ತುಮಕೂರು: ಮಹಿಳೆಯರು ಮತ್ತು ಮಕ್ಕಳು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಕುರಿತು ಪೊಲೀಸ್ ಇಲಾಖೆಯಿಂದ ತುರ್ತು ಸೇವೆ ಒದಗಿಸುವ ಉದ್ದೇಶದಿಂದ ವಿಶೇಷ ಪಡೆ ರಚಿಸಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಶರತ್ಚಂದ್ರ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿ ವಿಶೇಷ ಕಲ್ಪತರು ಪಡೆಯ ಕಾರ್ಯಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
40 ಮಹಿಳಾ ಸಿಬ್ಬಂದಿ: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ಸಲುವಾಗಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಜಿಲ್ಲಾ ಪೊಲೀಸ್ ಇಲಾಖೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ 40 ಮಹಿಳಾ ಸಿಬ್ಬಂದಿ ಒಳಗೊಂಡ ವಿಶೇಷ ಕಲ್ಪತರು ಪಡೆ ರಚಿಸಿದೆ. ಜು.26ರಿಂದ ಆ.7ರವರೆಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಪ್ರಶಿಕ್ಷಣಾರ್ಥಿಗಳಿಗೆ ದೈಹಿಕ, ಮಾನಸಿಕ ಮತ್ತು ಆರೋಗ್ಯ ಬಲಪಡಿಸುವ ನಿಟ್ಟಿನಲ್ಲಿ 6 ದಿನ ಯೋಗ ತರಬೇತಿ, 7 ದಿನ ಕರಾಟೆ ಮತ್ತು 3 ದಿನ ತುಮಕೂರು ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕ ಕಾರ್ಯಕ್ರಮದಲ್ಲಿ ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ತರಬೇತಿ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ವಿವರಿಸಿದರು.
ತಜ್ಞರಿಂದ ತರಬೇತಿ: ಉಳಿದ 10 ದಿನಗಳ ನಡೆದ ತರಬೇತಿಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಜಿಲ್ಲೆಯ ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್‌ಗಳಿಂದ ಮತ್ತು ಕಾನೂನು ತಜ್ಞರಿಂದ ಮಹಿಳೆಯರ ಮತ್ತು ಮಕ್ಕಳ ವಿರುದ್ಧದ ಪ್ರಕರಣಗಳ ಬಗ್ಗೆ ಕಾನೂನು ತರಗತಿ ನಡೆಸಲಾಯಿತು ಎಂದರು.
ಎಂಪ್ರಸ್, ಸಿದ್ದಗಂಗಾ ಮಹಿಳಾ ಕಾಲೇಜು, ವಿದ್ಯಾನಿಕೇತನ ಕಾಲೇಜು, ಸರ್ವೋದಯ ಕಾಲೇಜುಗಳಿಗೆ ಭೇಟಿ ನೀಡಿ ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸುರಕ್ಷತೆ ಹಾಗೂ ಅಪರಾಧಗಳಿಂದ ರಕ್ಷಿಸಿಕೊಳ್ಳುವ ಹಾಗೂ ಕಾನೂನಿನ ಅರಿವು ಮೂಡಿಸಲಾಯಿತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ, ಸಿಪಿಐ ಪಾರ್ವತಮ್ಮ, ಪಿಎಸ್‌ಐಗಳಾದ ವಿಜಯಲಕ್ಷ್ಮೀ, ಮಹಾಲಕ್ಷ್ಮಮ್ಮ, ಕುಮಾರಿ ಇದ್ದರು.