ಹೊಸದಿಲ್ಲಿ: ಗುರುವಾರ ಇಹಲೋಕ ತ್ಯಜಿಸಿರುವ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ಸಂಸ್ಕಾರ ಶುಕ್ರವಾರ ನಡೆಯುತ್ತಿದ್ದು ಲಕ್ಷಾಂತರ ಜನರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ವಿಶೇಷವಾಗಿ ನೆರೆ ರಾಷ್ಟ್ರಗಳಾದ ಪಾಕಿಸ್ಥಾನ, ಶ್ರೀಲಂಕಾ, ಭೂತಾನ್, ನೇಪಾಳ ಸರ್ಕಾರಗಳು ವಿಶೇಷ ಪ್ರತಿನಿಧಿಗಳನ್ನು ಅಂತಿಮ ನಮನ ಸಲ್ಲಿಸಲು ಕಳುಹಿಸಿ ಅಜಾತಶತ್ರುವಿಗೆ ಗೌರವ ಸಲ್ಲಿಸಿವೆ.
ಪಾಕಿಸ್ಥಾನದ ಕಾನೂನು ಸಚಿವ ಅಲಿ ಜಫರ್ ಅವರ ನೇತೃತ್ವದ ನಿಯೋಗ ಅಂತಿಮ ನಮನ ಸಲ್ಲಿಸಲು ದೆಹಲಿಯತ್ತ ಪ್ರಯಾಣ ಬೆಳೆಸಿರುವ ಬಗ್ಗೆ ವರದಿಯಾಗಿದೆ.
ಭೂತಾನ್ ದೊರೆ ಜಿಗ್ಮೆ ಖೇಸರ್ ನಮ್ಜಿಲ್ ವಾಂಗ್ಚುಕ್ ಅವರು ಅಂತಿಮ ನಮನ ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ.
ಶ್ರೀಲಂಕಾದಿಂದ ವಿದೇಶಾಂಗ ಸಚಿವ ಲಕ್ಷ್ಮಣ್ ಕಿರಿಯೆಲ್ಲಾ , ನೇಪಾಳದಿಂದ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಾಲಿ, ಬಾಂಗ್ಲಾದೇಶದಿಂದ ವಿದೇಶಾಂಗ ಸಚಿವ ಮಹಮೂದ್ ಅಲಿ ಅವರು ಆಗಮಿಸುತ್ತಿದ್ದಾರೆ.
ಕೃಷ್ಣ ಮೆನನ್ ಮಾರ್ಗ್‌ನಲ್ಲಿರುವ ಅಟಲ್ ಜೀ ಅವರ ನಿವಾಸದಿಂದ ಪಾರ್ಥಿವ ಶರೀರವನ್ನು ಪುಷ್ಪಾಲಂಕೃತ ಸೇನಾ ವಾಹನದಲ್ಲಿ ಮಿಲಿಟರಿ ಬ್ಯಾಂಡ್ ಮತ್ತು ಪಥಸಂಚಲನದೊಂದಿಗೆದೀನ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಕಚೇರಿಗೆ ತಂದು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಸ್ತೆಯ ಇಕ್ಕೆಲದಲ್ಲಿ ನಿಂತಿರುವ ಸಾವಿರಾರು ಮಂದಿ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.
ಮಧ್ಯಾಹ್ನ 1.30ರವರೆಗೆ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಾಜ್‌ಘಾಟ್ ಸಮೀಪದ ರಾಷ್ಟ್ರೀಯ ಸ್ಮತಿ ಸ್ಥಳದಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಟಲ್‌ರ ಅಂತ್ಯಸಂಸ್ಕಾರ ನಡೆಯಲಿದೆ. ಅಂತ್ಯಕ್ರಿಯೆ ವೇಳೆ ಸುಮಾರು 5 ಲಕ್ಷ ಜನ ಭಾಗಿಯಾಗುವ ಸಾಧ್ಯತೆಗಳಿವೆ.