Advertisement

ನೆರೆಹಾನಿ ಗ್ರಾಮಗಳಿಗೆ ವಿಶೇಷ ಅನುದಾನ

02:20 PM Aug 23, 2019 | Team Udayavani |

ಕೊಳ್ಳೇಗಾಲ: ತಾಲೂಕಿನಲ್ಲಿ ನೆರೆ ಹಾವಳಿಗೊಳಗಾಗಿರುವ ಗ್ರಾಮಗಳನ್ನು ವಿಶೇಷ ಅನುದಾನ ಮಂಜೂರು ಮಾಡಿ ಮಾದರಿ ಗ್ರಾಮಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ವಿ.ಸೋಮಣ್ಣ ಹೇಳಿದರು.

Advertisement

ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದ ಹಾನಿ ಗೀಡಾದ ತಾಲೂಕಿನ ಮುಳ್ಳೂರು, ಹಳೆ ಅಣಗಳ್ಳಿ, ಹಳೆ ಹಂಪಾಪುರ, ದಾಸನಪುರ, ಎಡಕುರಿಯಾ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಂದ ಮನವಿ ಆಲಿಸಿ ಮಾತನಾಡಿದ ಅವರು, ಮಳೆ ಹಾನಿಗೆ ಸಿಲುಕಿ ತೊಂದರೆಗೀಡಾಗಿರುವ ಈ ಗ್ರಾಮಗಳನ್ನು ಆರು ತಿಂಗಳ ಒಳಗಾಗಿ ಮೂಲ ಸೌಕರ್ಯಗಳನ್ನು ಕಲ್ಪಿಸಿ ಅಭಿವೃದ್ಧಿಪಡಿಸಲಾಗುವುದು ಎಂದರು.

ವಿಶೇಷ ಪ್ಯಾಕೇಜ್‌ ನೀಡುವಂತೆ ಮನವಿ: ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿಗಳು ಕೂಡಲೇ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ನೆರೆ ಪೀಡಿತ ಗ್ರಾಮಗಳಿಗೆ ಖುದ್ದು ಭೇಟಿ ನೀಡಬೇಕೆಂದು ಸೂಚಿಸಿದ್ದರು. ಮುಖ್ಯಮಂತ್ರಿಗಳ ಆದೇಶದ ಮೇರೆಗೆ ನೆರೆ ಸಂತ್ರಸ್ತರಿಗೆ ಉಂಟಾಗಿರುವ ಹಾನಿಯನ್ನು ಸಂಗ್ರಹಿಸಿ ಕೂಡಲೇ ಮುಖ್ಯ ಮಂತ್ರಿಗಳಿಗೆ ನೀಡಿ, ವಿಶೇಷ ಪ್ಯಾಕೇಜ್‌ ನೀಡುವಂತೆ ಮನವಿ ಮಾಡಲಾಗುವುದೆಂದರು.

ಫ‌ಸಲು ನಾಶ: ಕೊಡಗು ಮತ್ತು ಕೇರಳದಲ್ಲಿ ಸುರಿದ ಮಳೆಯಿಂದಾಗಿ ಕೆಆರ್‌ಎಸ್‌ ಮತ್ತು ಕಬಿನಿ ಜಲಾಶ ಯಗಳಿಂದ ಹೆಚ್ಚು ನೀರು ಹರಿದು ಬಿಟ್ಟ ಪರಿಣಾಮ ತಾಲೂಕಿನ ಮುಳ್ಳೂರು, ಹಳೇ ಹಂಪಾಪುರ, ದಾಸನ ಪುರ, ಹಳೇ ಅಣಗಳ್ಳಿ, ಹರಳೆ, ಯಡಕುರಿಯ ಗ್ರಾಮ ಗಳಿಗೆ ನೀರು ನುಗ್ಗಿ ಹಲವಾರು ಮನೆಗಳು ನಾಶವಾಗಿದೆ ಮತ್ತು ರೈತರ ಸಾವಿರಾರು ಎಕರೆ ಜಮೀನುಗಳಲ್ಲಿ ಬೆಳೆದಿದ್ದ ಫ‌ಸಲು ನಾಶವಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ: ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ನೆರೆ ಸಂತ್ರಸ್ತರಿಗೆ ವಿವಿಧ ಸರ್ಕಾರಿ ವಿದ್ಯಾರ್ಥಿ ನಿಲಯ ಮತ್ತು ಶಾಲೆ ಹಾಗೂ ಕಲ್ಯಾಣ ಮಂಟಪಗಳಲ್ಲಿ ಪುನರ್‌ ವಸತಿ ಕೇಂದ್ರ ತೆರೆದು ಎಲ್ಲರ ರಕ್ಷಣೆ ಮಾಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಶಾಶ್ವತ ಪರಿಹಾರಕ್ಕೆ ಮನವಿ: ಪ್ರತಿ ವರ್ಷ ಪ್ರವಾಹ ಬಂದ ವೇಳೆ ಗ್ರಾಮಸ್ಥರು ತಮ್ಮ ಮನೆ ಮಠಗಳನ್ನು ಕಳೆದುಕೊಂಡು ಪುನರ್‌ ವಸತಿ ಕೇಂದ್ರಗಳಿಗೆ ತೆರಳು ವಂತಹ ಅವಾಂತರ ಸೃಷ್ಟಿಯಾಗಿದ್ದು, ಕೂಡಲೇ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಕೂಡಲೇ ಕಾವೇರಿ ನದಿ ತೀರದ ಗ್ರಾಮಗಳಿಗೆ ಪ್ರವಾಹದ ನೀರು ನುಗ್ಗದಂತೆ ತಡೆಯಲು ತಡೆಗೋಡೆಗಳನ್ನು ನಿರ್ಮಾಣ ಮಾಡಿ ಪ್ರವಾಹದಿಂದ ರಕ್ಷಣೆ ಮಾಡಲಾಗುವುದೆಂದರು.

ವಿಶೇಷ ಪರಿಹಾರ: ಪ್ರವಾಹಕ್ಕೆ ಸಿಲುಕಿ ಸಾವಿರಾರು ಎಕರೆ ಜಮೀನು ನೀರಿನಲ್ಲಿ ಕೊಚ್ಚಿಹೋಗಿದ್ದು, ರೈತರು ಹೆದರಬಾರದು. ಸರ್ಕಾರ ನಿಮ್ಮ ಜೊತೆಗೆ ಇದ್ದು, ಬೆಳೆ ನಷ್ಟವನ್ನು ಅಧಿಕಾರಿಗಳಿಂದ ಮಾಹಿತಿ ಪಡೆದ ಕೂಡಲೇ ಮುಖ್ಯಮಂತ್ರಿಗಳು ವಿಶೇಷ ಪರಿಹಾರ ಘೋಷಣೆ ಮಾಡುವರು ಎಂದು ಹೇಳಿದರು.

ಮುಖ್ಯಮಂತ್ರಿಗಳ ಘೋಷಣೆ: ಈಗಾಗಲೇ ಮುಖ್ಯ ಮಂತ್ರಿಗಳು ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ವರಿಗೆ 5 ಲಕ್ಷ ಘೋಷಣೆ ಮಾಡಿದ್ಧಾರೆ. ಅದರ ಜೊತೆಗೆ ಕೇಂದ್ರ ಸರ್ಕಾರ 2 ಲಕ್ಷ ರೂ.ಗಳನ್ನು ಮನೆ ನಿರ್ಮಾಣಕ್ಕೆ ನೀಡಲಿದ್ದು, ಒಟ್ಟು 7 ಲಕ್ಷದಲ್ಲಿ ಉತ್ತಮ ಮನೆಯೊಂದನ್ನು ನಿರ್ಮಾಣ ಮಾಡಿಕೊಳ್ಳಬೇಕೆಂದು ಗ್ರಾಮಸ್ಥರಿಗೆ ಹೇಳಿದರು.

ದುರಸ್ತಿಯಾದ ಮನೆಗಳಿಗೆ 1 ಲಕ್ಷ ಮತ್ತು ನೊಂ ದವರಿಗೆ ತಲಾ 10 ಸಾವಿರ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದು, ಕೂಡಲೇ ಪರಿಹಾರದ ಜೊತೆಗೆ ದೈನಂದಿನ ಸಾಮಾಗ್ರಿಗಳನ್ನು ಪ್ಯಾಕೇಜ್‌ ರೂಪದಲ್ಲಿ ನೀಡಲಾಗುವುದು. ಪ್ರವಾಹ ಎದುರಿಸಲು ಸರ್ಕಾರ ಬದ್ಧವಾಗಿದ್ದು, ಗ್ರಾಮಸ್ಥರು ಧೃತಿಗೆಡ ಬಾರದು. ಮತ್ತು ಜಿಲ್ಲಾಡಳಿತ ಕೈಗೊಳ್ಳುವ ಕ್ರಮಕ್ಕೆ ಪ್ರೋತ್ಸಾಹ ನೀಡಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಪ್ರವಾಹ ಹಾನಿ ತಡೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಜಿಲ್ಲಾಧಿಕಾರಿಗಳು ಹೆಚ್ಚು ಕ್ರಮ ವಹಿಸಬೇ ಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, 6 ತಿಂಗಳ ಒಳಗಾಗಿ ಅಭಿವೃದ್ಧಿಗೊಳ್ಳ ಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಹಾರ ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡಬಾರದು: ನೆರೆ ಪೀಡಿತ ಗ್ರಾಮಸ್ಥರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಬಾರದು ಮತ್ತು ಮಧ್ಯವರ್ತಿಗಳ ಹಾವಳಿಗಳನ್ನು ತಡೆದು ನೆರವಾಗಿ ನಿರಾಶ್ರಿತರನ್ನು ಗುರುತಿಸಿ ಪ್ರತಿಯೊಬ್ಬರಿಗೆ ಸರ್ಕಾರ ನೀಡುವ ಪರಿಹಾರವನ್ನು ಖುದ್ದು ನೀಡಬೇಕು. ಇದರಲ್ಲಿ ತಾರತಮ್ಯವಾದರೇ ಅಧಿಕಾರಿಗಳೇ ಹೊಣೆಗಾರರಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಾಸಕರಾದ ಎನ್‌.ಮಹೇಶ್‌, ನಿರಂಜನ್‌ಕುಮಾರ್‌, ಮಾಜಿ ಶಾಸಕ ಜಿ.ಎನ್‌.ನಂಜುಂಡಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಜಿಪಂ ಸದಸ್ಯರಾದ ನಾಗರಾಜು, ಇಷರತ್‌ ಬಾನು, ತಾಪಂ ಉಪಾದ್ಯಕ್ಷೆ ಲತಾ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಹೆಚ್ಚುವರಿ ಜಿಲ್ಲಾದಿಕಾರಿ ಆನಂದ್‌, ಜಿಪಂ ಸಿಇಒ ಲತಾ ಕುಮಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆನಂದ್‌ಕುಮಾರ್‌, ಜಿಲ್ಲಾ ಆಹಾರ ನಿರೀಕ್ಷಕ ರಾಚಪ್ಪ, ಕಬಿನಿ ಇಇ ರಘು, ಡಿವೈಎಸ್ಪಿ ನವೀನ್‌ಕುಮಾರ್‌, ಸರ್ಕಲ್ ಇನ್ಸ್‌ಪೆಕ್ಟರ್‌ ಶ್ರೀಕಾಂತ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next