Advertisement
ಪ್ರಸಕ್ತ ವರ್ಷಕ್ಕೆ ಹೋಲಿಸಿದರೆ 2020-21ನೇ ಸಾಲಿನಲ್ಲಿ ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಕ್ಕೆ ಸಿಗುವ ಪಾಲಿನ ಪ್ರಮಾಣದಲ್ಲಿ 5,495 ಕೋಟಿ ರೂ. ಖೋತಾ ಆಗಲಿದೆ. ಈ ಕೊರತೆಯನ್ನು ವಿಶೇಷ ಅನುದಾನದ ರೂಪದಲ್ಲಿ ಭರಿಸಬೇಕು ಎಂಬ ಆಯೋಗದ ಶಿಫಾರಸನ್ನು ಒಪ್ಪದ ಕೇಂದ್ರ, ಈ ಬಗ್ಗೆ ಪುನರ್ ಪರಿಶೀಲಿಸುವಂತೆ ಆಯೋಗಕ್ಕೆ ಸೂಚಿಸಿದೆ. ಆ ಹಿನ್ನೆಲೆ ಯಲ್ಲಿ ರಾಜ್ಯ ಸರಕಾರವು ಆಯೋಗದ ಶಿಫಾರಸಿನಂತೆ 5,495 ಕೋಟಿ ರೂ. ವಿಶೇಷ ಅನುದಾನದ ಜತೆಗೆ ರಾಜ್ಯದ ಪಾಲಿನ ಮೊತ್ತ ಹೆಚ್ಚಳ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿದೆ.
14ನೇ ಹಣಕಾಸು ಆಯೋಗದಡಿ ರಾಜ್ಯಗಳಿಗೆ ನಿಗದಿಪಡಿಸಿದ ಶೇ. 42ರಷ್ಟು ಪಾಲಿನಲ್ಲಿ ಕರ್ನಾಟಕಕ್ಕೆ ಶೇ. 4.71ರಷ್ಟು ನಿಗದಿಯಾಗಿತ್ತು. 15ನೇ ಆಯೋಗದಡಿ ಗೊತ್ತುಪಡಿಸಿದ ಶೇ. 41ರಲ್ಲಿ ಕರ್ನಾಟಕಕ್ಕೆ ಶೇ.3.65 ನಿಗದಿಯಾಗಿದ್ದು, ರಾಜ್ಯದ ಪಾಲು ಗಣನೀಯ ಇಳಿಕೆಯಾಗುವುದು ನಿಶ್ಚಿತ. 14ನೇ ಆಯೋಗದ ಕೊನೆಯ ಅವಧಿ, ಎಂದರೆ 2019-20ರಲ್ಲಿ ರಾಜ್ಯಕ್ಕೆ 39,806 ಕೋ.ರೂ. ನಿಗದಿಪಡಿಸಲಾಗಿತ್ತು.
Related Articles
Advertisement
5,495 ಕೋ.ರೂ. ಅನುದಾನಕ್ಕೆ ಶಿಫಾರಸು15ನೇ ಹಣಕಾಸು ಆಯೋಗದ ಶಿಫಾರಸಿನಡಿ 2020-21ನೇ ಸಾಲಿಗೆ ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಕ್ಕೆ 31,180 ಕೋ.ರೂ. ನಿಗದಿಪಡಿಸಲಾಗಿದೆ. ಹಾಗಾಗಿ ಕಳೆದ ಸಾಲಿಗೆ ಮಂಜೂರಾದ ಪಾಲಿಗೆ ಹೋಲಿಸಿದರೆ ಮುಂದಿನ ವರ್ಷದ ಪಾಲಿನಲ್ಲಿ 5,495 ಕೋ.ರೂ. ಕಡಿಮೆಯಾಗಲಿದೆ. ಈ ಕೊರತೆಯನ್ನು ವಿಶೇಷ ಅನುದಾನದ ರೂಪದಲ್ಲಿ 3 ಕಂತಿನಲ್ಲಿ ಬಿಡುಗಡೆ ಮಾಡಬಹುದು ಎಂದು 15ನೇ ಆಯೋಗ ಶಿಫಾರಸು ಮಾಡಿತ್ತು. ಒಪ್ಪಿಗೆ ನೀಡದ ಕೇಂದ್ರ
ರಾಜ್ಯಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ನೀಡಬಹುದೆಂಬ ಶಿಫಾರಸನ್ನು ಕೇಂದ್ರವು ಒಪ್ಪದೆ, ಅದನ್ನು ಪುನರ್ ಪರಿಶೀಲಿಸುವಂತೆ ಸೂಚಿಸಿದೆ. 15ನೇ ಹಣಕಾಸು ಆಯೋಗದ ಶಿಫಾರಸನ್ನು ಒಪ್ಪಿ 2020-21ನೇ ಸಾಲಿನಲ್ಲಿ ಕರ್ನಾಟಕಕ್ಕೆ ಸುಮಾರು 5,495 ಕೋಟಿ ರೂ. ವಿಶೇಷ ಅನುದಾನ ನೀಡಬೇಕು. ಜತೆಗೆ ಕೇಂದ್ರೀಯ ತೆರಿಗೆ ಪಾಲಿನಲ್ಲಿ ಕರ್ನಾಟಕದ ಮೊತ್ತ ಕಡಿಮೆಯಾಗಿದ್ದು, ಹೆಚ್ಚುವರಿ ಅನುದಾನ ನೀಡಬೇಕು ಎಂದು ಕೋರಿ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆದಿದೆ. ಹಾಗೆಯೇ 15ನೇ ಹಣಕಾಸು ಆಯೋಗವು 2021ರಿಂದ 2025ರ ವರೆಗಿನ ಅವಧಿಗೆ ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಗಳ ಪಾಲು ನಿಗದಿಪಡಿಸುವ ಮಾನದಂಡ ಬದಲಾವಣೆಗೆ ಕ್ರಮ ಕೈಗೊಳ್ಳುವಂತೆಯೂ ಪ್ರಸ್ತಾಪಿಸಲು ಚಿಂತನೆ ನಡೆದಿದೆ ಎಂದು ಸರಕಾರದ ಮೂಲಗಳು ಹೇಳಿವೆ. ವರವಾಗುವ ಬದಲು ಶಾಪ!
ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಗಳಿಗೆ ಪಾಲಿನ ಮೊತ್ತ ನಿಗದಿಗೆ ಹಲವು ಮಾನದಂಡ ಅನುಸರಿಸಲಾಗುತ್ತದೆ. ತಲಾದಾಯ, ಜನಸಂಖ್ಯೆ, ಅರಣ್ಯ ಪ್ರದೇಶ ವಿಸ್ತೀರ್ಣ ಇತ್ಯಾದಿ ಅಂಶಗಳು ಪ್ರಮುಖ. ತಲಾದಾಯ ಹೆಚ್ಚಿರುವ ರಾಜ್ಯಗಳಿಗೆ ಕಡಿಮೆ, ಕಡಿಮೆ ಇರುವ ರಾಜ್ಯಗಳಿಗೆ ಹೆಚ್ಚಿನ ಪಾಲು ನಿಗದಿಯಾಗುತ್ತದೆ. ಹಾಗೆಯೇ ಜನಸಂಖ್ಯೆ ಹೆಚ್ಚು ಇರುವ ರಾಜ್ಯಗಳಿಗೆ ಪಾಲಿನ ಮೊತ್ತವೂ ಅಧಿಕ. ಹಾಗಾಗಿ ಉತ್ತಮ ತಲಾದಾಯ ಮತ್ತು ಜನಸಂಖ್ಯೆ ನಿಯಂತ್ರಣವೂ ಆಶಾದಾಯಕವಾಗಿರುವುದು ಕರ್ನಾಟಕಕ್ಕೆ ಈ ವಿಚಾರದಲ್ಲಿ ಶಾಪವಾಗಿ ಪರಿಣಮಿಸಿದೆ. ರಾಜ್ಯಗಳು ಪಡೆಯುವ ಪಾಲಿನ ಮೊತ್ತವನ್ನು ಸರಿದೂಗಿಸಲು ಕರ್ನಾಟಕ ಸೇರಿದಂತೆ ತೆಲಂಗಾಣ, ಮಿಜೋರಾಂ ರಾಜ್ಯಗಳಿಗೆ ವಿಶೇಷ ಅನುದಾನ ನೀಡುವಂತೆ ಆಯೋಗ ಶಿಫಾರಸು ಮಾಡಿತ್ತು.