ಹುಬ್ಬಳ್ಳಿ: ಮಳೆ ನೀರಿನಿಂದ ಸಂಕಷ್ಟಕ್ಕೆ ಒಳಗಾಗಿರುವ ಪ್ರದೇಶಗಳಲ್ಲಿ ಚರಂಡಿ ಸ್ವಚ್ಛತೆ ಹಾಗೂ ಮಳೆ ನೀರು ಸರಾಗವಾಗಿ ಹರಿಯುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆಗೆ ಲಿಡ್ಕರ್ ಅಧ್ಯಕ್ಷರಾದ ಶಾಸಕ ಪ್ರಸಾದ ಅಬ್ಬಯ್ಯ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಟಾರು ಸ್ವಚ್ಛತೆಗೆ ಕ್ರಮ ವಹಿಸಿ: ಮಳೆ ನೀರಿನಿಂದ ಅವಾಂತರ ಸೃಷ್ಟಿಯಾಗುವ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ಮೂಲಕ ಚರಂಡಿ ಹಾಗೂ ಗಟಾರು ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು. ವಲಯಾಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ತೆರಳಿ ವಾಸ್ತವಾಂಶ ಅರಿಯಬೇಕು. ಕಚೇರಿಯಲ್ಲಿ ಕುಳಿತು ಕಡತಗಳಿಗೆ ಸಹಿ ಮಾಡುವುದಷ್ಟೇ ನಿಮ್ಮ ಕೆಲಸವಲ್ಲ. ವಲಯ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಅಧಿಕಾರಿಗಳಿಗೆ ಯಾವುದೇ ಭಯವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅವೈಜ್ಞಾನಿಕ ಕಾಮಗಾರಿ: ಮಂಟೂರು ರಸ್ತೆಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಪೈಪ್ ಜೋಡಿಸಿ ನೀರು ಸರಾಗವಾಗಿ ಹರಿಯದಂತೆ ಮಣ್ಣು ಹಾಕಿರುವುದರಿಂದ ನೀರು ಮನೆಗಳಿಗೆ ನುಗ್ಗಿದೆ. ಈ ಕುರಿತು ಪಾಲಿಕೆ ಅಧಿಕಾರಿಗಳು ಪರಿಶೀಲನೆ ಮಾಡಿಲ್ಲ. ಕನಿಷ್ಠ ಪಕ್ಷ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳೂ ಈ ಬಗ್ಗೆ ಕಾಳಜಿ ತೋರಿಲ್ಲ. ಘಟನೆ ನಡೆದಾಗ ಮಣ್ಣು ತೆರವುಗೊಳಿಸಲು ಪಾಲಿಕೆ ಜೆಸಿಬಿ ವ್ಯವಸ್ಥೆ ಕೂಡ ಮಾಡಿಲ್ಲ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಎಚ್ಚೆತ್ತುಕೊಳ್ಳಬೇಕು ಎಂದು ಸೂಚಿಸಿದರು.
ವಲಯವಾರು ಸಮೀಕ್ಷೆಗೆ ಸೂಚನೆ:ಪಾಲಿಕೆ ಆಯುಕ್ತ ಪ್ರಶಾಂತಕುಮಾರ ಮಿಶ್ರಾ ಮಾತನಾಡಿ, ಸಭೆಯ ಸೂಚನೆಗಳನ್ನು ಅಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕು. ತಮ್ಮ ವಲಯ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಖುದ್ದಾಗಿ ಪರಿಶೀಲಿಸಿ ವರದಿ ನೀಡಬೇಕು. ಅಗತ್ಯ ಕಾಮಗಾರಿ ಇದ್ದರೆ ನನ್ನ ಗಮನಕ್ಕೆ ತರಬೇಕು. ಕಂಟ್ರೋಲ್ ರೂಂಗೆ ಬಂದ ದೂರುಗಳನ್ನು ಕೂಡಲೇ ಆಯಾ ವಲಯದ ಅಧಿಕಾರಿಗಳಿಗೆ ತಿಳಿಸಬೇಕು. ವಲಯವಾರು ಮಳೆ ನೀರಿನಿಂದ ಸಮಸ್ಯೆಯಾಗುವ ಪ್ರದೇಶಗಳ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
Advertisement
ಮಹಾನಗರ ಪಾಲಿಕೆ ಆಯುಕ್ತರ ಸಭಾಂಗಣದಲ್ಲಿ ಸಭೆ ನಡೆಸಿದ ಅವರು, ರವಿವಾರ ಮಧ್ಯಾಹ್ನ ಸುರಿದ ಮಳೆಯಿಂದ ಮಂಟೂರು ರಸ್ತೆ ಹಾಗೂ ಎಸ್.ಎಂ. ಕೃಷ್ಣ ನಗರ ಭಾಗದಲ್ಲಿ ಸಾಕಷ್ಟು ಹಾನಿಯಾಗಿದೆ. ಪಾಲಿಕೆ ಅಧಿಕಾರಿಗಳು ಮಳೆಗಾಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಪರಿಣಾಮ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಕೇವಲ ಒಂದೂವರೆ ಗಂಟೆ ಸುರಿದ ಮಳೆಯಿಂದ ಇಂತಹ ಪರಿಸ್ಥಿತಿ ಉಂಟಾಗಿದ್ದು, ನಿರಂತರವಾಗಿ ಸುರಿದಿದ್ದರೆ ಈ ಭಾಗದ ಜನರು ಜೀವನ ಕಳೆದುಕೊಳ್ಳುತ್ತಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
Related Articles
ಇದೇ ಪರಿಸ್ಥಿತಿ ನಿಮಗಾಗಿದ್ದರೆ ಹೇಗಿರುತ್ತಿತ್ತು?:
ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅವೈಜ್ಞಾನಿಕ ಕಾಮಗಾರಿಗಳಿಂದ ಜನರು ಸಂಕಷ್ಟ ಅನುಭವಿಸಿದ್ದಾರೆ. ಇದೇ ಪರಿಸ್ಥಿತಿ ನಿಮಗೆ ಅಥವಾ ನಿಮ್ಮ ಕುಟುಂಬಕ್ಕೆ ಬಂದಿದ್ದರೆ ಹೇಗಿರುತ್ತಿತ್ತು. ಸಾಮಾನ್ಯ ಜನರ ಬದುಕಿನೊಂದಿಗೆ ಆಟವಾಡಬೇಡಿ. ಇಂತಹ ಘಟನೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸಾಕಷ್ಟು ಬಾರಿ ಹೇಳಿದರೂ ಬೆಲೆಯಿಲ್ಲದಂತಾಗಿದೆ. ಪ್ರತಿ ಸಭೆಯಲ್ಲಿ ಅದೇ ಪ್ರಶ್ನೆ ಹಾಗೂ ನಿಮ್ಮಿಂದ ಅದೇ ಹಾರಿಕೆ ಉತ್ತರ ಕೇಳುವುದಾಗಿದೆ. ಮುಂದೆ ಯಾವುದೇ ಕಾರಣಕ್ಕೂ ಇಂತಹ ಸ್ಥಿತಿ ಪುನರಾವರ್ತನೆಯಾಗಬಾರದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಅಕ್ರೋಶ ವ್ಯಕ್ತಪಡಿಸಿದರು.
Advertisement