ಮಹಾನಗರ: ಡ್ರಗ್ಸ್, ರೌಡಿಸಂ ಚಟುವಟಿಕೆಗಳ ಮೇಲೆ ವಿಶೇಷ ನಿಗಾ ಇಡುವ ಸಲುವಾಗಿ ಮಂಗಳೂರು ಕಮಿಷನರೆಟ್ ವ್ಯಾಪ್ತಿಯ ಉಳ್ಳಾಲ, ಕೊಣಾಜೆ, ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಡ್ರಗ್ಸ್ ಮತ್ತು ರೌಡಿ ನಿಗ್ರಹ ದಳ ರಚಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಯು. ಟಿ. ಖಾದರ್ ತಿಳಿಸಿದ್ದಾರೆ.
ಜುಬೇರ್ ಕೊಲೆ:ಗಂಭೀರ ಪರಿಗಣನೆ
ನಗರದ ಸರ್ಕಿಟ್‌ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ನಡೆದ ಜುಬೇರ್ ಕೊಲೆ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಟಾರ್ಗೆಟ್ ಗ್ಯಾಂಗ್ ಸಹಿತ ಈ ಪ್ರಕರಣದಲ್ಲಿ ಯಾರೇ ಆರೋಪಿಯಾಗಿದ್ದರೂ ಶೀಘ್ರ ಪತ್ತೆ ಹಚ್ಚಲಾಗುವುದು. ಈ ಸಂಬಂಧ ಈಗಾಗಲೇ ಡಿಸಿಪಿ, ಎಸಿಪಿ ಸಹಿತ ಅಧಿಕಾರಿಗಳ ಸಭೆ ನಡೆಸಿ ಸಮಾಲೋಚಿಸಲಾಗಿದೆ ಎಂದು ಹೇಳಿದರು.
ಈ ಕೊಲೆಗಳ ಹಿಂದಿರುವ ಮಾದಕ ದ್ರವ್ಯ, ರೌಡಿಸಂ ಚಟುವಟಿಕೆಗಳನ್ನು ಸಂಪೂರ್ಣ ಮಟ್ಟಹಾಕಲು ಇಲಾಖೆ ಕಾರ್ಯಾಚರಣೆ ನಡೆಸಬೇಕಾಗಿದೆ. ಇದಕ್ಕಾಗಿ ಸುಮಾರು 7 ಮಂದಿ ಸಿಬಂದಿ, ಅಧಿಕಾರಿಗಳನ್ನೊಳಗೊಂಡ ರೌಡಿ, ಡ್ರಗ್ಸ್ ನಿಗ್ರಹದಳ ರಚಿಸಲು ತಿಳಿಸಲಾಗಿದೆ ಎಂದು ಅವರು ತಿಳಿಸಿದರು.
ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು ಸಹಿತ ಗಣ್ಯರು ಉಪಸ್ಥಿತರಿದ್ದರು.