Advertisement

ಬಯಲು ಶೌಚ ನಿಲ್ಲಿಸಿದ್ರೆ ವಿಶೇಷ ಅನುದಾನ

12:00 PM Nov 12, 2019 | Team Udayavani |

ಮುಧೋಳ: ಮತಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಜನರು, ಸ್ವಂತ ಶೌಚಾಲಯ ಹೊಂದಿದರೂ ಅವುಗಳನ್ನು ಬಳಕೆ ಮಾಡುತ್ತಿಲ್ಲ. ಶೌಚಾಲಯ ಬಳಸಿ, ಬಯಲು ಮಲವಿಸರ್ಜನೆ ಸಂಪೂರ್ಣ ತಡೆಗಟ್ಟುವ ಹಳ್ಳಿಗಳ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

Advertisement

ನಗರದ ತಾಲೂಕು ಪಂಚಾಯತ್‌ ಸಭಾ ಭವನದಲ್ಲಿ ಸೋಮವಾರ ನಡೆದ 2ನೇ ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲೂ ಸ್ವಚ್ಛತೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಶೌಚಗೃಹ ನಿರ್ಮಾಣ ಕಾರ್ಯದಲ್ಲಿ ಅಧಿಕಾರಿಗಳು ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿದ್ದಾರೆ. ಆದರೆ, ಸಾರ್ವಜನಿಕರು ಅವುಗಳನ್ನು ಬಳಕೆ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ. ಇದರಿಂದ ಬಯಲುಮುಕ್ತ ಶೌಚ ಬರೀ ಕಾಗದದ ಮೇಲಿನ ಸಾಧನೆಯಂತಾಗಿದೆ.ಅಧಿಕಾರಿಗಳು, ಸಾರ್ವಜನಿಕರಲ್ಲಿ ಶೌಚಗೃಹ ಬಳಕೆ ಮಾಡುವಂತೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು. ಈ ವರ್ಷದಲ್ಲಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮವನ್ನು ಸಂಪೂರ್ಣ ಶೌಚಮುಕ್ತ ಮಾಡಿದರೆ ಆ ಗ್ರಾಮಕ್ಕೆ ವಿಶೇಷ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.

ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಎನ್‌.ವೈ. ಬಸರಿಗಿಡದ ಮಾತನಾಡಿ, ತಾಲೂಕಿನಲ್ಲಿ  2012ರಲ್ಲಿ ನಡೆಸಿದ ಪ್ರಾಥಮಿಕ ಸರ್ವೇ ಪ್ರಕಾರ 37,692 ಕುಟುಂಬಗಳಿಗೆ ಶೌಚಗೃಹವಿರಲಿಲ್ಲ. 2019-20ರ ಅವಧಿಗೆ ಎಲ್ಲ ಕುಟುಂಬಗಳಿಗೆ ಶೌಚಗೃಹ ನಿರ್ಮಿಸಲಾಗಿದೆ. ಸರ್ವೇಯಿಂದ ವಂಚಿತವಾಗಿರುವ ಕುಟುಂಬಗಳಿಗೆ ಶೌಚಗೃಹ ನಿರ್ಮಿಸಿಕೊಡುವ ಕಾರ್ಯ ಸಾಗಿದೆ ಎಂದು ಹೇಳಿದರು. 87ಸಮುದಾಯ ಶೌಚಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಶೌಚಗೃಹ ಬಳಕೆ ಮಾಡಿಕೊಳ್ಳುವಂತೆ ಮನವೊಲಿಸಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

2013-14ರಿಂದ 2017-18ರವರೆಗೆ ವಿವಿಧ ವಸತಿಯೋಜನೆಯಡಿ ಒಟ್ಟು 163 ಮನೆಗಳು ಬ್ಲಾಕ್‌ ಆಗಿವೆ. ಅದೇ ರೀತಿ 488 ಫಲಾನುಭವಿಗಳಿಗೆ ಇದೂವರೆಗೂ ಅನುದಾನ ಬಿಡುಗಡೆಯಾಗಿಲ್ಲ ಎಂದು ತಿಳಿಸಿದರು. ಕೃಷಿ ಇಲಾಖೆ ಅಧಿಕಾರಿ ಪಿ.ವಿ. ದಾಸರ ಮಾತನಾಡಿ, ಮಳೆ ಹಾಗೂ ಪ್ರವಾಹದಿಂದ 9247 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. 8346 ಹೆಕ್ಟೇರ್‌ ಕಬ್ಬು, 832 ಗೋವಿನಜೋಳ, 98 ಹೆಕ್ಟೇರ್‌ ಸೋಯಾಬಿನ್‌ ಹಾನಿಗೀಡಾಗಿದೆ. 2175 ರೈತರ ಖಾತೆಗೆ ಅಂದಾಜು 4 ಕೋಟಿ ರೂ.ಬೆಳೆ ಹಾನಿ ಪರಿಹಾರ ಜಮಾ ಆಗಿದೆ ಎಂದು ತಿಳಿಸಿದರು.

ಹೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ಜಿ.ಸಿ.ಲೋಣಿ ಮಾತನಾಡಿ, ಮುಧೋಳ ವ್ಯಾಪ್ತಿಯಲ್ಲಿ ಪ್ರವಾಹದಿಂದ 767 ವಿದ್ಯುತ್‌ ಪರಿವರ್ತಕಗಳು ಹಾನಿಯಾಗಿದ್ದು, ಅವುಗಳಲ್ಲಿ 675 ಪರಿವರ್ತಕ ಬದಲಾಯಿಸಲಾಗಿದೆ. ಇನ್ನುಳಿದ ಪರಿವರ್ತಕ ಶೀಘ್ರ ಬದಲಾವಣೆ ಮಾಡಲಾಗುವುದು ಎಂದರು.

Advertisement

ಜಿಪಂ ಸದಸ್ಯ ಭೀಮನಗೌಡ ಪಾಟೀಲ ಮಾತನಾಡಿ, ಮಾಚಕನೂರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದೂವರೆಗೂ ಆರಂಭಗೊಂಡಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು. ಈ ವೇಳೆ ಮಾತನಾಡಿದ ಡಿಸಿಎಂ ಕಾರಜೋಳ, ಕುಡಿಯುವ ನೀರಿನ ಘಟಕವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್‌ ಸದಸ್ಯ ಮಹಾಂತೇಶ ಉದಪುಡಿ ಮಾತನಾಡಿ, ಲೋಕಾಪುರದ ಸರ್ಕಾರ ಆಸ್ಪತ್ರೆಯಲ್ಲಿ ಹೊರ ಆವರಣದಲ್ಲಿಯೇ ಶವಗಳ ಪಂಚನಾಮೆ ಮಾಡುವ ಪರಿಸ್ಥಿತಿಯಿದೆ. ಅಧಿಕಾರಿಗಳ ಈ ಬಗ್ಗೆ ಗಮನ ಸೆಳೆದದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು. ಈ ವೇಳೆ ಮಾತನಾಡಿದ ಕಾರಜೋಳ, ಸಂಬಂಧಿಸಿದ ಅಧಿಕಾರಿಗಳು ಅಲ್ಲಿನ ಸಮಸ್ಯೆ ಬಗೆಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಬಿಇಒ ವಿಠಲ ದೇವಣಗಾಂವ ಮಾತನಾಡಿ, ನೆರೆಯಿಂದಾಗಿ ತಾಲೂಕಿನಲ್ಲಿ 41 ಶಾಲೆಗಳಲ್ಲಿನ ಕೊಠಡಿಗಳ ದುರಸ್ತಿಯಾಗಬೇಕಿದೆ. ಎರಡು ದಿನಗಳ ಹಿಂದೆ ಅನುದಾನ ಬಿಡುಗಡೆಯಾಗಿದ್ದು, ಕೂಡಲೇ ದುರಸ್ತಿ ಕಾರ್ಯ ಆರಂಭಿಸಲಾಗುವುದು ಎಂದರು.

ಈ ವೇಳೆ ಮಾತನಾಡಿದ ಕಾರಜೋಳ, ಅನುದಾನ ಬಿಡುಗಡೆಯಾದರೂ ಕಾರ್ಯ ವಿಳಂಬ ಮಾಡುವುದು ಸರಿಯಲ್ಲ. ಕೂಡಲೇ ದುರಸ್ತಿ ಕಾರ್ಯ ಆರಂಭಿಸುವಂತೆ ಸೂಚಿಸಿದರು.

ಸಭೆಯಲ್ಲಿ ತಹಶೀಲ್ದಾರ್‌ ಎಸ್‌.ಬಿ. ಬಾಡಗಿ, ನಗರಸಭೆ ಪೌರಾಯುಕ್ತ ಎಸ್‌.ಎಂ. ಪಾಟೀಲ, ಸಿಪಿಐ ಎಚ್‌.ಆರ್‌. ಪಾಟೀಲ, ಅಶೋಕ ಘೋರ್ಪಡೆ, ಆರ್‌.ಎಫ್‌.ಒದೇಸನೂರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next