲೋಹಶಾಸ್ತ್ರ, ಖಗೋಲಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಆಗಮಶಾಸ್ತ್ರ ವಿದ್ಯೆಯನ್ನು ಪಾರಂಗತ ಮಾಡಿಕೊಂಡಿದ್ದರು. ಯೋಗ ಮತ್ತು ರಸಶಾಸ್ತ್ರ ವಿದ್ಯೆಯ ಮೂಲಕ ಪಂಚಲೋಹದಿಂದ ಕೂಡಿದ ರಸಲಿಂಗ ರಚಿಸಿದರು. ಎರಡರಿಂದ ಮೂರು ಅಡಿ ಎತ್ತರ ಇರುವ ಪಂಚಲೋಹದ ರಸಲಿಂಗದ ಟೊಳ್ಳಾಗಿರುವ ಒಳಭಾಗದಲ್ಲಿ ಪಾದರಸ ತುಂಬಲಾಗಿದೆ. ರಸಲಿಂಗ ಮೂವತ್ತು ಕೆಜಿಗಳಷ್ಟು ಭಾರವಿದೆ.
ಕನಿಷ್ಟ ನಾಲ್ಕು ಶತಮಾನಗಳಷ್ಟು ಪುರಾತನ ರಸಲಿಂಗ ಸೂರ್ಯ ಕಿರಣಗಳ ಏರಿಳಿತಕ್ಕೆ ಅನುಗುಣವಾಗಿ ಮುಂಜಾನೆ ಕೆಂಪು ಬಣ್ಣದಲ್ಲಿ, ಮಧ್ಯಾಹ್ನ ಹಳದಿ ಬಣ್ಣದಲ್ಲಿ, ಸಂಜೆ ಹೊತ್ತು ಬಂಗಾರ ಬಣ್ಣದ ರೂಪದಲ್ಲಿ ಕಾಣುತ್ತದೆ. ಈ ರಸಲಿಂಗದಿಂದ ಪಾದರಸ ತಾಪಮಾನವು ಏರಿಳಿತ ಉಂಟಾದಾಗ ಪಾದರಸ ಹೊರಬರುತ್ತದೆ. ಈ ಪಾದರಸವನ್ನು ಸಂಗ್ರಹಿಸಿ ಮಹಾಪುರುಷ ಕುಟುಂಬದವರು ಇಟ್ಟಿದ್ದಾರೆ.
ಈ ಪಾದರಸ ಆಯುರ್ವೇದಿಕ್ ಔಷಧಗಳಲ್ಲಿ ವಿಶೇಷವಾಗಿ ಬಳಕೆ ಮಾಡಲಾಗುತ್ತದೆ. ಮುಂಡರಗಿ-ಹೂವಿನಹಡಗಲಿ ಭಾಗದಲ್ಲಿ ಬಿಷ್ಟಪ್ಪಯ್ಯನವರು ಯೋಗ ಮತ್ತು ರಸಶಾಸ್ತ್ರವನ್ನು ಉಪಯೋಗಿಸಿಕೊಂಡು ಸತ್ಕಾರ್ಯ, ಧರ್ಮದ ದಾರಿಯಲ್ಲಿ ಸೇವೆ ಮಾಡಿರುವುದು ತಿಳಿದು ಬರುತ್ತದೆ. ಮಹಾಶಿವರಾತ್ರಿಯಂದು ತಾಲೂಕಿನ ಡಂಬಳದ ದೊಡ್ಡಬಸವೇಶ್ವರ, ಗುಮ್ಮಗೋಳದ ಗೋಣಿಬಸವೇಶ್ವರ ದೇವಸ್ಥಾನದಲ್ಲಿರುವ ಶಿವಲಿಂಗಳು, ಮೇವುಂಡಿಯ ಶಿವಲಿಂಗಗಳು, ಪೇಠಾಲೂರಿನ ನಾಗನಾಥೇಶ್ವರದ ಶಿವಲಿಂಗ, ಡೋಣಿ ಗ್ರಾಮದ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರು ಪೂಜೆ ನೆರವೇರಿಸುತ್ತಾರೆ.
ರಸಲಿಂಗದಿಂದ ಹೊರಬಂದಿರುವ ಪಾದರಸವನ್ನು ಮಹಾಪುರುಷ ಕುಟುಂಬದವರು ಸಂಗ್ರಹಿಸಿಟ್ಟಿದ್ದಾರೆ. ಹೊರಸೂಸಿರುವ ಈ ಪಾದರಸವನ್ನು ವಿಶೇಷವಾಗಿ ಆಯುರ್ವೇದಿಕ್ ಔಷಧಗಳಲ್ಲಿ ಬಳಕೆ ಮಾಡಲಾಗುತ್ತದೆ. ಪ್ರತಿದಿನ ಜಲಾಭಿಷೇಕ ಮಾಡಿದಾಗ ದೊರಕುವ ಜಲಾಮೃತ ಸರ್ವರೋಗಗಳಿಗೆ ದಿವ್ಯ ಔಷಧವಾಗಿದೆ.
ಸುನೀಲ್ ಮಹಾಪುರುಷ, ಬಿಷ್ಟಪ್ಪಯ್ಯನವರ ವಂಶಸ್ಥರು
ಮಹಾಯೋಗಿ, ರಸಶಾಸ್ತ್ರಜ್ಞ ಬಿಷ್ಟಪ್ಪಯ್ಯನವರು (1608-1698) ರಸಲಿಂಗ ರಚನೆ ಮಾಡಿದ್ದು, ಬಿಷ್ಟಪ್ಪಯ್ಯ ಮಹಾಪುರುಷರಿಗೂ ವಿಜಯನಗರ ಸಾಮ್ಯಾಜ್ಯಕ್ಕೂ ನಂಟಿತ್ತು. ಹಂಪಿಯ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನದ ಮುಂದಿರುವ ಗೋಪುರವನ್ನು 1660-1694) ಅವಧಿಯಲ್ಲಿ ಬಿಷ್ಟಪ್ಪಯ್ಯನವರೇ ಕಟ್ಟಿಸಿದ್ದಾರೆ. ಇದು ಗೋಪುರದ ಮೇಲಿರುವ ಗೋಪುರದಮ್ಮ ಶಿಲ್ಪದಿಂದ ವೇದ್ಯವಾಗುತ್ತದೆ.
ವಸುಂಧರಾ ದೇಸಾಯಿ, ಸಂಶೋಧಕ
~ಹು.ಬಾ. ವಡ್ಡಟ್ಟಿ
ಇದನ್ನೂ ಓದಿ:ಇಶಾ ಪೌಂಡೇಷನ್‌ಗೆ ಇಂದು ರಾಷ್ಟ್ರಪತಿ ಪ್ರವಾಸ; ಬಿಗಿ ಭದ್ರತೆ ನಿಯೋಜನೆ