Advertisement
11 ವರ್ಷದ ಬಾಲಕ ಬಾಲಕಿಯರಿಂದ ಹಿಡಿದು 68 ವರ್ಷದ ಹಿರಿಯ ವೀಣಾ ವಾದಕಿಯವರೆಗೆ ವಿವಿಧ ವಯೋಮಾನದ ವೀಣಾ ವಾದಕರು ಸಂಗೀತ ಸುಧೆ ಹರಿಸಿದರು. 13 ಮಂದಿ ಪುರುಷರು, 77 ಮಂದಿ ಮಹಿಳೆಯರು ಪಾಲ್ಗೊಂಡಿದ್ದರು. ವೀಣಾ ವಿದ್ಯಾರ್ಥಿಗಳ ಜತೆ ವೀಣಾ ವಿದ್ವತ್ ಪಡೆದವರ ಸಮಾಗಮವೂ ಆಯಿತು. ವೈದ್ಯರು, ಎಂಜಿನಿಯರ್ ಗಳು ಕೂಡ ಇದ್ದರು. ಅಂಧ ವೀಣಾ ವಾದಕಿ ವಿದುಷಿ ಅರುಣಾ ಕುಮಾರಿ ಕೂಡ ತಂಡದಲ್ಲಿದ್ದರು. ವಿಪಂಚಿ ಬಳಗದ ಪವನ ಅವರು ವೀಣಾ ವೃಂದದ ನೇತೃತ್ವ ವಹಿಸಿದ್ದರು.
‘ತುಳಸಿದಳ’ಗಳಾಗಿ ನಾದನಮನ
ಪರ್ಯಾಯ ಶ್ರೀ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣನಿಗೆ ನಿತ್ಯ ಲಕ್ಷ ತುಳಸಿ ಅರ್ಚನೆ ಮಾಡುತ್ತಿದ್ದಾರೆ. ತುಳಸಿಗೆ ವಿಶೇಷ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ‘ವೀಣಾವೃಂದ’ ಕಾರ್ಯಕ್ರಮದಲ್ಲಿ ಕೂಡ 90 ಮಂದಿಯೂ ಹಸಿರು ಬಟ್ಟೆಯನ್ನು ತೊಟ್ಟು ‘ತುಳಸಿದಳ’ಗಳಾಗಿ ಒಂದೂವರೆ ಗಂಟೆ ಕಾಲ ನಾದ ಹೊಮ್ಮಿಸಿ ನೆರೆದ ಸಾವಿರ ಮಂದಿಯ ಮನಗೆದ್ದರು. ಶ್ರೀಕೃಷ್ಣನಿಗೆ ನಾದ ನಮನ ಸಮರ್ಪಿಸಿದರು. ತ್ಯಾಗರಾಜರ ‘ತುಳಸೀ ದಳ’, ಪುರಂದರದಾಸರು, ಜಗನ್ನಾಥ ದಾಸರು ರಚಿಸಿದ ದಾಸರ ಪದಗಳು, ದ್ವಾದಶ ಸ್ತೋತ್ರ, ವಾದಿರಾಜರ ಶ್ಲೋಕಗಳನ್ನು ನುಡಿಸಲಾಯಿತು. ಡಾ| ಬಾಲಚಂದ್ರ ಆಚಾರ್ ಮತ್ತು ಬಾಲಚಂದ್ರ ಭಾಗವತ್ ಮೃದಂಗದಲ್ಲಿ ಸಹಕರಿಸಿದರು.