ಬೆಳಗಾವಿ: ರೈತರ ಕಿಸಾನ್ ಸನ್ಮಾನ ನಿಧಿ ಯೋಜನೆಯಂತೆ ರಾಜ್ಯದ ನೇಕಾರರ ಕುಟಂಬಗಳಿಗೂ 2000 ರೂ. ದಂತೆ ನೇಕಾರ ಸಮ್ಮಾನ್ ನಿಧಿ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರಕಟಿಸಿದರು.
ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ದಲ್ಲಿ ಮಂಗಳವಾರ ನಡೆದ ನೇಕಾರರ ವಿಶೇಷ ಸಭೆಯಲ್ಲಿ ರಾಜ್ಯದ ನೇಕಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಮುಖ್ಯಮಂತ್ರಿಗಳು ಈ ಘೋಷಣೆ ಮಾಡಿದರು.
ಸುಮಾರು ಒಂದು ಗಂಟೆ ಕಾಲ ನಡೆದ ಚರ್ಚೆಯಲ್ಲಿ ರಾಜ್ಯದ ನೇಕಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ, ಕೋವಿಡ್ 19 ವೈರಸ್ ಹಾವಳಿ ತಡೆಗಟ್ಟಲು ಲಾಕ್‌ಡೌನ್ ಜಾರಿ ಮಾಡಿರುವುದರಿಂದ ಹಲವಾರು ಸಮಸ್ಯೆಗಳು ಎದುರಾಗಿವೆ. ಆದರೆ ಸರಕಾರ ನೇಕಾರರ ಪರವಾಗಿದ್ದು ಯಾವುದೇ ಕಾರಣಕ್ಕೂ ಭಯ ಪಡುವುದು ಬೇಡ ಎಂದು ಅಭಯ ನೀಡಿದರು. ಸರಕಾರಿ ವಿವಿಧ ಇಲಾಖೆಗಳಿಗೆ ಬೇಕಾದ ಬಟ್ಟೆ ಹಾಗೂ ಸೀರೆಗಳನ್ನು ರಾಜ್ಯದ ನೇಕಾರರಿಂದಲೇ ನೇರವಾಗಿ ಉತ್ಪಾದಿಸಿ, ಖರೀದಿಸುವ ಐತಿಹಾಸಿಕ ಆದೇಶವನ್ನು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಪ್ರಕಟ ಮಾಡಿದರು. ಸಾಲಮನ್ನಾ ಯೋಜನೆಯ ಅವಧಿಯನ್ನು 2019 ರ ಮಾರ್ಚ್ 31 ರಿಂದ 2020 ರ ಜೂನ್ 30 ರವರೆಗೂ ವಿಸ್ತರಣೆ ಮಾಡಿ, ಸಾಲ ಮತ್ತು ಬಡ್ಡಿ ಮನ್ನಾ ಯೋಜನೆಗೆ ಹೊಸ ಮಾರ್ಗಸೂಚಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪ್ರಕೃತಿ ವಿಕೋಪ ಹಾಗೂ ಕೋವಿಡ್ 19 ವೈರಸ್ ಹಾವಳಿಯಿಂದ ಉತ್ತರ ಕರ್ನಾಟಕದ ನೇಕಾರರು ಸಾಕಷ್ಟು ಹಾನಿ ಅನುಭವಿಸಿದ್ದಾರೆ. ನೇಕಾರ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ನೇಕಾರರ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ಅನುದಾನ ನೀಡುವಂತೆ ಮುಖಂಡರು ಮನವಿ ಮಾಡಿದರು. ಸಭೆಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕರಾದ ಸಿದ್ದು ಸವದಿ, ಅಭಯ ಪಾಟೀಲ, ಚರಂತಿಮಠ, ಬೆಳಗಾವಿ ನೇಕಾರ ಮುಖಂಡರ ನಿಯೋಗದ ಪ್ರತಿನಿಧಿಗಳಾದ ಜಿ. ರಮೇಶ್, ಗಜಾನನ ಗುಂಜೇರಿ, ಸಂತೋಷ ಟೊಪಗಿ, ಭುಜಂಗ್ ಭಂಡಾರಿ, ವೆಂಕಟೇಶ್ ವನಹಳ್ಳಿ, ಶಂಕರ ಢವಳಿ, ಈರಪ್ಪಾ ತಿಗಡಿ ಉಪಸ್ಥಿತರಿದ್ದರು.