Advertisement
ರೈತನ ಉತ್ಪನ್ನಗಳಿಗೆ ನ್ಯಾಯವಾದ ಬೆಲೆ ಸಿಕ್ಕರೆ ಕೃಷಿ ಲಾಭದಾಯಕವಾಗಲಿದೆ. ಕೃಷಿ ಕಾರ್ಮಿಕರು, ವ್ಯಾಪಾರಿಗಳು, ಕೃಷಿ ಉದ್ಯಮಿಗಳಲ್ಲಿ ಅಮೂಲಾಗ್ರ ಬದಲಾವಣೆ ತರಬೇಕಾಗಿದೆ. ರಾಜ್ಯದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಯನ್ನು ನಾವು ಕಂಡಿದ್ದೇವೆ. ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.
Related Articles
Advertisement
ಕೇಂದ್ರ ಸರ್ಕಾರದ ಈ ಸಾಲಿನ ಬಜೆಟ್‌ನಲ್ಲಿ ಕೃಷಿಗೆ ಶೇ.9.5 ರಷ್ಟು ಹಣ ಮೀಸಲಿಟ್ಟು, 2.83 ಲಕ್ಷ ಕೋಟಿ ಅನುದಾನವನ್ನು ಕೊಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬಗೆಗಿನ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಹಿಂದೆ ಕೃಷಿಗೆ ಶೇ.4.5 ರಷ್ಟು ಮಾತ್ರ ಹಣ ನೀಡಲಾಗಿತ್ತು ಎಂದು ವಿವರಿಸಿದರು.
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು, ಆಯವ್ಯಯ ಮಂಡನೆ ವೇಳೆ ಸುಮಾರು 25-30 ಕೃಷಿ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರ ಈ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಲಿದೆ ಎಂದು ವಿವರಿಸಿದ್ದಾರೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿ, ನಾಡಿನ ರೈತರು ಕೃಷಿಯಲ್ಲಿ ಸುಧಾರಣೆ ಕಂಡು ನೆಮ್ಮದಿಯಿಂದ ಬದುಕಬೇಕು. ಯಾವುದೇ ಕಾರಣಕ್ಕೂ ಧೃತಿಗೆಡದೆ ಆತ್ಮಸ್ಥೈರ್ಯದಿಂದ ಬದುಕಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರು ಹಾಗೂ ಬಡವರಿಗೆ ನೀಡಿರುವ ಕೊಡುಗೆ ಅಪಾರ. ಭೀಕರ ಮಳೆ ಹಾಗೂ ಅದರಿಂದಾದ ಪ್ರವಾಹ ಸಂದರ್ಭದಲ್ಲಿ ದೇಶದ ಯಾವುದೇ ರಾಜ್ಯಗಳು ನೀಡಿರದ ಅನುದಾನವನ್ನು ನೀಡಿ, ಸಂತ್ರಸ್ತರ ನೆಮ್ಮದಿ ಜೀವನ್ಕಕಾಗಿ ಶ್ರಮಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಚಿವರಾದ ಬಿ.ಸಿ.ಪಾಟೀಲ್, ಕೆ.ಸಿ.ನಾರಾಯಣಗೌಡ, ಶಾಸಕರಾದ ಎಲ್.ನಾಗೇಂದ್ರ, ನಿರಂಜನ್ ಕುಮಾರ್ ,ಉದ್ಯಮಿ ವಿಜಯ ಸಂಕೇಶ್ವರ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಬಜೆಟ್‌ನಲ್ಲಿ ಕೃಷಿ, ನೀರಾವರಿಗೆ ಆದ್ಯತೆ: ಮಾರ್ಚ್ 5ರಂದು ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಕೃಷಿ ಮತ್ತು ನೀರಾವರಿ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ.5ರಂದು ಆಯವ್ಯಯ ಮಂಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಮಾ.3ರೊಳಗೆ ಬಜೆಟ್‌ಗೆ ಅಂತಿಮ ರೂಪ ಸಿಗಲಿದ್ದು, ರೈತಪರವಾದ ಬಜೆಟ್ ಮಂಡಿಸಲಾಗುವುದು ಎಂದರು.
ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಳಸಾ-ಬಂಡೂರಿ ನಾಲಾ ಯೋಜನೆಗಳಿಗೆ ಇದ್ದ ಅಡೆತಡೆ ನಿವಾರಣೆ ಆಗಿರುವುದು ಸಂತೋಷದ ಸಂಗತಿ. ಅದಕ್ಕೆ ಹಣ ತೆಗೆದಿಟ್ಟು, ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪ್ರಾರಂಭ ಮಾಡುವುದು ನನ್ನ ಮೊದಲ ಆದ್ಯತೆ. ಆದ್ದರಿಂದ ಈ ಯೋಜನೆಗಳಿಗೆ ಕೂಡಲೇ ಚಾಲನೆ ನೀಡಲಾಗುವುದು ಎಂದು ಹೇಳಿದರು.
ನೆರೆ ಹಾಗೂ ಬರ ಸಂತ್ರಸ್ತರಿಗೆ ಈಗಾಗಲೇ ಶಕ್ತಿ ಮೀರಿ ಪರಿಹಾರ ಕ್ರಮ ಕೈಗೊಂಡಿದ್ದೇವೆ. ಎಲ್ಲಾದರೂ ಲೋಪ ಕಂಡುಬಂದಲ್ಲಿ ಸರಿಪಡಿಸಲಾಗುವುದು ಎಂದರು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುವ ಅನುದಾನದಲ್ಲಿ ಎಷ್ಟು ಖೋತಾ ಆಗಿದೆ ಎಂಬುದನ್ನು ಲೆಕ್ಕ ಹಾಕುತ್ತಿದ್ದೇವೆ. ಅದನ್ನೆಲ್ಲ ಸರಿದೂಗಿಸಿಕೊಂಡು ಬಜೆಟ್ ಸಿದ್ಧಪಡಿಸುತ್ತೇವೆ ಎಂದು ತಿಳಿಸಿದರು.