Advertisement

Special Gift! ನಿವೃತ್ತಿ ದಿನ ಎಸಿ ಕಾರಿನಲ್ಲಿ ಮನೆಗೆ ತೆರಳಿದ ಡಿ ದರ್ಜೆ ನೌಕರ!

08:28 PM Jul 31, 2023 | Team Udayavani |

ಸಾಗರ: ತಮ್ಮ ಅಧಿಕಾರ ಕಳೆದುಕೊಂಡ ಜನಪ್ರತಿನಿಧಿಗಳು ಅಂತಿಮವಾಗಿ ಸರ್ಕಾರಿ ಸೌಲಭ್ಯಗಳನ್ನು ಬಿಟ್ಟು ಕೊನೆಯ ದಿನ ತಮ್ಮ ವಾಹನ, ವ್ಯವಸ್ಥೆಯಲ್ಲಿ ಮನೆಗೆ ಮರಳುವುದನ್ನು ನೋಡುವುದು ಸಾಮಾನ್ಯವಾಗಿರುವಾಗ ಸಾಗರದ ಉಪವಿಭಾಗೀಯ ಕಚೇರಿಯಲ್ಲಿ ಕೆಲಸ ಮಾಡುವ ಡಿ ದರ್ಜೆ ನೌಕರರೊಬ್ಬರು ತಮ್ಮ ವೃತ್ತಿಯ ಕೊನೆಯ ದಿನದ ಕೆಲಸ ಮುಗಿಸಿ ಉಪವಿಭಾಗೀಯ ಅಧಿಕಾರಿಗಳ ಅಧಿಕೃತ ಕಾರಿನಲ್ಲಿ ಎಸಿ ಕುಳಿತುಕೊಳ್ಳುವ ಮುಂದುಗಡೆಯ ಸೀಟಿನಲ್ಲಿ ಕುಳಿತು ಮನೆಗೆ ತೆರಳಿದ ಅಪರೂಪದ ದೃಶ್ಯ ಸೋಮವಾರ ಸಾಗರದಲ್ಲಿ ಕಾಣಸಿಕ್ಕಿತು.

Advertisement

ಇಂತದೊಂದು ಗೌರವ ಸಿಗಲು ಕಾರಣರಾದ ಸಾಗರ ಉಪವಿಭಾಗದ ಸಹಾಯಕ ಆಯುಕ್ತೆ ಪಲ್ಲವಿ ಸಾತೇನಹಳ್ಳಿ ಸ್ವತಃ ತಮ್ಮದೇ ಕಾರಿನಲ್ಲಿ ಹಿಂದೆ ಕುಳಿತು ನಿವೃತ್ತ ನೌಕರನ ಮನೆಯವರೆಗೂ ತೆರಳಿ ಗಮನ ಸೆಳೆದರು.

ಎಸಿ ಕಚೇರಿಯಲ್ಲಿ ದಫೇದಾರ್ ಆಗಿ ನಿವೃತ್ತರಾದ ಕೃಷ್ಣಪ್ಪ ಅವರನ್ನು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ತಿಂಗಳ ಕೊನೆಯ ದಿನವಾದ ಸೋಮವಾರ ಎಸಿ ಕಚೇರಿಯಲ್ಲಿ ಕೃಷ್ಣಪ್ಪ ಅವರ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಕಚೇರಿಯ ನೌಕರ ವರ್ಗದ ಮಂಜುಳಾ ಭಜಂತ್ರಿ, ಕಲ್ಪಪ್ಪ ಮೆಣಸಿನಹಾಳ್, ದೇವರಾಜ್, ಪ್ರಶಾಂತ್, ಗುರು, ಮಂಜುನಾಥ್ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ನಿವೃತ್ತಿಯ ಹಾರ ತುರಾಯಿ, ಉಡುಗೊರೆಗಳನ್ನು ಪಡೆದು ಮನೆಗೆ ಮರಳಲು ಯೋಚಿಸುತ್ತಿದ್ದ ಕೃಷ್ಣಪ್ಪ ಅವರಿಗೆ ಅಚ್ಚರಿ ಕಾದಿತ್ತು. ಸ್ವತಃ ಎಸಿ ಪಲ್ಲವಿ ತಮ್ಮ ಕಾರಿನಲ್ಲಿ ಮನೆಗೆ ತೆರಳುವ ಅವಕಾಶವನ್ನು ಕೃಷ್ಣಪ್ಪ ಅವರಿಗೆ ನೀಡಿ ಕಾರಿನಲ್ಲಿ ಕುಳಿತುಕೊಳ್ಳಲು ಆಹ್ವಾನಿಸಿದರು.

ಸಂಕೋಚದಿಂದಲೇ ಕಾರಿನಲ್ಲಿ ಡ್ರೈವರ್ ಪಕ್ಕದ ಸೀಟ್‌ನಲ್ಲಿ ಕುಳಿತ ಕೃಷ್ಣಪ್ಪ ಮನೆಗೆ ತಲುಪಿದಾಗ ಎಸಿಯವರನ್ನು ಆಹ್ವಾನಿಸಿದರು. ಎಸಿ ಪಲ್ಲವಿ ಮನೆಗೂ ತೆರಳಿ ಕೆಲಕಾಲ ಮನೆಯವರನ್ನು ವಿಚಾರಿಸಿ ವಾಪಾಸಾದರು. ಈ ವೇಳೆ ಸ್ವತಃ ಎಸಿ ವಿದಾಯದ ಪಯಣದಲ್ಲಿ ಬಂದಿದ್ದನ್ನು ಮನೆಯವರು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ಹರ್ಷಿಸಿದರು. ಹೃದಯಸ್ಪರ್ಶಿ ಬೀಳ್ಕೊಡಿಗೆಯನ್ನು ಡಿ ದರ್ಜೆ ನೌಕರ ಎಂಬ ಅಲಕ್ಷ್ಯ ತೋರದೆ ವಿಶೇಷ ಮನ್ನಣೆ ನೀಡಿರುವುದು ಅಪರೂಪದ ವರ್ತನೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next