Advertisement

ಚೌತಿಯ ಮರುದಿವಸ ಇವರೆಲ್ಲಾ ಮೂಷಿಕ ಪೂಜೆ ನಡೆಸುವುದೇಕೆ ಗೊತ್ತೇ?

09:42 AM Sep 04, 2019 | mahesh |

ಕೊಪ್ಪಳ: ದೇಶದೆಲ್ಲೆಡೆ ಚೌತಿಯಂದು ಗಣೇಶನಿಗೆ ವಿಶೇಷ ಪೂಜೆ ಮಾಡುವುದು ಸಂಪ್ರದಾಯ. ಆದರೆ ಇಲ್ಲೊಂದು ಪಟ್ಟಣದಲ್ಲಿ ಗಣೇಶನ ವಾಹನವಾದ ಮೂಷಿಕನಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಭಾವದಿಂದ ಬೇಡಿಕೊಳ್ಳುವ ಸಂಪ್ರದಾಯ ಪೂರ್ವಜರಿಂದ ನಡೆದು ಬಂದಿದೆ.

Advertisement

ಹೌದು.. ನಗರ ಸಮೀಪದ ಭಾಗ್ಯನಗರದಲ್ಲಿ ಗಣೇಶ ಚತುರ್ಥಿ ಮರು ದಿನ ಇಲಿಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಈ ಪಟ್ಟಣದಲ್ಲಿ ಬಟ್ಟೆ ತಯಾರುವ ಮಾಡುವ ವಿವಿಧ ಬಗೆಯ ಮಗ್ಗಗಳಿವೆ. ಈ ವೇಳೆ ಇಲಿಗಳು ನಮ್ಮ ಮಗ್ಗಗಳಲ್ಲಿ ದಾರಗಳನ್ನು ಕಡಿಯದಿರಲಿ. ನಮ್ಮ ಉದ್ಯಮಕ್ಕೆ ಯಾವುದೇ ಕುತ್ತು ಬಾರದಿರಲಿ ಎಂದು ಪೂಜೆ ಮಾಡುವುದು ವಾಡಿಕೆ.

ಭಾಗ್ಯನಗರದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಮಗ್ಗಗಳಿವೆ. ಈ ಮಗ್ಗಳಿಂದಲೇ ಇಲ್ಲಿ ಸಾವಿರಾರು ಕುಟುಂಬಗಳು ಜೀವನೋಪಾಯ ನಡೆಸುತ್ತಿವೆ. ಆಧುನಿಕತೆಯ ಭರಾಟೆಯಲ್ಲೂ ಮಗ್ಗಗಳ ಉಳಿಸಿಕೊಂಡು ಜೀವನಕ್ಕೆ ದಾರಿ ಮಾಡಿಕೊಂಡಿದ್ದಾರೆ. ಈ ಮೊದಲು ಕೈಮಗ್ಗ ಇದ್ದ ಸಂದರ್ಭದಲ್ಲಿ ಪೂರ್ವಜರು ಮನೆಗಳಲ್ಲಿ ಮಗ್ಗಗಳಲ್ಲಿ ಅಳವಡಿಕೆ ಮಾಡುವ ದಾರಗಳನ್ನು ಕಡಿದರೆ ನಮ್ಮ ಜೀವನೋಪಾಯ ನಡೆಯುವುದು ಕಷ್ಟವಾಗಲಿದೆ. ದೇವರು ನಮಗೆ ರಕ್ಷಣೆ ಮಾಡಲಿ. ಗಣೇಶನ ವಾಹನ ನಮಗೆ ಯಾವುದೇ ತೊಂದರೆ ಮಾಡದಿರಲಿ ಎಂದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದರು.

ಅದರಂತೆ, ಮಂಗಳವಾರ ಭಾಗ್ಯನಗರದಲ್ಲಿ ವಿವಿಧ ಮಗ್ಗಗಳಲ್ಲಿ ಕುಟುಂಬಸ್ಥರು ಪೂರ್ವಜರ ಸಂಪ್ರದಾಯ ಮುನ್ನಡೆಸಿದರು. ಚೌತಿ ದಿನದಂದು ಮಗ್ಗದ ಕೊಠಡಿಗಳನ್ನು ಸ್ವಚ್ಛಗೊಳಿಸಿ ಯಂತ್ರಗಳನ್ನು ತೊಳೆದು ಮಣ್ಣಿನಿಂದ ಸಿದ್ದ ಪಡಿಸಿದ ಇಲಿಗಳಿಗೆ ವಿಶೇಷ ಪೂಜೆ ಕಾಯಿ ಕರ್ಪೂರ ಸಮರ್ಪಕಿಸಲಾಯಿತು. ಇಲಿಗಳಿಗೆ ಕರಿಗಡಬು, ಬದ್ನೆಕಾಯಿ ಪಲ್ಲೆ, ಅನ್ನ ಸಾಂಬಾರು ಸೇರಿದಂತೆ ಅವರವರ ಭಕ್ತಿಯ ಅನುಸಾರ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿ ನಮ್ರತೆಯಿಂದ ಬೇಡಿಕೊಂಡರು.

ಭಾವೈಕ್ಯತೆಯ ಸಂಕೇತ :
ವಿಶೇಷವೆಂಬಂತೆ ಇಲ್ಲಿನ ಮುಸ್ಲಿಂ ಕುಟುಂಬವೂ ಮಗ್ಗಗಳನ್ನು ಹೊಂದಿದ್ದು, ಮಹ್ಮದ್‌ಸಾಬ್ ಭೈರಾಪೂರ ಕುಟುಂಬದ ಫಕೀರಸಾಬ, ಪೀರಸಾಬ, ರಾಜಾಸಾಬ ಅವರ ಕುಟುಂಬವು ಕಳೆದ 12 ವರ್ಷಗಳಿಂದ ಮಗ್ಗದ ಉದ್ಯಮ ನಡೆಸಿಕೊಂಡು ಬಂದಿದೆ. ಅವರೂ ಸಹಿತ ಭಾವೈಕ್ಯತೆಯಿಂದ ಮಗ್ಗಗಳಲ್ಲಿ ಇಲಿಗಳಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು. ಪೂಜಾ ವಿಧಾನ, ಆಚರಣೆಯಲ್ಲಿ ಯಾವುದೇ ಬೇಧ, ಭಾವ ತೋರದೆ ಸರ್ವ ಧರ್ಮದಂತೆ ಪೂಜೆ ಸಲ್ಲಿಸಿದರು. ಈ ಕುಟುಂಬವು ದೀಪಾವಳಿ ಸಂದರ್ಭದಲ್ಲೂ ಲಕ್ಷ್ಮೀ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಾರೆ.

Advertisement

ಒಟ್ಟಿನಲ್ಲಿ ದೇಶದೆಲ್ಲೆಡೆ ಗಣೇಶನಿಗೆ ಪೂಜೆ ಸಲ್ಲಿಸಿದರೆ ಬಟ್ಟೆ ತಯಾರಿಸುವ, ನೇಕಾರಿಕೆ ಮಾಡುವ ಕುಟುಂಬಗಳು ಚೌತಿ ಮರುದಿನದಂದು ವಿಘ್ನೇಶ್ವರನ ವಾಹನ ಇಲಿರಾಯನಿಗೆ ಪೂಜೆ ಸಲ್ಲಿಸಿ ರಕ್ಷಣೆ ಹಾಗೂ ಉದ್ಯಮ ಬೆಳೆಸುವಂತೆ ಬೇಡಿಕೊಳ್ಳುವ ಸಂಪ್ರದಾಯ ಬೆಳೆದು ಬಂದಿದೆ.

ಮಗ್ಗಗಳು ಇರುವ ಪ್ರತಿಯೊಂದು ಕುಟುಂಬವು ಗಣೇಶ ಹಬ್ಬದ ಮರು ದಿನ ಮಗ್ಗಗಳಲ್ಲಿ ಇಲಿಗಳಿಗೆ ಪೂಜೆ ಸಲ್ಲಿಸುವುದು ಈ ಹಿಂದಿನಿಂದಲೂ ನಡೆದು ಸಂಪ್ರದಾಯವಾಗಿದೆ. ನಾವು ಸಹಿತ ಇಲಿಗಳಿಗೆ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದೆವು. ನಮ್ಮ ಮಗ್ಗಗಳಲ್ಲಿ ಇಲಿಗಳು ದಾರ ಕಡಿದು ತೊಂದರೆ ಮಾಡದಿರಲಿ ಎಂದು ಬೇಡಿಕೊಂಡೆವು.
ಹೊನ್ನೂರಸಾಬ ಭೈರಾಪೂರ, ಮಗ್ಗದ ಮುಖ್ಯಸ್ಥ.

Advertisement

Udayavani is now on Telegram. Click here to join our channel and stay updated with the latest news.

Next