ಅಮೀನಗಡ: ದೇಶ-ವಿದೇಶಗಳಲ್ಲೂ ತನ್ನ ವಿಶಿಷ್ಟ ಸ್ವಾದ, ಪೌಷ್ಟಿಕತೆಯೊಂದಿಗೆ ಪ್ರಸಿದ್ಧಿಯಾದ ಅಮೀನಗಡ ಕರದಂಡು ಮತ್ತೂಂದು ಹೊಸ ಹೆಜ್ಜೆಯತ್ತ ಕಾಲಿಟ್ಟಿದೆ. ಮಧುಮೇಹಿಗಳಿಗಾಗಿಯೇ ವಿಶೇಷ ಕರದಂಟು ಸಿದ್ಧಪಡಿಸಿದೆ.
ಕರದಂಟು ಸಿಹಿ ತಿನಿಸು ಮಾತ್ರವಲ್ಲ ಪೌಷ್ಟಿಕ ಆಹಾರ ನೈಸರ್ಗಿಕ ಅಂಟು, ಚುಕ್ಕಿ ಬೆಲ್ಲ, ಶುದ್ದ ತುಪ್ಪ ಹಾಗೂ ಹತ್ತಾರು ಡ್ರೈ ಫ್ರುಟ್ಸ್‌ಗಳ ಮಿಶ್ರಣದಲ್ಲಿ ತಯಾರಾಗುವ ಅಮೀನಗಡ ಕರದಂಟಿಗೆ 114 ವರ್ಷಗಳ ಇತಿಹಾಸವಿದೆ. ಆಧುನಿಕತೆಗೆ ತಕ್ಕಂತೆ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದ್ದು, ಮೊದಲಿನ ರುಚಿಯನ್ನೂ ಕಾಯ್ದುಕೊಳ್ಳಲಾಗಿದೆ. ಪೌಷ್ಟಿಕಾಂಶಗಳನ್ನು ಹೊಂದಿರುವ ಅಮೀನಗಡದ ಪ್ರಸಿದ್ಧ ಕರದಂಟು ಗರ್ಭಿಣಿಯರು, ಬಾಣಂತಿಯರು, ಯುವಕರು ಹಾಗೂ ಮಕ್ಕಳ ಆರೋಗ್ಯಕ್ಕೆ ಉತ್ತಮ ತಿನಿಸು. ಉಡುಪಿಯಿಂದ ಗೋಡಂಬಿ, ಆಂಧ್ರದ ತಾಂಡೂರ್‌ನಿಂದ ಗೇರು ಬೀಜ, ಮಹಾರಾಷ್ಟ್ರದ ಕೊಲ್ಲಾಪುರದಿಂದ ಬೆಲ್ಲ.
ಮುಂಬೈ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಿಂದ ಬಾದಾಮಿ, ಪಿಸ್ತಾ, ಅಂಜೂರು ಸೇರಿದಂತೆ ಬಹುತೇಕ ಸಾಮಗ್ರಿ ತಂದು ಕರದಂಟಿಗೆ ಬಳಸಲಾಗುತ್ತದೆ. ಬದಲಾವಣೆ ಏನು?: ಸಾವಯವ ಬೆಲ್ಲ, ಕೊಬ್ಬರಿ, ಗೋಡಂಬಿ, ಒಣದ್ರಾಕ್ಷಿ, ಗೇರಬೀಜ, ಬಾದಾಮಿ, ಪಿಸ್ತಾ, ಅಂಜೂರ, ಆಳ್ವಿ, ಗಸಗಸಿ, ಉತ್ತತ್ತಿ, ಆಕ್ರೋಟ್, ಜಾಜಿಕಾಯಿ, ಏಲಕ್ಕಿ ಹಾಗೂ ಶುದ್ದ ತುಪ್ಪ ಸೇರಿದಂತೆ ಹಲವಾರು ಪೌಷ್ಟಿಕಾಂಶಗಳಿಂದ ತಯಾರಿಸಲ್ಪಡುವ ಕರದಂಟು ಪ್ರಿಮಿಯಂ, ಕ್ಲಾಸಿಕ್, ಸುಪ್ರೀಂ ಎಂದು ಮೂರು ತರಹದ ಕರದಂಟು ತಯಾರಿಸಿ ಮಾರಾಟ ಮಾಡಲಾಗುತ್ತದೆ.
ಸುಪ್ರೀಂ ಕರದಂಟು ನಾಲ್ಕರಿಂದ ಆರು ತಿಂಗಳು ಬಳಸಲಾಗುತ್ತದೆ. ಆದರೆ ಈಗ ಅಮೀನಗಡ ಪ್ರಸಿದ್ಧ ವಿಜಯಾ ಕರದಂಟು ಒಂದು ಹೆಜ್ಜೆ ಮುಂದೆ ಸಾಗಿ ಸಕ್ಕರೆ, ಬೆಲ್ಲ ರಹಿತವಾದ ಅಂಜೂರ ಮತ್ತು ಕರ್ಜೂರ ಮೂಲಕ ನೂತನ ಸ್ವಾದಿಷ್ಟ ಕರದಂಟು ಸಿದ್ಧಪಡಿಸಿದೆ. ಇದು ಮಧುಮೇಹಿಗಳು, ಹಿಮೋಗ್ಲೋಬಿನ್ ನಿಂದ ಬಳಲುತ್ತಿರುವವರಿಗೆ ಪೌಷ್ಟಿಕ ತಿನಿಸು ಎನ್ನುತ್ತಾರೆ ವಿಜಯಾ ಕರದಂಟು ಅಮೀನಗಡ ಮಾಲಿಕ ಸಂತೋಷ ಐಹೊಳ್ಳಿ.
ಅಂಜೂರ ಮತ್ತು ಕರ್ಜೂರ ಮಿಶ್ರಿತ ಮೂಲಕ ಕರದಂಟು ತಯಾರು ಮಾಡಬೇಕು ಎಂಬ ಉದ್ದೇಶ ಮೊದಲಿನಿಂದಲೂ ಇತ್ತು. ನಮ್ಮ ಅಡುಗೆ ಮನೆಯಲ್ಲಿ ಮೊದಲ ಪ್ರಯತ್ನದಲ್ಲಿ ಕಾಲು ಕೆಜಿ ಕರದಂಟು ಸಿದ್ಧಪಡಿಸಲಾಯಿತು. ನಂತರ 10 ಕೆಜಿ, ಈಗ ಸದ್ಯ 30 ಕೆಜಿ ಕರದಂಟು ಮಾಡಿ ಮಾರುಕಟ್ಟೆಗೆ ತಾತ್ಕಾಲಿಕವಾಗಿ ಬಿಡುಗಡೆ ಮಾಡಿದ್ದೇವೆ. ಇದರಲ್ಲಿ ಯಾವುದೇ ರೀತಿಯ ಸಕ್ಕರೆ ಬೆಲ್ಲ, ದ್ರಾಕ್ಷಿ ಮತ್ತು ಕೊಬ್ಬರಿ ಬಳಸುವುದಿಲ್ಲ. ಇದನ್ನು ವಿಶೇಷವಾಗಿ ಮಧುಮೇಹಿಗಳಿಗೆ, ಹೀಮೋಗ್ಲೋಬಿನ್‌ನಿಂದ ಬಳಲುತ್ತಿರುವವರಿಗಾಗಿ ಸಿದ್ಧಪಡಿಸಲಾಗಿದೆ. ಮೈಸೂರಿನ ಆಹಾರ ಇಲಾಖೆಯಲ್ಲಿ ಪರೀಕ್ಷೆಗೆ ಒಳಪಡಿಸಿ ಸಕ್ಕರೆ ಪ್ರಮಾಣ ಎಷ್ಟಿದೆ ಎಂಬುದನ್ನು ಪರೀಕ್ಷಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು.
(ಸಂತೋಷ ಐಹೊಳ್ಳಿ, ಮಾಲಿಕರು, ವಿಜಯಾ ಕರದಂಟು, ಅಮೀನಗಡ)
ಎಚ್.ಎಚ್. ಬೇಪಾರಿ