Advertisement

ಶಿಕ್ಷಣ ವ್ಯವಸ್ಥೆಯ ಮರುವ್ಯಾಖ್ಯಾನ ಅಗತ್ಯ : ಡಾ|ದಿನೇಶ್‌ ಸಿಂಗ್‌

10:42 AM May 23, 2018 | |

ಮೂಡಬಿದಿರೆ: ನಮ್ಮ ಶೈಕ್ಷಣಿಕ ವ್ಯವಸ್ಥೆಯು ತನ್ನ ಸೀಮಿತ ಚೌಕಟ್ಟನ್ನು ದಾಟಿ ವಿಸ್ತಾರವಾದ ಹರವಿಗೆ ತೆರೆದುಕೊಂಡಾಗ ಮಾತ್ರ ಶಿಕ್ಷಣದ ನಿಜ ಉದ್ದೇಶ ಸಾಧನೆಯಾಗುತ್ತದೆ ಎಂದು ಗಣಿತ ತಜ್ಞ, ದಿಲ್ಲಿ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ| ದಿನೇಶ್‌ ಸಿಂಗ್‌ ಹೇಳಿದರು.

Advertisement

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್‌ ಸ್ಪೀಕರ್ ಕ್ಲಬ್‌ ಆಶ್ರಯದಲ್ಲಿ ಮಿಜಾರ್‌ ನಲ್ಲಿರುವ ಆಳ್ವಾಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿಯಲ್ಲಿ ಆಯೋಜನೆಗೊಂಡ ‘ರೀ-ಡಿಫೈನಿಂಗ್‌ ಎಜ್ಯುಕೇಶನ್‌ ಟು ಎನೇಬಲ್‌ ದ ಯಂಗ್‌’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮಗೆ ನಮ್ಮದೇ ಆದ ಒಂದು ಅಂತರ್‌ ಧ್ವನಿಯಿರುತ್ತದೆ. ಆ ಅಂತರ್‌ಧ್ವನಿಯನ್ನು ಅರಿತು ಮುಂದೆ ಸಾಗಿದಾಗ ಮಾತ್ರ ಜೀವನದಲ್ಲಿ ನಿಜವಾದ ಯಶಸ್ಸು, ಉನ್ನತಿ ದೊರೆಯಲು ಸಾಧ್ಯ ಎಂದರು. ಶಿಕ್ಷಣ ವ್ಯವಸ್ಥೆಯು ಪಠ್ಯ ಕೇಂದ್ರಿತ ಹಾಗೂ ಕಪ್ಪು ಹಲಗೆಯಿಂದ ಹೊರ ಬಂದು ವಿದ್ಯಾರ್ಥಿಗಳಲ್ಲಿ ಕ್ರಿಯಾತ್ಮಕತೆ,
ಆಸಕ್ತಿಗಳನ್ನು ಪೋಷಿಸುವ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಉದ್ಯೋಗಾಕಾಂಕ್ಷಿಗಳಾಗಿ ಉಳಿಯದೇ ಉದ್ಯೋಗದಾತರಾಗಿ ಬೆಳೆಯುವತ್ತ ಗಮನ ಹರಿಸಬೇಕಿದೆ. ಇದಕ್ಕಾಗಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮರುವ್ಯಾಖ್ಯಾನಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಆವಶ್ಯಕತೆಗಳಿಂದಲೇ ಆವಿಷ್ಕಾರ
ದೊಡ್ಡ ದೊಡ್ಡ ಆವಿಷ್ಕಾರಗಳಾಗುವುದು ಸಣ್ಣ ಸಣ್ಣ ಸಾಮಾಜಿಕ ಅಗತ್ಯತೆಗಳಿಂದಲೇ. ಆದ್ದರಿಂದ ಯುವಜನತೆ ವಿಜ್ಞಾನ ಪ್ರಯೋಗಗಳ ಬಗ್ಗೆ ಪುಸ್ತಕಗಳಲ್ಲಿ ಓದುವುದಕ್ಕಿಂತ ನಿತ್ಯ ಜೀವನದ ಅಗತ್ಯತೆಗಳ ಬಗ್ಗೆ ಅರಿಯುವ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಬಳಿಕ ಅವರು ವಿದ್ಯಾರ್ಥಿಗಳ ಜತೆ ಸಂವಾದ ನಡೆ ಸಿ ದರು. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್‌ ಟ್ರಸ್ಟಿ ವಿವೇಕ್‌ ಆಳ್ವ, ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್‌ ಫೆರ್ನಾಂಡಿಸ್‌ ಉಪಸ್ಥಿತರಿದ್ದರು.

ಪ್ಲಾಸ್ಟಿಕ್‌ ಸರ್ಜರಿ ನಡೆಸಿದ್ದು ಸುಶ್ರುತ ಮಹರ್ಷಿ
ಭಾರತವು ಭೌತಶಾಸ್ತ್ರ, ರಸಾಯನಶಾಸ್ತ್ರಗಳಲ್ಲಿ ಅದ್ಭುತ ಪ್ರಗತಿ ಸಾಧಿಸಿದ ದೇಶವಾಗಿತ್ತು. ಪ್ಲಾಸ್ಟಿಕ್‌ ಸರ್ಜರಿಯನ್ನು ಭಾರತದ ಸುಶ್ರುತ ಮಹರ್ಷಿ ಸಾವಿರಾರು ವರ್ಷಗಳ ಹಿಂದೆ ನಿರೂಪಿಸಿದ್ದರು. ಗಣಿತದ ಖ್ಯಾತ ‘ಟ್ರೈಆ್ಯಂಗ್ಯುಲರ್‌ ಮಾಡೆಲ್‌’ನ ಮೂಲ ಇರುವುದು ಭಾರತೀಯ ತಜ್ಞ ಪಿಂಗಳನ ಸಂಶೋಧನೆಗಳಲ್ಲಿ. ಹೀಗೆ ಭಾರತ ಅತ್ಯಂತ ಪ್ರಾಚೀನ ಕಾಲದಿಂದಲೂ ಜ್ಞಾನದ ಕಲ್ಪವೃಕ್ಷವಾಗಿ ಬೆಳೆದು ನಿಂತಿದೆ. ವಿದೇಶಿಯರೆಲ್ಲರಿಗೂ ಮೂಲ ಆಧಾರವಾಗಿ ನಿಂತಿರುವ ಭಾರತದಲ್ಲಿ ಮಾತ್ರ ವಿದ್ಯಾರ್ಥಿಗಳು ಅರಿವಿನ ಔನ್ನತ್ಯ ಸಾಧಿಸಲು ವಿಫಲರಾಗುತ್ತಿದ್ದಾರೆ. ಇದು ನಮ್ಮ ದುರಂತ.
– ಡಾ| ದಿನೇಶ್‌ ಸಿಂಗ್‌

Advertisement
Advertisement

Udayavani is now on Telegram. Click here to join our channel and stay updated with the latest news.