ಬೆಂಗಳೂರು: ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ಎಸ್.ಮೂರ್ತಿ ಅವರನ್ನು ಅಮಾನತು ಗೊಳಿಸುವ ಸಂಬಂಧ ವಿಧಾನಸಭೆಯ ವಿಶೇಷ ಮಂಡಳಿ ಹೊರಡಿಸಿದ್ದ ಆದೇಶದ ಪ್ರತಿ ಸಲ್ಲಿಸುವಂತೆ ರಾಜ್ಯಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ವಿಧಾನಸಭೆ ಅಧೀನ ಕಾರ್ಯದರ್ಶಿ 2018ರ ಡಿ.27ರಂದು ಹೊರಡಿಸಿದ್ದ ಅಮಾನತು ಆದೇಶಕ್ಕೆ ತಡೆ ನೀಡಲು ನಿರಾಕರಿಸಿರುವ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಸ್. ಮೂರ್ತಿ ಸಲ್ಲಿಸಿರುವ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಮೇಲ್ಮನವಿ ಅರ್ಜಿಯನ್ನು ಗುರುವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಎ.ಎಸ್ ಪೊನ್ನಣ್ಣ, ಕರ್ನಾಟಕ ನಾಗರಿಕ ಸೇವೆ (ನಡವಳಿಕೆ ಮತ್ತು ವರ್ಗೀಕರಣ) ಕಾಯಿದೆ ಸೆಕ್ಷನ್ 10(1)(ಡಿ) ಪ್ರಕಾರ ಅಮಾನತು ಆದೇಶವನ್ನು ಹೊರಡಿಸುವ ಅ ಧಿಕಾರ ವಿಶೇಷ ಮಂಡಳಿಗೆ ಮಾತ್ರವೇ ಇದೆ. ಆದರೆ, ಅಧೀನ ಕಾರ್ಯದರ್ಶಿ ಅಮಾನತು ಆದೇಶ ಹೊರಡಿಸಿದ್ದಾರೆ.
ಆದರೆ, ಅವರಿಗೆ ಅಮಾನತು ಆದೇಶ ಹೊರಡಿಸುವ ಅಧಿಕಾರವಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯಸರ್ಕಾರದ ಪರ ವಕೀಲರು, ಅರ್ಜಿದಾರರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸತ್ಯಾಂಶ ಕಂಡು ಬಂದಿದ್ದರಿಂದ ವಿಶೇಷ ಮಂಡಳಿಯೇ ನಿರ್ಣಯ ಕೈಗೊಂಡು ಅಮಾನತು ಅದೇಶ ಹೊರಡಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಅಮಾನತು ಆದೇಶ ಸಂಬಂಧ ವಿಶೇಷ ಮಂಡಳಿ ಹೊರಡಿಸಿರುವ ಆದೇಶ ಪ್ರತಿ ಸಲ್ಲಿಸಿ ಎಂದು ಸರ್ಕಾರಕ್ಕೆ ಸೂಚಿಸಿ ಜೂ.19ಕ್ಕೆ ವಿಚಾರಣೆ ಮುಂದೂಡಿದೆ.