ಬೆಂಗಳೂರು: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮೀಸಲಿಡುವ ಅನುದಾನವನ್ನು ಮುಂದಿನ ಬಜೆಟ್ ನಲ್ಲಿ ಮೂರು ಸಾವಿರ ಕೋಟಿ ರೂ. ಗಳಿಗೆ ಏರಿಸಲಿದ್ದೇವೆ. ಹಾಗೆಯೇ ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಲಿದ್ದೇವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
ನಗರದಲ್ಲಿ ಸೋಮವಾರ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮುಂಬೈ ಕರ್ನಾಟಕ ಎಂಬ ಹೆಸರನ್ನು ಕಿತ್ತೂರು ಕರ್ನಾಟಕವಾಗಿಸಿದ್ದೇವೆ. ಈ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಜತೆಗೆ ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಲಿದ್ದೇವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಈಗ ನೀಡುತ್ತಿರುವ ಅನುದಾನದ ಮೊತ್ತವನ್ನು ಮೂರು ಸಾವಿರ ಕೋಟಿ ರೂ.ಗಳಿಗೆ ಹೆಚ್ಚಳ ಮಾಡಲಿದ್ದೇವೆ ಎಂದು ಹೇಳಿದರು.
ನಮ್ಮ ಚಿಂತನೆ, ಅನುಷ್ಠಾನ ಎಲ್ಲವೂ ಕನ್ನಡದಲ್ಲಿ ಆಗಬೇಕು ಮತ್ತು ಈ ಮೂಲಕ ನಮ್ಮ ಭವ್ಯ ಭವಿಷ್ಯಕನ್ನಡದಲ್ಲೇ ರೂಪುಗೊಳ್ಳಬೇಕು. ಕರ್ನಾಟಕದ ರಾಜ್ಯೋತ್ಸವ, ಕನ್ನಡಿಗರ ಜನೋತ್ಸವ ಆಗಬೇಕು. ರಾಜ್ಯದ ನಿರ್ಮಾಣ ಮಾತ್ರವಲ್ಲ, ರಾಜ್ಯದಲ್ಲಿರುವ ಪ್ರತಿಯೊಬ್ಬರ ಬದುಕು ಉತ್ತಮಗೊಳ್ಳಬೇಕು. ಆಗ ನಾಡು ನಿತ್ಯೋತ್ಸವವಾಗುತ್ತದೆ. ಕನ್ನಡ ರಾಜ್ಯೋತ್ಸವದಿಂದ ಕನ್ನಡಿಗರ ನಿತ್ಯೋತ್ಸವ ಆಗಬೇಕು ಎಂದು ಆಶಿಸಿದರು.
ಕರ್ನಾಟಕದಲ್ಲಿನ ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಬೇಕಾದ ಎಲ್ಲ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮೈಸೂರು ಭಾಗದ ಅಭಿವೃದ್ಧಿ, ಕೃಷ್ಣೆ, ಕಾವೇರಿ ಜಲಾನಯನ ಪ್ರದೇಶಗಳ ಅಭಿವೃದ್ಧಿಗೂ ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದು ವಿವರಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಜತೆಗೆ ಕನ್ನಡದ ಕಲಿಕೆಗೆ ಆದ್ಯತೆ ಹಾಗೂ ಕನ್ನಡಿಗರಿಗೆ ಉದ್ಯೋಗ ಹೆಚ್ಚಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಉದ್ಯೋಗ ನೀತಿಯಲ್ಲೂ ಕೆಲ ಬದಲಾವಣೆ ತರಲಿದ್ದೇವೆ. ಕೌಶಲ್ಯ ಹಾಗೂ ಅರೆಕೌಶಲ್ಯ ಹೊಂದಿರುವ ಶೇ.75ರಷ್ಟು ಕನ್ನಡಿಗರಿಗೆ ಖಾಸಗಿ, ಸರ್ಕಾರಿ ಹಾಗೂ ಅರೆ ಸರ್ಕಾರಿ ವಲಯದಲ್ಲಿ ಉದ್ಯೋಗ ನೀಡಲು ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದರು.