Advertisement

ವಚನಗಳಿಂದ ಸಮಾಜ ಶುದ್ಧಗೊಳಿಸಿದ ಶಿವಶರಣರು

05:21 PM Aug 22, 2018 | Team Udayavani |

ಬೆಳಗಾವಿ: ಬಸವಾದಿ ಶಿವಶರಣರು ಸಮಾನತೆ ಹಾಗೂ ಭಾವೈಕ್ಯತೆಯ ಪ್ರತೀಕವಾಗಿದ್ದು, ಶರಣರ ವಚನಗಳ ಮೂಲಕ ಸಮಾಜದ ಅಂತರಂಗ, ಬಹಿರಂಗ ಶುದ್ಧಿ ಮಾಡಿದರು. ಆತ್ಮ ಕಲ್ಯಾಣದೊಂದಿಗೆ, ಸಮಾಜದ, ಕಲ್ಯಾಣ ರಾಜ್ಯದ ಕಲ್ಪನೆ ಮಾಡಿಕೊಟ್ಟರು ಎಂದು ಬೈಲಹೊಂಗಲದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಪ್ರೊ| ಬಸವರಾಜ ಪುರಾಣಿಕಮಠ ಹೇಳಿದರು.

Advertisement

ನಗರದ ಕಾರಂಜಿಮಠದಲ್ಲಿ ನಡೆದ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮತ್ತು ವಚನ ಸಾಹಿತ್ಯ ವಿಷಯ ಕುರಿತು ಮಾತನಾಡಿದ ಅವರು, ಶರಣರು ಕಾಯಕ, ದಾಸೋಹ, ಪ್ರಸಾದ, ಇಷ್ಟಲಿಂಗ ಪೂಜೆ, ಏಕದೇವೋಪಾಸನೆಯ ಮೂಲಕ ನಡೆ-ನುಡಿಗಳಲ್ಲಿ ಒಂದಾಗಿ ರಾಷ್ಟ್ರೀಯ ಭಾವೈಕ್ಯತೆಗೆ ನಾಂದಿ ಹಾಡಿದರು. ಈ ಶರಣ ಸಂಪ್ರದಾಯದಲ್ಲಿ ಸಾಗಿ ಬಂದಿರುವ ಬೆಳಗಾವಿಯ  ರಂಜಿಮಠ ಬಸವ ಸಂಸ್ಕೃತಿಯ ಭಾವೈಕ್ಯತೆಯ ಕೇಂದ್ರವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸದ ಸುರೇಶ ಅಂಗಡಿ ಮಾತನಾಡಿ, ವಚನಗಳು ಸಾಮರಸ್ಯದ ಸಂಕೇತ, ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ವಚನ ಸಾಹಿತ್ಯದ ಸಂದೇಶವನ್ನು ದೇಶದ ಜನತೆಗೆ ಮುಟ್ಟಿಸಿದ್ದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ವಿಧಾನಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಬಸವಾದಿ ಶರಣರ ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಬಸವ ಜಯಂತಿಯ ಆಚರಣೆಯ ಉದ್ದೇಶ ಎಂದರು. ಕಾರಂಜಿಮಠದ ಗುರುಸಿದ್ಧ ಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಉತ್ತರಾಧಿಕಾರಿ ಶಿವಯೋಗಿ ದೇವರು ಕಾರ್ಯಕ್ರಮದ ಸಮ್ಮುಖ ವಹಿಸಿದ್ದರು. ಶಾಸಕರಾದ ಮಹಾಂತೇಶ ಕೌಜಲಗಿ, ಅನಿಲ ಬೆನಕೆ ಉಪಸ್ಥಿತರಿದ್ದರು. ಡಾ| ಮಹೇಶ ಗುರನಗೌಡರ ಸ್ವಾಗತಿಸಿದರು. ಪ್ರೊ| ಎ. ಕೆ. ಪಾಟೀಲ ನಿರೂಪಣೆ ಮಾಡಿದರು. ವಿ. ಕೆ. ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next