Advertisement

ಹಬ್ಬಕ್ಕಾಗಿ ಖಾರ, ಸಿಹಿ ಖಾದ್ಯಗಳು

08:45 PM Aug 29, 2019 | mahesh |

ಶ್ರಾವಣ, ಭಾದ್ರಪದ, ಆಶ್ವಯುಜ ಮಾಸಗಳಲ್ಲಿ ವಿವಿಧ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಈ ತಿಂಗಳುಗಳಲ್ಲಿ ದೊರೆಯುವ ವಿವಿಧ ಸೊಪ್ಪು , ತರಕಾರಿಗಳ ಸಿಹಿ-ಖಾರ ಖಾದ್ಯಗಳನ್ನು ತಯಾರಿಸುವರು. ದೇವರಿಗೆ ನೈವೇದ್ಯ ಮಾಡಿ ಹಬ್ಬದಡುಗೆ ಹಂಚಿ ತಿನ್ನುವ ಪದ್ಧತಿ ಇದೆ. ಹೋಳಿಗೆ, ಕಡುಬು, ಪಡ್ಡು , ಚುರ್ಮಿ ಲಾಡು, ಎಳ್ಳುಂಡೆ ಇತ್ಯಾದಿ ಆರೋಗ್ಯದಾಯಕ ಖಾದ್ಯಗಳನ್ನು ಹಿತಮಿತವಾಗಿ ಸೇವಿಸಿ ಆರೋಗ್ಯ ಕಾಪಾಡಬಹುದು.

Advertisement

ಕಾಡು ಹಾಗಲ/ ಫಾಗಿಳ ಪೋಡಿ
ಬೇಕಾಗುವ ಸಾಮಗ್ರಿ: ಕಾಡುಹಾಗಲ 6-7, ಒಣ ಮೆಣಸಿನಕಾಯಿ ಹುಡಿ 4-5 ಚಮಚ, ರುಚಿಗೆ ಉಪ್ಪು, ಇಂಗಿನ ನೀರು- 1 ಚಮಚ, ಅರಸಿನ ಹುಡಿ- 1/4 ಚಮಚ, ಅಕ್ಕಿಹಿಟ್ಟು 4-5 ಚಮಚ, ಕರಿಯಲು ಎಣ್ಣೆ , ಬೊಂಬಾಯಿ ರವೆ 4-5 ಚಮಚ.

ತಯಾರಿಸುವ ವಿಧಾನ: ಕಾಡು ಹಾಗಲ ತೊಳೆದು ಉದ್ದಕ್ಕೆ ತುಂಡರಿಸಿ ಪಾತ್ರೆಯಲ್ಲಿ ಅರಸಿನ ಹುಡಿ, ಒಣಮೆಣಸಿನ ಹುಡಿ, ಅಕ್ಕಿಹಿಟ್ಟು , ಉಪ್ಪು , ಇಂಗಿನ ನೀರು ಹಾಕಿ ಚೆನ್ನಾಗಿ ಕಲಸಿ ತುಂಡರಿಸಿದ ಕಾಡು ಹಾಗಲಕ್ಕೆ ಸವರಿ ಹದಿನೈದು ನಿಮಿಷ ಇಡಿ. ಬಾಣಲೆಯಲ್ಲಿ ಎಣ್ಣೆ ಕಾದ ಮೇಲೆ ಕಾಡು ಹಾಗಲವನ್ನು ರವೆಯಲ್ಲಿ ಹೊರಳಿಸಿ ಐದಾರು ತುಂಡು ಹಾಕಿ ಹೊಂಬಣ್ಣ ಬರುವವರೆಗೆ ಕಾಯಿಸಿ ತೆಗೆಯಿರಿ.

ಗೋಧಿ ಗುಳಿ ಅಪ್ಪ / ಪಡ್ಡು
ಬೇಕಾಗುವ ಸಾಮಗ್ರಿ: ಗೋಧಿ- 1 ಕಪ್‌, ತೆಂಗಿನತುರಿ- 1 ಕಪ್‌, ಬೆಲ್ಲ- 1/2 ಕಪ್‌, ಅವಲಕ್ಕಿ- 1 ಕಪ್‌, ತುಪ್ಪ ಪಡ್ಡು ತೆಗೆಯಲು, ಚಿಟಿಕೆ ಉಪ್ಪು , ಏಲಕ್ಕಿ ಹುಡಿ.

ತಯಾರಿಸುವ ವಿಧಾನ: ಗೋಧಿಯನ್ನು ಹಿಂದಿನ ರಾತ್ರಿ ನೀರಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ತೊಳೆದು ನೀರು ಬಸಿದು ತೆಂಗಿನತುರಿ, ಬೆಲ್ಲ, ತೊಳೆದ ಅವಲಕ್ಕಿ ಹಾಕಿ ನಯವಾಗಿ ರುಬ್ಬಿ ಉಪ್ಪು ಏಲಕ್ಕಿ ಹುಡಿ ಬೆರೆಸಿರಿ. ಪಡ್ಡು ಕಾವಲಿ ಕಾದ ಮೇಲೆ ತುಪ್ಪ ಹಾಕಿ ಸೌಟಿನಿಂದ ಹಿಟ್ಟು ಹಾಕಿ ಹದ ಉರಿಯಲ್ಲಿ ಎರಡೂ ಬದಿ ಕಾಯಿಸಿ ತೆಗೆಯಿರಿ. ಅವಲಕ್ಕಿಯ ಬದಲು ಹೊದಲು ಹಾಕಬಹುದು.

Advertisement

ಎಳ್ಳುಂಡೆ
ಬೇಕಾಗುವ ಸಾಮಗ್ರಿ: ಎಳ್ಳು- 1 ಕಪ್‌, ಬೆಲ್ಲ- 1/2 ಕಪ್‌, ತುಪ್ಪ- 2 ಚಮಚ.

ತಯಾರಿಸುವ ವಿಧಾನ: ಎಳ್ಳನ್ನು ಮಣ್ಣು ಇಲ್ಲದಂತೆ ನೀರಿನಲ್ಲಿ ಗಾಳಿಸಿ ತೆಗೆದು ಬಟ್ಟೆಯ ಮೇಲೆ ಹರಡಿ ಒಣಗಿಸಿರಿ. ಬಾಣಲೆಯಲ್ಲಿ ಎಳ್ಳು ಹಾಕಿ ಹುರಿದು ತೆಗೆಯಿರಿ. ಅದೇ ಬಾಣಲೆಯಲ್ಲಿ ಸ್ವಲ್ಪ ನೀರು ಹಾಕಿ ಬೆಲ್ಲ ಹಾಕಿ ಹದ ಪಾಕ ಮಾಡಿ ಕೂಡಲೆ ಎಳ್ಳು ಬೆರೆಸಿರಿ. ಅಂಗೈಗೆ ತುಪ್ಪ ಹಚ್ಚಿ ಚಿಕ್ಕ ಚಿಕ್ಕ ಉಂಡೆ ಕಟ್ಟಿರಿ. ಆರೋಗ್ಯದಾಯಕ ಎಳ್ಳುಂಡೆ ಮಕ್ಕಳಿಗೂ, ಮಹಿಳೆಯರಿಗೂ ಉತ್ತಮ ಸಿಹಿ ಖಾದ್ಯ.
ಚುರ್ಮಿ ಲಾಡು/ಚುರ್ಮುಂಡೊ

ಬೇಕಾಗುವ ಸಾಮಗ್ರಿ: ಗೋಧಿಹಿಟ್ಟು- 1 ಕಪ್‌, ಬೊಂಬಾಯಿ ರವೆ- 4 ಚಮಚ, ಕಡಲೆಹಿಟ್ಟು- 2 ಚಮಚ, ಸಕ್ಕರೆ ಹುಡಿ- 3/4 ಕಪ್‌, ತುಪ್ಪ- 1/2 ಕಪ್‌, ಏಲಕ್ಕಿ ಹುಡಿ- 1 ಚಮಚ.

ತಯಾರಿಸುವ ವಿಧಾನ: ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಹಾಕಿ ಗೋಧಿಹಿಟ್ಟು , ರವೆ, ಕಡಲೆಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿದು ಸಕ್ಕರೆ ಹುಡಿ, ಏಲಕ್ಕಿ ಹಾಕಿ ಮಗುಚಿರಿ. ಅಂಗೈಗೆ ತುಪ್ಪ ಸವರಿ ಉಂಡೆ ಕಟ್ಟಿರಿ. ಕಟ್ಟಲು ಕಷ್ಟವಾದರೆ ತುಪ್ಪ ಜಾಸ್ತಿ ಹಾಕಬಹುದು ಇಲ್ಲವೆ ಬಿಸಿಹಾಲು ಹಾಕಬಹುದು. ಘಮ ಘಮ ಚುರ್ಮಿಲಾಡು ತಯಾರ್‌.

ಎಸ್‌. ಜಯಶ್ರೀ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next