ಶಿವಮೊಗ್ಗ: ಅತಿವೃಷ್ಟಿ ಹಾಗೂ ಪ್ರವಾಹದಿಂದ ರಾಜ್ಯ ದಲ್ಲಿ ಅಪಾರ ಹಾನಿಯಾಗಿದ್ದು, ಒಂದು ವಾರದೊಳಗೆ ವಿಶೇಷ ಪ್ಯಾಕೇಜ್ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಶಿವಮೊಗ್ಗ, ಸೊರಬ, ತೀರ್ಥಹಳ್ಳಿ, ಶಿಕಾರಿಪುರ, ಸಾಗರದ ವಿವಿಧೆಡೆ ಮಂಗಳವಾರ ಭೇಟಿ ನೀಡಿ ಪ್ರವಾಹದಿಂದ ಆಗಿರುವ ಹಾನಿ ಪರಿಶೀಲಿಸಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಬಳಿಕ, ಸುದ್ದಿಗಾರರ ಜತೆ ಮಾತನಾಡಿ, ಪ್ರವಾಹದಿಂದ ಉಂಟಾಗಿರುವ ನಷ್ಟದ ಬಗ್ಗೆ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿಗೂ ಸದ್ಯದಲ್ಲಿಯೇ ವಿಶೇಷ ಪ್ಯಾಕೇಜ್ ಘೋಷಿಸಲಾಗುವುದು ಎಂದರು.
ರಾಜ್ಯದಲ್ಲಿ ಪ್ರವಾಹದಿಂದ ಸಂತ್ರಸ್ತರಾಗಿರುವ ಸುಮಾರು 40 ಸಾವಿರ ಕುಟುಂಬಗಳ ಪುನರ್ವಸತಿಗೆ ಸರಕಾರ ಬದ್ಧವಾಗಿದೆ. ಯಾರೊಬ್ಬರೂ ವದಂತಿಗಳಿಗೆ ಕಿವಿಗೊಡಬಾರದು. ರಾಜ್ಯದ ಕೆಲವೆಡೆ ಗುಡ್ಡ ಕುಸಿತ ದಿಂದ ಹೊಲ-ಗದ್ದೆಗಳು ನೆಲಸಮವಾಗಿವೆ. ತೋಟ ಗಳು ಹಾಳಾಗಿವೆ. ಪ್ರವಾಹದಿಂದ ಹಾನಿಗೀಡಾದ ಅರಣ್ಯ ಭೂಮಿ, ಕೃಷಿ ಭೂಮಿ, ಆಸ್ತಿ ಪಾಸ್ತಿಗಳ ಸಮಗ್ರ ಸಮೀಕ್ಷೆ ಕೈಗೊಳ್ಳಲು ಸೂಚಿಸಿದ್ದು, ಕೃಷಿಕರು ಕಂಗಾಲಾ ಗುವ ಅಗತ್ಯವಿಲ್ಲ. ರೈತರಿಗೆ ರಾಜ್ಯ ಸರಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುತ್ತದೆ. ಈ ವಿಷಯದಲ್ಲಿ ಆತಂಕ ಬೇಡ ಎಂದು ಮನವಿ ಮಾಡಿದರು.
ಕುಸಿದು ಬಿದ್ದ ಗ್ರಾಮಸ್ಥ: ಭಾರೀ ಮಳೆಯಿಂದ ತೀರ್ಥಹಳ್ಳಿ ತಾಲೂಕಿನ ಹೆಗ್ಗಲತ್ತಿ ಗ್ರಾಮದಲ್ಲಿ ಭೂಕುಸಿತ ಉಂಟಾಗಿತ್ತು. ಈ ಗ್ರಾಮಕ್ಕೂ ಯಡಿಯೂರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ, ಹಸು ಕಳೆದುಕೊಂಡ ಮೂರು ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿದರು. ಹೆಗಲತ್ತಿಗೆ ಸಿಎಂ ಭೇಟಿ ನೀಡಿದ್ದ ವೇಳೆ ಗ್ರಾಮಸ್ಥನೊಬ್ಬ ಕುಸಿದು ಬಿದ್ದ ಘಟನೆಯೂ ನಡೆದಿದೆ. ಗುಡ್ಡ ಕುಸಿತದಿಂದ ಎರಡು ಎಕರೆ ಅಡಿಕೆ ತೋಟ ನಾಶವಾಗಿರುವ ಹಿನ್ನೆಲೆಯಲ್ಲಿ ಒತ್ತಡಕ್ಕೆ ಒಳಗಾಗಿದ್ದ ರೈತ ಮಂಜುನಾಥ ಅಸ್ವಸ್ಥರಾಗಿದ್ದರು. ಕೂಡಲೇ ಅವರಿಗೆ ಸ್ಥಳದಲ್ಲಿದ್ದ ವೈದ್ಯರಿಂದ ಚಿಕಿತ್ಸೆ ಕೊಡಿಸಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಶಿಕಾರಿಪುರದಲ್ಲೂ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ, ಬಳಿಕ ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ಮೇಯರ್ ಕಾರು ಡಿಕ್ಕಿ: ಯಡಿಯೂರಪ್ಪನವರು ಶಿವಮೊಗ್ಗದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ವೇಳೆ ಅವರ ಬೆಂಗಾವಲು ಪಡೆ ವಾಹನಕ್ಕೆ ಮಹಾನಗರ ಪಾಲಿಕೆ ಮೇಯರ್ ಕಾರು ಡಿಕ್ಕಿಯಾಗಿದೆ. ಅಪಘಾತ ವಾಗುತ್ತಿದ್ದಂತೆ ಮೇಯರ್ ಲತಾ ಗಣೇಶ್ ಅವರು ಉಪ ಮೇಯರ್ ಕಾರಿನಲ್ಲಿ ತೆರಳಿದರು. ಉಪ ಮೇಯರ್ ಚನ್ನಬಸಪ್ಪ, ತಮ್ಮ ಕಾರನ್ನು ಮೇಯರ್‌ಗೆ ಬಿಟ್ಟು ಕೊಟ್ಟು, ಸ್ಥಳೀಯರೊಬ್ಬರ ಬೈಕ್ ಹತ್ತಿದರು.
ವೈಮಾನಿಕ ಸಮೀಕ್ಷೆ ರದ್ದು: ಮುಖ್ಯಮಂತ್ರಿಯವರು ಶಿವಮೊಗ್ಗದಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ, ಹೆಲಿಕಾಪ್ಟರ್‌ನಲ್ಲಿ ಶಿಕಾರಿಪುರ, ಸಾಗರ ಮತ್ತು ಸೊರಬಕ್ಕೆ ತೆರಳಬೇಕಿತ್ತು. ಆದರೆ, ಬೆಳಗ್ಗೆ ವಾತಾವರಣ ಸರಿ ಇಲ್ಲದಿದ್ದರಿಂದ ಹೆಲಿಕಾಪ್ಟರ್ ಹಾರುವುದು ಕಷ್ಟ ಎಂದು ಪೈಲಟ್ ತಿಳಿಸಿದರು. ಹಾಗಾಗಿ, ನಿಗದಿಯಾಗಿದ್ದ ಅಧಿ ಕಾರಿಗಳ ಸಭೆ ಮತ್ತು ಪತ್ರಿಕಾಗೋಷ್ಠಿಯನ್ನು ಮುಂದೂಡಿ, ರಸ್ತೆ ಮೂಲಕವೇ ಶಿಕಾರಿಪುರದತ್ತ ಪ್ರಯಾಣ ಆರಂಭಿಸಿದರು.
ಕಾಲಿಗೆ ಬಿದ್ದ ಮಹಿಳೆ: ಶಿವಮೊಗ್ಗದ ರಾಜೀವ್‌ಗಾಂಧಿ ಬಡಾವಣೆಗೆ ಭೇಟಿ ನೀಡಿದ್ದ ವೇಳೆ ಭಾರೀ ಮಳೆಗೆ ಮನೆ ಕಳೆದುಕೊಂಡು ಸಂತ್ರಸ್ತರಾಗಿದ್ದ ಮಹಿಳೆಯೊಬ್ಬರು ಯಡಿಯೂರಪ್ಪನವರ ಕಾಲಿಗೆ ಬಿದ್ದು ಮನೆ ನಿರ್ಮಿಸಿಕೊಡುವಂತೆ ಕಣ್ಣೀರು ಹಾಕಿದರು. ಇದಕ್ಕೆ ಸ್ಪಂದಿಸಿದ ಸಿಎಂ, ನಿಮಗೆ ಮಂಗಳೂರು ಮಾದರಿ ಮನೆ ನಿರ್ಮಿಸಿಕೊಡಲು ಜಿಲ್ಲಾ ಧಿಕಾರಿಗೆ ಸೂಚಿಸುತ್ತೇನೆ ಎಂದರು.
“ಬೆಂಗಳೂರಿಗೆ ಶರಾವತಿ ನೀರು ಹರಿಸೊಲ್ಲ’
ಸಾಗರ: ಶರಾವತಿ ನದಿಯ ಲಿಂಗನಮಕ್ಕಿ ಅಣೆಕಟ್ಟಿನಿಂದ ಬೆಂಗಳೂರಿಗೆ ನೀರನ್ನು ಹರಿಸುವ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದ ಎದುರು ಇಂತಹ ಯಾವುದೇ ಯೋಜನೆ ಇಲ್ಲ. ಬೆಂಗಳೂರಿಗೆ ಶರಾವತಿ ನದಿ ನೀರನ್ನು ತೆಗೆದುಕೊಂಡು ಹೋಗುವುದು ಅಸಾಧ್ಯಕೆಲಸ ಎಂದರು.
ಸ್ವಾತಂತ್ರ್ಯ ದಿನಾಚರಣೆಯ ಮರುದಿನ ದೆಹಲಿಗೆ ತೆರಳಲಿದ್ದೇನೆ. ಅಂದು ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು. ನಂತರ ಆ.17 ಅಥವಾ 18ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು.
-ಯಡಿಯೂರಪ್ಪ, ಸಿಎಂ