ಕಾಪು: ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಧಾರ್ಮಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾದ ವಾತಾವರಣವಿದೆ. ಈ ಮೂಲಕ ಕಾಪು ತಾಲೂಕನ್ನು ಮಾದರಿಯಾಗಿ ಪರಿವರ್ತಿಸಲು ಸಾಧ್ಯ ವಿದೆ. ಆ ಕಾರಣದಿಂದಾಗಿ ರಾಜಕೀಯ ರಹಿತವಾದ ಚಿಂತನೆಯೊಂದಿಗೆ ಇಲ್ಲಿನ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡು ವುದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ಮೂಳೂರಿಗೆ ಮುಖ್ಯಮಂತ್ರಿಗಳು ಆಗಮಿಸಿದ್ದ ಸಂದರ್ಭ ಕಾಪು ಅಭಿವೃದ್ಧಿ ಸಮಿತಿ ಮತ್ತು ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ವತಿಯಿಂದ ಜಂಟಿಯಾಗಿ ನೀಡಲಾದ ಮನವಿಯನ್ನು ಸ್ವೀಕರಿಸಿ, ಜಂಟಿ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಅಭಿವೃದ್ಧಿಯ ಕುರಿತಾಗಿ ಚರ್ಚೆ ನಡೆಸಿ ಮಾತನಾಡಿದರು.
ಸಂಪೂರ್ಣ ಪುನರ್ ನಿರ್ಮಾಣ ಗೊಳ್ಳುತ್ತಿರುವ ಕಾಪು ಹೊಸ ಮಾರಿಗುಡಿಯ ಅಭಿವೃದ್ಧಿ ಯೋಜನೆಗಳ ಕುರಿತಾಗಿ ಮನವಿ ನೀಡಿದ ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ನೇತೃತ್ವದಲ್ಲಿ ಹೊಸ ಮಾರಿಗುಡಿಯ ಗರ್ಭಗುಡಿಗೆ ತಗಲುವ 4.99 ಕೋಟಿ ರೂ. ಅನುದಾನವನ್ನು ರಾಜ್ಯ ಸರಕಾರದಿಂದ ಅನುದಾನ ದೊರಕಿಸಿಕೊಡುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಮನವಿ ನೀಡಲಾಯಿತು.
ಉಡುಪಿ ಜಿಲ್ಲಾ ಪ್ರವಾಸೋದ್ಯಮ ಪ್ರಕೋಷ್ಠ ಮತ್ತು ಕಾಪು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮನೋಹರ್ ಎಸ್. ಶೆಟ್ಟಿ ಅವರು ಕಾಪು ಬೀಚ್ ಸೇರಿದಂತೆ ಕಾಪು ತಾಲೂಕಿನಲ್ಲಿರುವ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ರಾಜ್ಯ ಸರಕಾರದ ಸಹಕಾರದ ಅಗತ್ಯತೆ ಮತ್ತು ಅನಿವಾರ್ಯತೆಯ ಬಗ್ಗೆ ವಿವರಿಸಿ, ಪ್ರವಾಸೋದ್ಯಮ ಆಭಿವೃದ್ಧಿಗೆ ಇರುವ ಅವಕಾಶಗಳ ಕುರಿತಾದ ಕಿರುಹೊತ್ತಗೆಯನ್ನು ಮುಖ್ಯಮಂತ್ರಿಗೆ ನೀಡಿದರು.
ಕಾಪು ಶ್ರೀ ಹೊಸ ಮಾರಿಗುಡಿ ಮತ್ತು ಕಾಪು ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತಾದ ಮನವಿ ಸ್ವೀಕರಿಸಿದ ಅವರು ಇಲ್ಲಿನ ವಾತಾವರಣ ಧಾರ್ಮಿಕ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಿದೆ. ಸುಂದರ ಮತ್ತು ಶುದ್ಧವಾಗಿರುವ ಬೀಚ್‌ನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಭಿವೃದ್ಧಿಗೊಳಿಸುವ ಮೂಲಕ ದೇಶ – ವಿದೇಶಗಳ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಿದೆ. ಪ್ರವಾಸೀ ಕ್ಷೇತ್ರಗಳ ವೀಕ್ಷಣೆಗೆ ಬರುವ ಪ್ರವಾಸಿಗರನ್ನು ಸೆಳೆಯ ಬಲ್ಲಂತಹ ಧಾರ್ಮಿಕ ಕ್ಷೇತ್ರಗಳೂ ಇಲ್ಲಿರುವುದರಿಂದ ಧಾರ್ಮಿಕ ಪ್ರವಾಸಕ್ಕೂ ಪೂರಕವಾಗಿದೆ ಎಂದವರು ತಿಳಿಸಿದರು.
ಈ ಕುರಿತಾಗಿ ಪ್ರವಾಸೋದ್ಯಮ ಸಚಿವ ಸಾ. ರಾ. ಮಹೇಶ್ ಅವರೊಂದಿಗೂ ಚರ್ಚೆ ನಡೆಸಿದ ಅವರು ಪ್ರವಾಸೋದ್ಯಮ ಪ್ರಕೋಷ್ಠ ಸಮಿತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಜತೆಗೆ ಬೆಂಗಳೂರು ಅಥವಾ ಕರಾವಳಿಯಲ್ಲೇ ವಿಶೇಷ ಸಭೆ ನಡೆಸಿ, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ಅರಸೀಕೆರೆ ಶಾಸಕ ಕೆ. ಎಂ. ಶಿವಲಿಂಗೇ ಗೌಡ, ಎಂ.ಎಲ್.ಸಿ.ಗಳಾದ ಎಸ್.ಎಲ್. ಭೋಜೇ ಗೌಡ, ಎನ್. ಅಪ್ಪಾಜಿ ಗೌಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕಾಪು ಶ್ರೀ ಹೊಸ ಮಾರಿಗುಡಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾಪು ಅಭಿವೃದ್ಧಿ ಸಮಿತಿ ಪ್ರವಾಸೋದ್ಯಮ ಪ್ರಕೋಷ್ಠದ ಅಧ್ಯಕ್ಷ ಮನೋಹರ್ ಎಸ್. ಶೆಟ್ಟಿ, ಗೌರವ್ ಶೇಣವ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕಾರ್ಯಾಧ್ಯಕ್ಷ ವಾಸುದೇವ ರಾವ್, ಜೆಡಿಎಸ್ ಮುಖಂಡರಾದ ಜಯರಾಮ ಆಚಾರ್ಯ, ದಿಲ್ಲೇಶ್ ಶೆಟ್ಟಿ, ರಝಾಕ್ ಉಚ್ಚಿಲ, ವೆಂಕಟೇಶ್, ಮಹಮ್ಮದ್ ರಫೀಕ್, ರವಿರಾಜ್ ಸಾಲ್ಯಾನ್, ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು.