ದಾವಣಗೆರೆ: ಆದಿ ಶಂಕರಾಚಾರ್ಯರು ಭೇಟಿ ನೀಡಿದ್ದ ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ನ.5ರಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿ ಕಾರಿ ಮಹಾಂತೇಶ್ ಜಿ. ಬೀಳಗಿ ತಿಳಿಸಿದರು.
ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ನ. 5 ರಂದು ಕೇದಾರನಾಥ ಕ್ಷೇತ್ರದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣ ಗೊಳಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ 12 ಜ್ಯೋತಿರ್ಲಿಂಗ 4 ಜ್ಯೋತಿಷ್ ಪೀಠಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಶಂಕರಾಚಾರ್ಯರು ಕರ್ನಾಟಕದಲ್ಲಿ ಭೇಟಿ ನೀಡಿದ್ದ ಐದು ಸ್ಥಳಗಳಲ್ಲಿ ಹರಿಹರವೂ ಒಂದು. ಆ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಂದು ಬೆಳಗ್ಗೆ 6,30 ರಿಂದ 9.20 ವರೆಗೆ ಆರತಿ,ವೇದಘೋಷ ಕಾರ್ಯಕ್ರಮ ನಡೆಯಲಿದೆ. ನಂತರ ಶಿವ ತಾಂಡವ, ಅರ್ಧನಾರೀಶ್ವರ, ಕೀರ್ತನ, ಶಿವಸ್ತುತಿ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು. ಪ್ರಧಾನ ಮಂತ್ರಿಗಳು ಕೇದಾರನಾಥದಲ್ಲಿ ಪಾಲ್ಗೊಳ್ಳುವ ಎಲ್ಲ ಕಾರ್ಯಕ್ರಮಗಳು ಬೃಹತ್ ಎಲ್.ಇ.ಡಿ.ಪರದೆಯಲ್ಲಿ ನೇರ ಪ್ರಸಾರಗೊಳ್ಳಲಿವೆ. ಅಂದು ಸಂಜೆ 5,30 ಕ್ಕೆ ಗೋಪೂಜೆ ನೆರವೇರಲಿದೆ.
ಹರಿಹರೇಶ್ವರಸ್ವಾಮಿಗೆ ವಿಶೇಷ ಅಲಂಕಾರದೊಂದಿಗೆ ದೇವಸ್ಥಾನದ ಆವರಣದ ವಿಶೇಷ ವೇದಿಕೆಯಲ್ಲಿ ವಿವಿಧ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ ಎಂದು ಮಾಹಿತಿ ನೀಡಿದರು. ಅಪರ ಜಿಲ್ಲಾಧಿ ಕಾರಿ ಪೂಜಾರ ವೀರಮಲ್ಲಪ್ಪ, ಹರಿಹರ ತಹಶೀಲ್ದಾರ್ ಕೆ.ಎಚ್. ರಾಮಚಂದ್ರಪ್ಪ, ಹರಿಹರ ಪೌರಾಯುಕ್ತೆ ಲಕ್ಷ್ಮಿ,ಪುರಾತತ್ವ ಇಲಾಖೆಯ ಸು ಧೀರ್, ತಾರಾನಾಥ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಬಿ. ಪಾಲಾಕ್ಷ ಹಾಗೂ ಬ್ರಾಹ್ಮಣ ಸಮಾಜದ ಪ್ರತಿನಿಧಿಗಳು ಇದ್ದರು.